ಹೊಸದಿಲ್ಲಿ: ಡೀಪ್‌ಫೇಕ್ (DeepFake) ಫೋಟೋ ಅಥವಾ ವಿಡಿಯೋಗಳ ಪೋಸ್ಟಿಂಗ್‌ಗೆ ಸಂಬಂಧಿಸಿ ಭಾರತೀಯ ಐಟಿ ಕಾನೂನುಗಳು (IT Rules) ಮತ್ತು ನಿಬಂಧನೆಗಳಿಗೆ ಬದ್ಧವಾಗಿ ತಮ್ಮ ತಮ್ಮ ಸೇವಾ ನಿಯಮಗಳು ಮತ್ತು ಇತರ ನೀತಿಗಳನ್ನು ಹೊಂದಿಸಿಕೊಳ್ಳಲು ಸೋಶಿಯಲ್ ಮೀಡಿಯಾ (Social media) ವೇದಿಕೆಗಳಿಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ನವೆಂಬರ್ 24ರಂದು ಎಲ್ಲ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಈ ಬಗ್ಗೆ ಏಳು ದಿನಗಳ ಕಾಲಾವಕಾಶ ನೀಡುವುದಾಗಿ ಘೋಷಿಸಿದೆ. ಡೀಪ್‌ಫೇಕ್ ಕುರಿತು ಸಾಮಾಜಿಕ ವೇದಿಕೆಗಳೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ (MeitY) ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಇದನ್ನು ತಿಳಿಸಿದ್ದಾರೆ.
ಆಕ್ಷೇಪಾರ್ಹ ಡೀಪ್‌ಫೇಕ್ ಕಂಟೆಂಟ್ ಪ್ರಸ್ತುತ ಐಟಿ ನಿಯಮಗಳ ಅಡಿಯಲ್ಲಿ ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡಬಹುದು ಎಂದು ಚಂದ್ರಶೇಖರ್ ಹೇಳಿದ್ದಾರೆ. ಇದರ ಪ್ರಕಾರ ಇಂಥ ಕಂಟೆಂಟ್‌ಗಳ ಬಗ್ಗೆ ಬಳಕೆದಾರರ ದೂರುಗಳನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ಕಂಟೆಂಟ್‌ಗಳನ್ನು ಫ್ಲಾಟ್‌ಫಾರಂಗಳು ತೆಗೆದುಹಾಕಬೇಕು. ಈ ಥರದ 12 ಬಗೆಯ ಕಂಟೆಂಟ್‌ಗಳಿವೆ. ಇದು ಕಡ್ಡಾಯ. ಈ ಕಾನೂನುಗಳನ್ನು ಅನುಸರಿಸಲು ನಾವು ಅವರನ್ನು ಕೇಳುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಐಟಿ ನಿಯಮಗಳ ಅಡಿಯಲ್ಲಿ ನಿಯಮ ಉಲ್ಲಂಘನೆಗಳ ಮೇಲೆ ಸರ್ಕಾರ 100 ಪ್ರತಿಶತದಷ್ಟು ಕ್ರಮ ತೆಗೆದುಕೊಳ್ಳುತ್ತದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಡೀಪ್‌ಫೇಕ್‌ಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ಗಳನ್ನು ಸಲ್ಲಿಸಲು ತೊಂದರೆಗೊಳಗಾದ ಬಳಕೆದಾರರಿಗೆ ಸಹಾಯ ಮಾಡುತ್ತದೆ. ನಿಯಮ 7ರ ಅಡಿಯಲ್ಲಿ, ಡೀಪ್‌ಫೇಕ್‌ಗಳ ಬಗ್ಗೆ ಬಳಕೆದಾರರು ತಮ್ಮ ದೂರುಗಳನ್ನು ಸಲ್ಲಿಸಲು ಯಾಂತ್ರಿಕ ವ್ಯವಸ್ಥೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲಾಗುವುದು ಎಂದು ಚಂದ್ರಶೇಖರ್ ಹೇಳಿದರು. ಅಂತಹ ಸಂದರ್ಭಗಳಲ್ಲಿ ಎಫ್‌ಐಆರ್‌ಗಳನ್ನು ಸಲ್ಲಿಸಲು MeitY ಬಳಕೆದಾರರಿಗೆ ಸಹಾಯ ಮಾಡಲಿದೆ.
ಡೀಪ್‌ಫೇಕ್‌ಗಳನ್ನು ನಿಭಾಯಿಸಲು ಮೀಸಲಾಗಿರುವ ನಿಯಂತ್ರಣ ವ್ಯವಸ್ಥೆಯ ಕೆಲಸವನ್ನು ಸರ್ಕಾರ ಪ್ರಾರಂಭಿಸಿದ ಒಂದು ದಿನದ ನಂತರ ಇದು ಬಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ನವೆಂಬರ್ 23ರಂದು ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಸಭೆ ನಡೆಸಿ ಇದನ್ನು ಘೋಷಿಸಿದ್ದರು. ಇತ್ತೀಚೆಗೆ ತಪ್ಪು ಮಾಹಿತಿ ಹರಡುವಂಥ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಹಲವಾರು ಘಟನೆಗಳು ಕಂಡುಬಂದಿದ್ದವು. ನಟಿ ರಶ್ಮಿ ಮಂದಣ್ಣ ಮತ್ತಿತರರ ಡೀಪ್‌ಫೇಕ್ ವಿಡಿಯೋಗಳು ವೈರಲ್ ಆಗಿದ್ದವು. ಹೀಗಾಗಿ ಇದರ ಬಗ್ಗೆ ಕಳವಳ ಹೆಚ್ಚುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕೂಡ ಇದರ ಬಗ್ಗೆ ಕಳವಳ ತೋರಿಸಿದ್ದರು.
ಇದನ್ನೂ ಓದಿ: Deepfake: ಡೀಪ್‌ಫೇಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್