— ಗಿರೀಶ್ ಲಿಂಗಣ್ಣ
ವ್ಯಾಕ್ಯೂಮ್ ಬಾಂಬ್ ಅಥವಾ ಥರ್ಮೋಬೇರಿಕ್ ಆಯುಧಗಳು ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಮೊದಲ ಹಂತದಲ್ಲಿ ಇದು ದಹನಕಾರಿ ವಸ್ತುಗಳ ದಟ್ಟ ಮೋಡವನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಇದು ಇಂಧನ ಅಥವಾ ಅಲ್ಯೂಮಿನಿಯಂನಂತಹ ಲೋಹದ ಸಣ್ಣ ಕಣಗಳನ್ನು ಒಳಗೊಂಡಿರುತ್ತದೆ. ಎರಡನೇ ಹಂತದಲ್ಲಿ ಒಂದು ಸ್ಫೋಟ ನಡೆಯುತ್ತದೆ. ಈ ಸ್ಫೋಟ ಒಂದು ಬೃಹತ್ ಬೆಂಕಿಯ ಚೆಂಡು ಮತ್ತು ಶಾಕ್ ವೇವ್‌ಗಳನ್ನು ಉಂಟು ಮಾಡುತ್ತದೆ. ಇದು ಮೊದಲ ಹಂತದ ದಹನಕಾರಿ ವಸ್ತುಗಳನ್ನು ಸುಡುತ್ತಾ, ಎಲ್ಲೆಡೆ ಬೆಂಕಿ ಹರಡುತ್ತದೆ.
ಈ ಸ್ಫೋಟ ಒಂದು ರೀತಿ ಕಲ್ಲಿದ್ದಲು ಗಣಿಗಳಲ್ಲಿ ಅಥವಾ ಹಿಟ್ಟಿನ ಗಿರಣಿಗಳಲ್ಲಿ ಆಕಸ್ಮಿಕವಾಗಿ ನಡೆಯುವ ಧೂಳಿನ ಸ್ಫೋಟದಂತೆ ಕಂಡುಬರುತ್ತದೆ. ಆ ಧೂಳಿನ ಸ್ಫೋಟಗಳಲ್ಲಿ ಸುಲಭವಾಗಿ ಬೆಂಕಿ ಹಿಡಿಯುವ ಕಣಗಳು ಗಾಳಿಯಲ್ಲಿ ಎಲ್ಲೆಡೆ ಚದುರಿ, ಬಳಿಕ ಬೆಂಕಿ ಹತ್ತಿಕೊಂಡು, ಬೃಹತ್ ಪ್ರಮಾಣದ ಸ್ಫೋಟ ಉಂಟಾಗುವಂತೆ ಮಾಡುತ್ತವೆ.
ಥರ್ಮೋಬೇರಿಕ್ ಆಯುಧಗಳನ್ನು ವ್ಯಾಕ್ಯುಮ್ ಬಾಂಬ್ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಈ ಸ್ಫೋಟ ಉಪಕರಣದ ಸುತ್ತಲೂ ಇರುವ ಆಮ್ಲಜನಕವನ್ನು ಸಂಪೂರ್ಣವಾಗಿ ಹೀರಿಬಿಡುತ್ತದೆ. ಈ ರೀತಿ ಆದಾಗ ಸ್ಫೋಟದ ಸ್ಥಳದಲ್ಲಿ ಉಳಿದ ವ್ಯಕ್ತಿಗಳು ಉಸಿರಾಡಲೂ ಸಾಧ್ಯವಾಗದಂತೆ ಮಾಡಿ, ಉಸಿರುಕಟ್ಟಿ ಸಾಯುವಂತೆ ಮಾಡುತ್ತದೆ. ಉಸಿರು ಕಟ್ಟಿಸುವುದು ಮಾತ್ರವಲ್ಲದೆ, ಈ ಸ್ಫೋಟದ ಸಂದರ್ಭದಲ್ಲಿ ಉಂಟಾಗುವ ಒತ್ತಡ ಆ ಪ್ರದೇಶದಲ್ಲಿ ಇರುವ ವ್ಯಕ್ತಿಗಳನ್ನು ಸಾಯುವಂತೆ ಮಾಡಿಬಿಡುತ್ತದೆ. ಅದು ಮನುಷ್ಯರ ದೇಹದ ಪ್ರಮುಖ ಅಂಗಗಳನ್ನೂ ಹಾನಿಗೊಳಿಸುತ್ತದೆ. ಉದಾಹರಣೆಗೆ ಅದು ಶ್ವಾಸಕೋಶವನ್ನೇ ಹಾಳುಗೆಡವುತ್ತದೆ.
ಇದನ್ನೂ ಓದಿ | ಸಮರಾಂಕಣ | ಅಗ್ನಿ 5 ಕ್ಷಿಪಣಿ: ಭಾರತದ ಬತ್ತಳಿಕೆಯಲ್ಲಿದೆ ಐಸಿಬಿಎಂ ಅಸ್ತ್ರ
ಥರ್ಮೋಬೇರಿಕ್ ಆಯುಧಗಳ ಪರಿಣಾಮ ಯಾವದೇ ಸಾಂಪ್ರದಾಯಿಕ ಬಾಂಬ್‌ಗಿಂತ ಹೆಚ್ಚಾಗಿರುತ್ತದೆ. ಈ ಸ್ಫೋಟ ಬಹಳ ದೀರ್ಘಕಾಲ ನಡೆಯುತ್ತದೆ ಮಾತ್ರವಲ್ಲದೆ ಆ ಸ್ಫೋಟದ ತಾಪಮಾನವೂ ಅತ್ಯಂತ ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ, ಈ ಆಯುಧಗಳು ಬಹುದೊಡ್ಡ ಭೂ ಪ್ರದೇಶವನ್ನೂ ನಾಶಪಡಿಸಬಲ್ಲವು, ಕಟ್ಟಡಗಳನ್ನು ಧ್ವಂಸಗೊಳಿಸಬಲ್ಲವು. ಇದರಲ್ಲಿ ಸೃಷ್ಟಿಯಾಗುವ ಅತ್ಯಂತ ಗರಿಷ್ಠ ಪ್ರಮಾಣದ ತಾಪಮಾನದಲ್ಲಿ ಮಾನವ ದೇಹವೂ ಆವಿಯಾಗಿ ಹೋಗುವ ಸಾಧ್ಯತೆಗಳಿವೆ. ಅದರೊಡನೆ ಥರ್ಮೋಬೇರಿಕ್ ಆಯುಧಗಳಲ್ಲಿ ಬಳಸುವ ಉಪಕರಣಗಳು ಸಾಮಾನ್ಯವಾಗಿ ಅತ್ಯಂತ ವಿಷಕಾರಿಯಾಗಿದ್ದು, ರಾಸಾಯನಿಕ ಆಯುಧಗಳಷ್ಟೇ ಅಪಾಯಕಾರಿಯಾಗಿರುತ್ತವೆ.
ಥರ್ಮೋಬೇರಿಕ್ ಆಯುಧಗಳು ಭಾರೀ ಶಸ್ತ್ರಸಜ್ಜಿತ ಸೇನೆಯ ವಿರುದ್ಧ ಅತ್ಯಂತ ಪರಿಣಾಮಕಾರಿ ಎನ್ನಲಾಗುವುದಿಲ್ಲ. ಆದ್ದರಿಂದ ಅವುಗಳನ್ನು ಟ್ಯಾಂಕ್‌ನಂತಹ ಗುರಿಗಳ ವಿರುದ್ಧ ಬಳಸಿಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಮೂಲಭೂತ ಸೌಕರ್ಯಗಳನ್ನು ನಾಶಪಡಿಸಲು, ಸೇನಾಪಡೆಗಳನ್ನು ಹಾಗೂ ನಾಗರಿಕರನ್ನು ಸಂಹರಿಸಲು ಬಳಸಬಹುದಾಗಿದೆ.
ಇದನ್ನೂ ಓದಿ | ಸಮರಾಂಕಣ | ಭಾರತದ ನೌಕಾಸೇನೆಯಲ್ಲಿ ಸದ್ದಿಲ್ಲದ ಕ್ರಾಂತಿ- INS ವಿಕ್ರಾಂತ್