Site icon Vistara News

Digital Payment: ಗಮನಿಸಿ; ಡಿಸೆಂಬರ್‌ 31ರಿಂದ ಈ ಯುಪಿಐ ಖಾತೆಗಳು ಬಂದ್!

digital payment

digital payment

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯಾರೂ ಜೇಬಲ್ಲಿ ದುಡ್ಡು ಇಟ್ಟುಕೊಂಡ ಓಡಾಡುತ್ತಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಡಿಜಿಟಲ್‌ ಪೇಮೆಂಟ್‌ (Digital Payment)ನ ಪ್ರಮಾಣ ಹೆಚ್ಚಿದೆ. ಅದರಲ್ಲೂ ಏಕೀಕೃತ ಪಾವತಿ ವ್ಯವಸ್ಥೆ (Unified Payments Interface-UPI) ಡಿಜಿಟಲ್‌ ವಹಿವಾಟಿನಲ್ಲಿ ಕ್ರಾಂತಿ ಮಾಡಿದೆ. ಕಾರಿನಿಂದ ಹಿಡಿದು ತರಕಾರಿ ಕೊಳ್ಳುವವರೆಗೆ ಯುಪಿಐ ವಿಧಾನ ಬಳಸಲಾಗುತ್ತಿದೆ. ಈ ಮಧ್ಯೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಡಿಸೆಂಬರ್‌ 31ರಿಂದ ಕೆಲವೊಂದು ಯುಪಿಐ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಯಾವೆಲ್ಲ ಖಾತೆಗಳು ನಿಷ್ಕ್ರಿಯ?

ಈ ಬಗ್ಗೆ ನವೆಂಬರ್‌ 7ರಂದು ಎಲ್ಲ ಬಳಕೆದಾರರಿಗೆ ಸುತ್ತೋಲೆ ನೀಡಲಾಗಿದೆ. ಎನ್‌ಪಿಸಿಐ ನಿರ್ದೇಶನದ ಪ್ರಕಾರ, ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ಅಂದರೆ ಒಂದು ವರ್ಷದವರೆಗೆ ಯಾವುದೇ ವಹಿವಾಟುಗಳಿಲ್ಲದ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದಕ್ಕಾಗಿ ಡಿಸೆಂಬರ್ 31, 2023 ಅನ್ನು ಗಡುವು ನಿಗದಿಪಡಿಸಲಾಗಿದೆ. ಒಂದು ವರ್ಷದವರೆಗೆ ವ್ಯವಹಾರಕ್ಕಾಗಿ ತಮ್ಮ ಯುಪಿಐ ಐಡಿಯನ್ನು ಬಳಸದಿದ್ದರೆ ಅಂತಹ ವ್ಯಕ್ತಿ ಮತ್ತು ಅವರ ಬ್ಯಾಂಕ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ (ಗೂಗಲ್ ಪೇ, ಫೋನ್ ಪೇ, ಪೇಟಿಎಂ ಇತ್ಯಾದಿ)ಗೆ ಇಮೇಲ್ ಅಥವಾ ಸಂದೇಶವನ್ನು ಕಳುಹಿಸಿ ಎಚ್ಚರಿಸಲಾಗುತ್ತಿದೆ ಎಂದು ಎನ್‌ಪಿಸಿಐ ಹೇಳಿದೆ.

ಹಾಗಂತ ಚಿಂತಿಸಬೇಕಾಗಿಲ್ಲ. ಯುಪಿಐ ಖಾತೆ ರದ್ದಾಗದಂತೆ ನೋಡಿಕೊಳ್ಳುವುದು ಬಹಳ ಸುಲಭ. ಯುಪಿಐ ಐಡಿ ರದ್ದಾಗದಿರಲು 2023ರ ಡಿಸೆಂಬರ್ 31ರೊಳಗೆ ಅದನ್ನು ಬಳಸಿ ಕನಿಷ್ಠ ಒಂದಾದರೂ ವ್ಯವಹಾರ ಪೂರ್ಣಗೊಳಿಸಿದರೆ ಸಾಕು. ಕೆಲವೊಮ್ಮೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದಾಗ ಆ ನಂಬರ್‌ಗೆ ಲಿಂಕ್ ಮಾಡಲಾದ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲು ಮರೆತು ಹೋಗುವುದು ಈ ಸಮಸ್ಯೆಗೆ ಕಾರಣ.

ಎನ್‌ಪಿಸಿಐ ಹೇಳಿದ್ದೇನು?

ಇದನ್ನೂ ಓದಿ: Tata Technologies : ರಾಜ್ಯದಲ್ಲಿ ಟಾಟಾ ಟೆಕ್ನಾಲಜೀಸ್‌ನಿಂದ 2,000 ಕೋಟಿ ರೂ. ಹೂಡಿಕೆ

ಡಿಜಿಟಲ್‌ ಪಾವತಿ ವಿಧಾನಗಳಲ್ಲಿ ಸುರಕ್ಷಿತ ಮತ್ತು ಸುಭದ್ರ ವಹಿವಾಟನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. “ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಸುರಕ್ಷಿತ ಮತ್ತು ಸುಭದ್ರ ವಹಿವಾಟು ಅನುಭವವನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಮ್ಮ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯಗತ್ಯ. ಆದಾಗ್ಯೂ ಕೆಲವೊಂದು ಗ್ರಾಹಕರು ಹಿಂದಿನ ಸಂಖ್ಯೆಯನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ಬೇರ್ಪಡಿಸದೆ ಹೊಸ ಮೊಬೈಲ್ ಸಂಖ್ಯೆಗೆ ಬದಲಾಯಿಸಿರುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆʼʼ ಎಂದು ಎನ್‌ಪಿಸಿಐ ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version