Site icon Vistara News

DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

DRDO

DRDO

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಗುರುವಾರ (ಏಪ್ರಿಲ್‌ 18) ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪಣಿ (ITCM)ಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ (DRDO Test).

ಕ್ಷಿಪಣಿ ಹಾರಾಟದ ಪರೀಕ್ಷೆಯ ಎಲ್ಲ ಹಂತಗಳು ನಿರೀಕ್ಷೆಯಂತೆ ನಡೆದವು. ಹಾರಾಟ ಮಾರ್ಗದ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (Electro-Optical Tracking System) ಮತ್ತು ಟೆಲಿಮೆಟ್ರಿಯಂತಹ ಹಲವಾರು ಶ್ರೇಣಿ ಸಂವೇದಕಗಳನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕ್ಷಿಪಣಿಯ ಹಾರಾಟವನ್ನು ಐಎಎಫ್ ಸು-30-ಎಂಕೆ-I (IAF Su-30-Mk-I) ವಿಮಾನದ ಮೂಲಕವೂ ಮೇಲ್ವಿಚಾರಣೆ ನಡೆಸಲಾಯಿತು. “ಕ್ಷಿಪಣಿಯು ವೇಪಾಯಿಂಟ್ ನ್ಯಾವಿಗೇಷನ್ ಬಳಸಿ ನಿರೀಕ್ಷಿತ ಗುರಿಯನ್ನು ತಲುಪಿತು ಮತ್ತು ಅತ್ಯಂತ ಕಡಿಮೆ ಎತ್ತರದ ಹಾರಾಟ ನಡೆಸಿತು” ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಅಭಿವೃದ್ಧಿ

ವಿಶೇಷ ಎಂದರೆ ಇಡೀ ಕ್ಷಿಪಣಿ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಸಂಗಸಂಸ್ಥೆಯಾದ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ADE) ಅಭಿವೃದ್ಧಿಪಡಿಸಿದೆ. ಜತೆಗೆ ಇತರ ಪ್ರಯೋಗಾಲಯಗಳು ಮತ್ತು ಉದ್ದಿಮೆಗಳೂ ಈ ಮಹತ್ತರ ಕಾರ್ಯದಲ್ಲಿ ಕೈ ಜೋಡಿಸಿವೆ ಎಂದು ಮೂಲಗಳು ತಿಳಿಸಿವೆ. ಐಟಿಸಿಎಂನ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒವನ್ನು ಅಭಿನಂದಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪ ಯಶಸ್ವಿ ಅಭಿವೃದ್ಧಿಯು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಮುಖ ಮೈಲಿಗಲ್ಲಾಗಿದೆ” ಎಂದು ಹೇಳಿದ್ದಾರೆ. ಜತೆಗೆ ರಕ್ಷಣಾ ಇಲಾಖೆ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ.ಸಮೀರ್ ವಿ. ಕಾಮತ್ ಕೂಡ ಇಡೀ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ʼʼಐಟಿಸಿಎಂ ಕ್ಷಿಪಣಿಯು ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ಏವಿಯಾನಿಕ್ಸ್ ಮತ್ತು ಸಾಫ್ಟ್‌ವೇರ್‌ ಅನ್ನು ಸಹ ಹೊಂದಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಲಿಸ್ಟಿಕ್‌ ಕ್ಷಿಪಣಿ ಅಗ್ನಿ- ಪ್ರೈಮ್‌ ಯಶಸ್ವಿ ಪರೀಕ್ಷೆ

ಕೆಲವು ದಿನಗಳ ಹಿಂದೆ ಭಾರತವು ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಇದರ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಪರೀಕ್ಷೆಯು ಎಲ್ಲಾ ಪ್ರಯೋಗದ ಉದ್ದೇಶಗಳನ್ನು ಪೂರೈಸಿದ್ದು, ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ದೃಢೀಕರಿಸಿದೆ. ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ಶ್ರೇಣಿಯ ಸೆನ್ಸರ್‌ಗಳಿಂದ ಸೆರೆಹಿಡಿಯಲಾದ ಡೇಟಾಗಳು ಇದನ್ನು ದೃಢೀಕರಿಸಿವೆ.

“ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೊತೆಗೆ ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್‌ನ ಯಶಸ್ವಿ ಹಾರಾಟ- ಪರೀಕ್ಷೆಯನ್ನು ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಏಪ್ರಿಲ್ 3ರಂದು ಸುಮಾರು 7 ಗಂಟೆಗೆ ನಡೆಸಿತು,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Mission Divyastra : ಏನಿದು ಮಿಷನ್​ ದಿವ್ಯಾಸ್ತ್ರ, ಸೇನೆ ಸೇರಲಿರುವ ಹೊಸ ಅಸ್ತ್ರ? ಇಲ್ಲಿದೆ ಪೂರ್ಣ ಮಾಹಿತಿ

Exit mobile version