ಹೊಸದಿಲ್ಲಿ: ₹1 ಲಕ್ಷ ಕೋಟಿ ಹಣವನ್ನು ಸುಳ್ಳು ಕಂಪನಿಗಳ ಹೆಸರಿನಲ್ಲಿ ತೆರಿಗೆ ವಂಚಿಸಿ ಭಾರತದಿಂದಾಚೆಗೆ ಸಾಗಿಸಿದ ಚೀನಾ ಮೂಲದ (china company) ವಿವೊ ಮೊಬೈಲ್ ಕಂಪನಿಯ (Vivo smartphone) ಮೇಲೆ ಜಾರಿ ನಿರ್ದೇಶನಾಲಯ (Enforcement directorate) ತನಿಖೆ ನಡೆಸಿ (ED probe) ಚಾರ್ಜ್‌ಶೀಟ್ ಸಲ್ಲಿಸಿದೆ.
2014 ಮತ್ತು 2021ರ ನಡುವೆ ಭಾರತದಿಂದ ಹೊರಗೆ ₹1 ಲಕ್ಷ ಕೋಟಿ ಹಣವನ್ನು ರವಾನೆ ಮಾಡಲು ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED probe) ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ವಿರುದ್ಧ ಅಕ್ರಮ ಹಣ ವ್ಯವಹಾರ ತನಿಖೆಯಲ್ಲಿ ಚಾರ್ಜ್ ಶೀಟ್ (Charge sheet) ಸಲ್ಲಿಸಿದೆ. ಬುಧವಾರ ದೆಹಲಿಯ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ವಿವೋ ಕಂಪನಿ ಹಾಗೂ ಕಂಪನಿಯ ಹಲವು ಮುಖ್ಯಸ್ಥರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.
ವಿವೋಗೆ ಸಹಾಯ ಮಾಡಿದ ಆರೋಪ ಹೊತ್ತಿರುವ ಲಾವಾ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರೈ, ವಿವೋದ ಮನಿ ಲಾಂಡರಿಂಗ್ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಚೀನಾದ ಪ್ರಜೆ ಗುವಾಂಗ್ವೆನ್ ಕ್ಯಾಂಗ್ ಅಲಿಯಾಸ್ ಆಂಡ್ರ್ಯೂ ಕುವಾಂಗ್, ವಿವೊದಲ್ಲಿ ಕೆಲಸ ಮಾಡಿದ ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಗಾರ್ಗ್ ಮತ್ತು ಲಾವಾದ ಶಾಸನಬದ್ಧ ಲೆಕ್ಕಪರಿಶೋಧಕ ರಾಜನ್ ಮಲಿಕ್ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಚೀನೀ ಫೋನ್ ತಯಾರಕ ಕಂಪನಿ ವಿವೋ 2014ರಲ್ಲಿ ಭಾರತಕ್ಕೆ ಪ್ರವೇಶಿಸಿತು. ಇದು ವಿವಿಧ ನಗರಗಳಲ್ಲಿ 19 ನಕಲಿ ಕಂಪನಿಗಳನ್ನು ಹುಟ್ಟುಹಾಕಿದ್ದು, ಅದಕ್ಕೆ ಚೀನೀ ಪ್ರಜೆಗಳನ್ನು ನಿರ್ದೇಶಕರು ಮತ್ತು ಷೇರುದಾರರಾಗಿ ನಿಯೋಜಿಸಿತ್ತು. ಭಾರತೀಯರ ಯಾವುದೇ ನಿಯಂತ್ರಣ ಹೊಂದಿರಲಿಲ್ಲ. ಈ ಕಂಪನಿಗಳು ವಿವೋದ ಸಂಪೂರ್ಣ ವಹಿವಾಟನ್ನು ನಿಯಂತ್ರಿಸಿವೆ. ಕಂಪನಿಯ ವ್ಯವಹಾರದ ಬಗ್ಗೆ ಇಡಿ ಸಂಸ್ಥೆ 2022ರಲ್ಲಿ ತನಿಖೆ ಪ್ರಾರಂಭಿಸಿತ್ತು.
2014-15ರ ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ನೀತಿಯ ಪ್ರಕಾರ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರದಲ್ಲಿ 100% ವಿದೇಶಿ ಹೂಡಿಕೆಗೆ ಸರ್ಕಾರಿ ಅನುಮತಿ ಅಗತ್ಯವಾಗಿದೆ. ಆದರೆ ಸಗಟು ಕ್ಯಾಶ್ ಆಂಡ್ ಕ್ಯಾರಿ ವ್ಯವಹಾರಕ್ಕಾಗಿ ಸ್ವಯಂಚಾಲಿತವಾಗಿಯೇ 100% ಎಫ್‌ಡಿಐ ಅನ್ನು ಅನುಮತಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮೋದನೆ ಅಗತ್ಯವಿಲ್ಲ. “ಸರ್ಕಾರದ ಅನುಮತಿ ಪಡೆಯುವಿಕೆ ತಪ್ಪಿಸಲು, ವಿವೋ ತನ್ನ ನೈಜ ಮಾಲೀಕತ್ವ, ನಿಯಂತ್ರಣ ಮತ್ತು ಚಟುವಟಿಕೆಗಳ ಸ್ವರೂಪವನ್ನು ಮರೆಮಾಚಿ ಸಗಟು ಕ್ಯಾಶ್ ಆಂಡ್ ಕ್ಯಾರಿ ವ್ಯವಹಾರದ ಅಡಿಯಲ್ಲಿ ಭಾರತವನ್ನು ಪ್ರವೇಶಿಸಿದೆ. ಇದು ಭಾರತೀಯ ಸರ್ಕಾರಿ ಅಧಿಕಾರಿಗಳಿಂದ ನೈಜತೆ ಮರೆಮಾಚುವ ಚೀನಾದ ಕಂಪನಿಯ ಕ್ರಿಮಿನಲ್ ವ್ಯವಹಾರವಾಗಿದೆ” ಎಂದು ಇಡಿ ಅಕ್ಟೋಬರ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಇಡಿ ಸಂಸ್ಥೆಯು ಕಳೆದ ವರ್ಷ ಜುಲೈನಲ್ಲಿ ವಿವೋ ಕಚೇರಿಗಳು ಮತ್ತು ಸಹವರ್ತಿ ಕಂಪನಿಗಳ ಮೇಲೆ ದಾಳಿ ನಡೆಸಿತ್ತು. ವಿವೋ ತನ್ನ ಆರಂಭದಿಂದಲೂ (2014) ಭಾರತದಿಂದ ಹೊರಗೆ ₹1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ರವಾನೆ ಮಾಡಿದೆ ಎಂದು ಮನಿ ಲಾಂಡರಿಂಗ್ ತನಿಖೆ ಬಹಿರಂಗಪಡಿಸಿದೆ. ಈ ಭಾರತೀಯ ಕಂಪನಿಗಳ ಮೇಲೆ ವಿವೋ ಚೀನಾದ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ಬರದಂತೆ ನೋಡಿಕೊಂಡಿದೆ.
“2014-15ರಿಂದ 2019-20ರವರೆಗೆ ದಾಖಲಾತಿಗಳಲ್ಲಿ ವಿವೋ ಕಂಪನಿ ಯಾವುದೇ ಲಾಭವನ್ನು ತೋರಿಸಿಲ್ಲ ಮತ್ತು ಭಾರತದಲ್ಲಿ ಯಾವುದೇ ಆದಾಯ ತೆರಿಗೆ ಪಾವತಿಸಿಲ್ಲ. ಬೃಹತ್ ಮೊತ್ತವನ್ನು ಭಾರತದಿಂದ ಹೊರ ಸಾಗಿಸಲಾಗಿದೆ” ಎಂದು EDಯು ನ್ಯಾಯಾಲಯಕ್ಕೆ ತಿಳಿಸಿದೆ. ವಿವೋದ ಭಾರತೀಯ ಘಟಕಗಳ ಮೇಲೆ ಚೀನಾದ ನಿಯಂತ್ರಣವಿದೆ; ಚೀನಾದ ಮಾಲೀಕತ್ವ ಮತ್ತು ನಿಯಂತ್ರಣವನ್ನು ಭಾರತೀಯ ಅಧಿಕಾರಿಗಳಿಂದ ಮರೆಮಾಚಲಾಗಿದೆ ಎಂದು ಇಡಿ ತನಿಖೆ ಬಹಿರಂಗಪಡಿಸಿದೆ.
Vivo ಇಂಡಿಯಾದ ಸ್ಥಾಪಕ ಅಥವಾ ಮೊದಲ ನಿರ್ದೇಶಕನಾದ ಬಿನ್ ಲುವೊ ಚೀನಾದ ಪ್ರಜೆಯಾಗಿದ್ದು, ಭಾರತೀಯ 18 ಘಟಕಗಳ ಮೇಲಿನ ನಿಯಂತ್ರಣವನ್ನು ಹೊಂದಿದ್ದಾನೆ ಎಂದು ಕಂಡುಬಂದಿದೆ. ಲೆಕ್ಕದಲ್ಲಿ ಅವ್ಯವಹಾರಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಗರ್ಗ್ ಈತನಿಗೆ ಸಹಾಯ ಮಾಡಿದ್ದಾನೆ.
ತನಿಖೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿವೋ, “Vivo ತನ್ನ ನೈತಿಕ ತತ್ವಗಳಿಗೆ ದೃಢವಾಗಿ ಬದ್ಧವಾಗಿದೆ. ಇತ್ತೀಚಿನ ತನಿಖೆಯು ನಮ್ಮನ್ನು ಆಳವಾಗಿ ಕಳವಳಗೊಳಿಸಿದೆ. ಲಭ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ನಾವು ಚಲಾಯಿಸುತ್ತೇವೆʼʼ ಎಂದು ಹೇಳಿದೆ.
ಇದನ್ನೂ ಓದಿ: ‘ಫೆಮಾ’ ಉಲ್ಲಂಘಿಸಿದ ಬೈಜುಸ್‌ಗೆ 9000 ಕೋಟಿ ರೂ. ಪಾವತಿಸಲು ಇಡಿ ನೋಟಿಸ್!