Site icon Vistara News

Twitter Logo Changed: ಟ್ವಿಟರ್​​ನಲ್ಲಿ ಇದ್ದ ನೀಲಿ ಹಕ್ಕಿ ಹೋಯ್ತು, ನಾಯಿಮುಖ ಬಂತು; ಲೋಗೋವನ್ನೇ ಬದಲಿಸಿದ ಎಲಾನ್ ಮಸ್ಕ್​!

Elon Musk changed the logo of Twitter

#image_title

ನವ ದೆಹಲಿ: ಟ್ವಿಟರ್​ನ ನೂತನ ಸಿಇಒ ಎಲಾನ್​ ಮಸ್ಕ್​ (Elon Musk) ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅವರು ಕಳೆದ ವರ್ಷದ ಅಕ್ಟೋಬರ್​ನಲ್ಲಿ ಟ್ವಿಟರ್ ಕಂಪನಿಯನ್ನು ಖರೀದಿಸಿದ ಬಳಿಕವಂತೂ ಪ್ರತಿದಿನ ಅದಕ್ಕೆ ಸಂಬಂಧಪಟ್ಟ ಏನಾದರೂ ವಿಷಯ ಸುದ್ದಿಯಾಗುತ್ತಲೇ ಇದೆ. ಈಗ ಸಿಇಒ ಎಲಾನ್​ ಮಸ್ಕ್​ ಟ್ವಿಟರ್​​ನಲ್ಲಿ ಬಹುದೊಡ್ಡ ಬದಲಾವಣೆಯೊಂದನ್ನು ಮಾಡಿದ್ದಾರೆ. ಇಷ್ಟುದಿನ ಟ್ವಿಟರ್​​ಗೆ ಇದ್ದ ನೀಲಿ ಬಣ್ಣದ ಹಕ್ಕಿಯ ಲೋಗೋವನ್ನು ತೆಗೆದು, ನಾಯಿ ಮುಖವನ್ನು (Twitter Logo Changed) ಹಾಕಿದ್ದಾರೆ. ಶಿಬಾ ಇನು (Shiba Inu)ಕ್ರಿಪ್ಟೋ ಕರೆನ್ಸಿ ಮೇಲೆ ಇರುವ ನಾಯಿಯ ಮೀಮ್ಸ್​ ಚಿತ್ರವನ್ನೇ ಈಗ ಟ್ವಿಟರ್​​ನ ಲೋಗೋವನ್ನಾಗಿ ಬದಲಿಸಲಾಗಿದೆ.

ಎಲಾನ್​ ಮಸ್ಕ್​ ಅವರು ನಿನ್ನೆ ಮಧ್ಯರಾತ್ರಿ ತಮ್ಮ ಟ್ವಿಟರ್​ನಲ್ಲಿ ಒಂದು ವಿಚಿತ್ರ ಪೋಸ್ಟ್ ಹಾಕುವ ಮೂಲಕ, ಟ್ವಿಟರ್ ಲೋಗೋ ಬದಲಾಗಿದ್ದನ್ನು ದೃಢಪಡಿಸಿದ್ದಾರೆ. ‘ನಾಯಿಯೊಂದು (ಮೀಮ್ಸ್​) ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋಗುತ್ತದೆ. ಆಗ ಪೊಲೀಸ್ ಅಧಿಕಾರಿಯೊಬ್ಬ ಅದನ್ನು ಅಡ್ಡಗಟ್ಟಿ ಡ್ರೈವಿಂಗ್ ಲೈಸೆನ್ಸ್ ಕೇಳಿ ಪಡೆದು, ಅದನ್ನು ಚೆಕ್ ಮಾಡುತ್ತಾರೆ. ಆ ಲೈಸೆನ್ಸ್​​ನಲ್ಲಿ ನೀಲಿ ಬಣ್ಣದ ಹಕ್ಕಿಯ ಚಿತ್ರ ಇರುತ್ತದೆ. ಪೊಲೀಸ್ ಅಧಿಕಾರಿ ಅದನ್ನೇ ಪರಿಶೀಲನೆ ಮಾಡುತ್ತಿರುವಾಗ, ಕಾರಿನಲ್ಲಿದ್ದ ನಾಯಿ ‘ಅದು ಹಳೇ ಫೋಟೋ’ ಎಂದು ಹೇಳುವಂತೆ ಫೋಟೋ ರೂಪಿಸಲಾಗಿದೆ.

ಮೊಬೈಲ್​ ಆ್ಯಪ್​ನಲ್ಲಿ ಬದಲಾವಣೆ ಇಲ್ಲ
ಇಷ್ಟುದಿನ ಟ್ವಿಟರ್ ವೆಬ್​ ಆವೃತ್ತಿಯನ್ನು ತೆರೆದಾಗ ನೀಲಿ ಬಣ್ಣದ ಹಕ್ಕಿಯ ಚಿತ್ರ ಕಾಣುತ್ತಿತ್ತು. ಆದರೆ ಈಗ ಟ್ವಿಟರ್ ವೆಬ್​ ಆವೃತ್ತಿ ಓಪನ್​ ಮಾಡಿದರೆ ಅಲ್ಲಿ ನಾಯಿ ಮೀಮ್ಸ್ ಕಾಣಿಸುತ್ತಿದೆ. ವೆಬ್ ಆವೃತ್ತಿಯಲ್ಲಿ ಮಾತ್ರ ಈ ಬದಲಾವಣೆಯಾಗಿದ್ದು ಟ್ವಿಟರ್ ಮೊಬೈಲ್ ಆ್ಯಪ್​​ನಲ್ಲಿ ಏನೂ ಚೇಂಜ್ ಆಗಿಲ್ಲ. ಬಿಟ್​ಕಾಯಿನ್ ಮತ್ತು ಇನ್ನಿತರ ಕ್ರಿಪ್ಟೋಕರೆನ್ಸಿಗಳ ವಿರುದ್ಧ ಜೋಕ್ ಮಾಡಲು 2013ರಲ್ಲಿ ಬಿಲ್ಲಿ ಮಾರ್ಕಸ್, ಜಾಕ್ಸನ್ ಪಾಮರ್ ಎಂಬುವರು ಡಾಗ್​ಕಾಯಿನ್ ಕ್ರಿಪ್ಟೋಕರೆನ್ಸಿ ಹೊರತಂದರು. 2021ರಲ್ಲಿ ಎಲಾನ್​ ಮಸ್ಕ್​ ಅವರು ಈ ಡಾಗ್​ಕಾಯಿನ್​​ಗೆ ಉತ್ತೇಜನ ನೀಡಿದ್ದಲ್ಲದೆ, ಈ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ತಮ್ಮ ಟೆಸ್ಲಾ ಕಂಪನಿಯ ಉದ್ಯೋಗಿಗಳಿಗೂ ಶಿಫಾರಸು ಮಾಡಿದ್ದರು. ಇದೀಗ ಅದೇ ಡಾಗ್​ಕಾಯಿನ್​ ಚಿತ್ರವನ್ನೇ ತಮ್ಮ ಟ್ವಿಟರ್​ ಲೋಗೋವನ್ನಾಗಿ ಬದಲಿಸಿಬಿಟ್ಟಿದ್ದಾರೆ. ​

ಡಾಗ್​ಕಾಯಿನ್​ ಮೌಲ್ಯ ಏರಿಕೆ
ಎಲಾನ್​ ಮಸ್ಕ್​ ಅವರು ಕಳೆದ ವರ್ಷ ಟ್ವಿಟರ್ ಖರೀದಿ ಮಾಡಿದ ನಂತರದಿಂದಲೂ ಈ ಡಾಗ್​ಕಾಯಿನ್​ನ್ನು ಪ್ರಮೋಟ್​ ಮಾಡುತ್ತಿದ್ದಾರೆ. ಈಗಂತೂ ಟ್ವಿಟರ್​​ನಲ್ಲಿ ನಾಯಿ ಮುಖದ ಮೀಮ್ಸ್ ಹಾಕುತ್ತಿದ್ದಂತೆ ಡಾಗ್​ಕಾಯಿನ್ ಕ್ರಿಪ್ಟೋಕರೆನ್ಸಿ ಮೌಲ್ಯ ಶೇ.20ರಷ್ಟು ಏರಿಕೆಯಾಗಿದೆ. ಎಲಾನ್​ ಮಸ್ಕ್​ ಫೆಬ್ರವರಿ 15ರಂದು ಒಂದು ವಿಲಕ್ಷಣ ಪೋಸ್ಟ್ ಹಾಕಿಕೊಂಡಿದ್ದರು. ನಾಯಿಯೊಂದು ಕಪ್ಪು ಬಟ್ಟೆ, ಕನ್ನಡಕ ಹಾಕಿ ಸೀಟ್ ಮೇಲೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡು ‘ಟ್ವಿಟರ್​ನ ನೂತನ ಸಿಇಒ ಅದ್ಭುತವಾಗಿದ್ದಾರೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು. ಇದೀಗ ಅವರು ಟ್ವಿಟರ್​ನಲ್ಲಿ ಲೋಗೋ ಬದಲಿಸಿದ ಬೆನ್ನಲ್ಲೇ, ಅನೇಕರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

Exit mobile version