Site icon Vistara News

ಡೀಪ್‌ಫೇಕ್ ವಿಡಿಯೋ ತಡೆಯುವುದು ಸೋಷಿಯಲ್ ಮೀಡಿಯಾಗಳ ಜವಾಬ್ದಾರಿ

Social media must act against deepfake video Says Union Minister Rajeev Chandrashekhar

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ (rashmika mandanna) ಅವರು ಡೀಪ್‌ಫೇಕ್ ವಿಡಿಯೋ (Deepfake Video) ವೈರಲ್ ಆದ ಬೆನ್ನಲ್ಲೇ ದೇಶಾದ್ಯಂತ ಡೀಪ್‍ಫೇಕ್‌ ಕುರಿತು ಸಾಕಷ್ಟು ಚರ್ಚೆಗಳು ಶುರವಾಗಿವೆ. ಡೀಪ್‌ಫೇಕ್ ತಂತ್ರಜ್ಞಾನದ (Deepfake Technology) ದುರ್ಬಳಕೆಯ ಬಗ್ಗೆ ಆತಂಕಗಳ ವ್ಯಕ್ತವಾಗಿವೆ. ಈ ಡೀಪ್‍‌ಫೇಕ್ ವಿಡಿಯೋಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು (Central Government) ಭಾರತದಲ್ಲಿ ಸಕ್ರಿಯವಾಗಿರುವ ಸೋಷಿಯಲ್ ಮೀಡಿಯಾಗಳು (Social Media) ಕಂಪನಿಗಳ ಜತೆ ಸಭೆ ನಡೆಸಿದೆ. ನವೆಂಬರ್ 24ರಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆಗೆ ಕೇಂದ್ರ ಸರ್ಕಾರವು ಸಭೆ ನಡೆಸಿದೆ. ಸದ್ಯ ಚಾಲ್ತಿಯಲ್ಲಿರುವ ಕಾನೂನುಗಳನ್ನು ಬಳಸಿಕೊಂಡು ಡೀಪ್‌ಫೇಕ್ ಮತ್ತು ಮತ್ತು ಅಂಥ ನಕಲಿ ವಿಡಿಯೋಗಳ ಪ್ರಸರಣ ತಡೆಯುವುದು ಹೇಗೆ ಎಂಬುದರ ಕುರಿತು ಚರ್ಚಿಲಾಗುವುದು ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಇಂಟರ್ನೆಟ್ ಸುರಕ್ಷತೆ ಮತ್ತು ಡೀಪ್‌ಫೇಕ್‌ ವಿಡಿಯೋ ಪ್ರಸರಣವನ್ನು ತಡೆಯುವುದು ಸೋಷಿಯಲ್ ಮೀಡಿಯಾ ವೇದಿಕೆಗಳ ಜವಾಬ್ದಾರಿಯಾಗಿದೆ. ಹಾಗಾಗಿ, ಭಾರತೀಯ ಕಾನೂನಿಗೆ ಅನುಗುಣವಾಗಿ ವೇದಿಕೆಗಳು ತಮ್ಮ ಕಂಟೆಂಟ್ ಅನ್ನು ನಿಯಂತ್ರಿಸಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ನವೆಂಬರ್ 24ರಂದು ನಾವು ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆ ಸಭೆ ನಡೆಸಿದ್ದೇವೆ. ಇಂಟರ್ನೆಟ್ ಸುರಕ್ಷತೆಯನ್ನು ಕೈಗೊಳ್ಳುವುದು ಮತ್ತು ಡೀಪ್‌ಫೇಕ್‌ ವಿಡಿಯೋಗಳ ಪ್ರಸರಣವನ್ನು ತಡೆಯುವುು ವೇದಿಕೆಗಳ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ತಿಳಿಸಿದ್ದೇವೆ. ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ, ಈ ಹೊಣೆಗಾರಿಕೆ ಆಯಾ ವೇದಿಕೆಗಳದ್ದೇ ಆಗಿರುತ್ತದೆ. ಒಂದೊಮ್ಮೆ, ಡೀಪ್‌ಫೇಕ್‌ ವಿಡಿಯೋಗಳನ್ನು ಕಿತ್ತುಹಾಕಲು ವಿಫಲರಾದರೆ, ಅಂಥ ವೇದಿಕೆಗಳ ವಿರುದ್ಧ ವಿಚಾರಣೆ ಮತ್ತು ಡೀಪ್‌ಫೇಕ್ ವಿಡಿಯೋ ರಿಮೂವ್ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರವು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ, ಆನ್‌ಲೈನ್‌ ವೇದಿಕೆಗಲ್ಲಿ ಡೀಪ್‌ಫೇಕ್‌ ವಿಡಿಯೋಗಳ ಕುರಿತು ತನಿಖೆ ನಡೆಸುವ ಬಗ್ಗೆ ವಿಶೇಷ ಅಧಿಕಾರಿಗೆ ಜವಾಬ್ದಾರಿಯನ್ನು ಸರ್ಕಾರ ವಹಿಸಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆನ್‌ಲೈನ್‌ನಲ್ಲಿ ಫೇಕ್‌ ಕಂಟೆಂಟ್ ಎಫ್ಐಆರ್ ದಾಖಲಿಸುವುದು ಸೇರಿದಂತೆ ಈ ಸಮಸ್ಯೆಗೆ ಸಂಬಂಧಿಸಿದಂತೆ ವಿಶೇಷ ಅಧಿಕಾರಿಯು ನಾಗರಿಕರೆ ನೆರವು ಒದಗಿಸಲಿದ್ದಾರೆ ಎಂದು ಹೇಳಲಾಗಿತ್ತು.

ಏಳು ದಿನಗಳ ಕಾಲಾವಕಾಶ

ಡೀಪ್‌ಫೇಕ್‌ (DeepFake) ಫೋಟೋ ಅಥವಾ ವಿಡಿಯೋಗಳ ಪೋಸ್ಟಿಂಗ್‌ಗೆ ಸಂಬಂಧಿಸಿ ಭಾರತೀಯ ಐಟಿ ಕಾನೂನುಗಳು (IT Rules) ಮತ್ತು ನಿಬಂಧನೆಗಳಿಗೆ ಬದ್ಧವಾಗಿ ತಮ್ಮ ತಮ್ಮ ಸೇವಾ ನಿಯಮಗಳು ಮತ್ತು ಇತರ ನೀತಿಗಳನ್ನು ಹೊಂದಿಸಿಕೊಳ್ಳಲು ಸೋಶಿಯಲ್‌ ಮೀಡಿಯಾ (Social media) ವೇದಿಕೆಗಳಿಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ನವೆಂಬರ್ 24ರಂದು ಎಲ್ಲ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಈ ಬಗ್ಗೆ ಏಳು ದಿನಗಳ ಕಾಲಾವಕಾಶ ನೀಡುವುದಾಗಿ ಘೋಷಿಸಿದೆ. ಡೀಪ್‌ಫೇಕ್‌ ಕುರಿತು ಸಾಮಾಜಿಕ ವೇದಿಕೆಗಳೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ (MeitY) ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಇದನ್ನು ತಿಳಿಸಿದ್ದಾರೆ.

ಆಕ್ಷೇಪಾರ್ಹ ಡೀಪ್‌ಫೇಕ್‌ ಕಂಟೆಂಟ್‌ ಪ್ರಸ್ತುತ ಐಟಿ ನಿಯಮಗಳ ಅಡಿಯಲ್ಲಿ ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡಬಹುದು ಎಂದು ಚಂದ್ರಶೇಖರ್ ಹೇಳಿದ್ದಾರೆ. ಇದರ ಪ್ರಕಾರ ಇಂಥ ಕಂಟೆಂಟ್‌ಗಳ ಬಗ್ಗೆ ಬಳಕೆದಾರರ ದೂರುಗಳನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ಕಂಟೆಂಟ್‌ಗಳನ್ನು ಫ್ಲಾಟ್‌ಫಾರಂಗಳು ತೆಗೆದುಹಾಕಬೇಕು. ಈ ಥರದ 12 ಬಗೆಯ ಕಂಟೆಂಟ್‌ಗಳಿವೆ. ಇದು ಕಡ್ಡಾಯ. ಈ ಕಾನೂನುಗಳನ್ನು ಅನುಸರಿಸಲು ನಾವು ಅವರನ್ನು ಕೇಳುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಐಟಿ ನಿಯಮಗಳ ಅಡಿಯಲ್ಲಿ ನಿಯಮ ಉಲ್ಲಂಘನೆಗಳ ಮೇಲೆ ಸರ್ಕಾರ 100 ಪ್ರತಿಶತದಷ್ಟು ಕ್ರಮ ತೆಗೆದುಕೊಳ್ಳುತ್ತದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಡೀಪ್‌ಫೇಕ್‌ಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ಗಳನ್ನು ಸಲ್ಲಿಸಲು ತೊಂದರೆಗೊಳಗಾದ ಬಳಕೆದಾರರಿಗೆ ಸಹಾಯ ಮಾಡುತ್ತದೆ. ನಿಯಮ 7ರ ಅಡಿಯಲ್ಲಿ, ಡೀಪ್‌ಫೇಕ್‌ಗಳ ಬಗ್ಗೆ ಬಳಕೆದಾರರು ತಮ್ಮ ದೂರುಗಳನ್ನು ಸಲ್ಲಿಸಲು ಯಾಂತ್ರಿಕ ವ್ಯವಸ್ಥೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲಾಗುವುದು ಎಂದು ಚಂದ್ರಶೇಖರ್ ಹೇಳಿದರು. ಅಂತಹ ಸಂದರ್ಭಗಳಲ್ಲಿ ಎಫ್‌ಐಆರ್‌ಗಳನ್ನು ಸಲ್ಲಿಸಲು MeitY ಬಳಕೆದಾರರಿಗೆ ಸಹಾಯ ಮಾಡಲಿದೆ.

ಡೀಪ್‌ಫೇಕ್‌ಗಳನ್ನು ನಿಭಾಯಿಸಲು ಮೀಸಲಾಗಿರುವ ನಿಯಂತ್ರಣ ವ್ಯವಸ್ಥೆಯ ಕೆಲಸವನ್ನು ಸರ್ಕಾರ ಪ್ರಾರಂಭಿಸಿದ ಒಂದು ದಿನದ ನಂತರ ಇದು ಬಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ನವೆಂಬರ್ 23ರಂದು ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಸಭೆ ನಡೆಸಿ ಇದನ್ನು ಘೋಷಿಸಿದ್ದರು. ಇತ್ತೀಚೆಗೆ ತಪ್ಪು ಮಾಹಿತಿ ಹರಡುವಂಥ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಹಲವಾರು ಘಟನೆಗಳು ಕಂಡುಬಂದಿದ್ದವು. ನಟಿ ರಶ್ಮಿ ಮಂದಣ್ಣ ಮತ್ತಿತರರ ಡೀಪ್‌ಫೇಕ್‌ ವಿಡಿಯೋಗಳು ವೈರಲ್ ಆಗಿದ್ದವು. ಹೀಗಾಗಿ ಇದರ ಬಗ್ಗೆ ಕಳವಳ ಹೆಚ್ಚುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕೂಡ ಇದರ ಬಗ್ಗೆ ಕಳವಳ ತೋರಿಸಿದ್ದರು.

ಈ ಸುದ್ದಿಯನ್ನೂ ಓದಿ: Deepfake: ಡೀಪ್‌ಫೇಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್

Exit mobile version