Site icon Vistara News

Google birthday: ಗೂಗಲ್‌ಗೆ 25 ವರ್ಷ; ಚಂದದ ಡೂಡಲ್‌ನೊಂದಿಗೆ ಸ್ವಾಗತಿಸಿದ ಕಂಪನಿ

google doodle

ಹೊಸದಿಲ್ಲಿ: ಎಲ್ಲರ ಮೆಚ್ಚಿನ ಸರ್ಚ್ ಇಂಜಿನ್ ಗೂಗಲ್‌ಗೆ (Google) ಬುಧವಾರ 25 ವರ್ಷ (Google birthday) ತುಂಬಿದೆ. ಗೂಗಲ್ ಚಂದದ ಡೂಡಲ್ (Google birthday doodle) ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.

ಡೂಡಲ್‌ನ ಜತೆಗೆ “ವಾಕ್ ಡೌನ್ ಮೆಮೊರಿ ಲೇನ್” ಎಂದು ಹಿಂದಿನ 25 ವರ್ಷಗಳ ತನ್ನ ಜನ್ಮದಿನದ ವಿಭಿನ್ನ ಡೂಡಲ್‌ಗಳನ್ನು ಪ್ರದರ್ಶಿಸಿದೆ. ಲೇಟೆಸ್ಟ್‌ ಡೂಡಲ್ ʼGoogle’ ಬದಲಿಗೆ ʼG25gle’ ಆಗಿ ಬರೆಯಲಾಗಿದೆ. ಇದು GIF ಆಗಿದ್ದು, ಅದನ್ನು ನೀವು ಕ್ಲಿಕ್ಕಿಸಿದರೆ ಮೇಲಿನಿಂದ ಬಣ್ಣದ ಕಾಗದಗಳ ಮಳೆಯಾಗುತ್ತದೆ.

ಗೂಗಲ್‌ ಕಂಪನಿಯು ಮೊದಲ ಏಳು ವರ್ಷಗಳಲ್ಲಿ ತನ್ನ ಜನ್ಮದಿನವನ್ನು ಸೆಪ್ಟೆಂಬರ್ 4ರಂದು ಆಚರಿಸಿತು. ನಂತರ ಸರ್ಚ್ ಇಂಜಿನ್ ಇಂಡೆಕ್ಸಿಂಗ್ ಮಾಡುತ್ತಿರುವ ದಾಖಲೆ ಸಂಖ್ಯೆಯ ಪುಟಗಳ ಪ್ರಕಟಣೆಯೊಂದಿಗೆ ಹೊಂದಿಕೆಯಾಗುವಂತೆ ಆಚರಣೆಗಳನ್ನು ಸೆಪ್ಟೆಂಬರ್ 27ಕ್ಕೆ ಬದಲಾಯಿಸಲು ನಿರ್ಧರಿಸಿತು. 1998ರಲ್ಲಿ ಸ್ಥಾಪನೆಯಾದ ಗೂಗಲ್‌ನ ಮೊಟ್ಟಮೊದಲ ಡೂಡಲ್, ನೆವಾಡಾದ ಬ್ಲ್ಯಾಕ್ ರಾಕ್ ಸಿಟಿಯ ದೀರ್ಘಾವಧಿಯ “ಬರ್ನಿಂಗ್ ಮ್ಯಾನ್” ಕಾರ್ಯಕ್ರಮದ ಬಗ್ಗೆ ಆಗಿತ್ತು.

ಸರ್ಚ್ ಇಂಜಿನ್‌ನ ಪ್ರಸ್ತುತ ಸಿಇಒ ಸುಂದರ್ ಪಿಚೈ ಅವರು ಅಕ್ಟೋಬರ್ 24, 2015ರಂದು ಕಂಪನಿಯ ನಿರ್ವಹಣೆ ವಹಿಸಿಕೊಂಡರು. ಡಿಸೆಂಬರ್ 3, 2019ರಂದು ಪಿಚೈ ಆಲ್ಫಾಬೆಟ್‌ನ ಸಿಇಒ ಕೂಡಾ ಆದರು.

ಕಳೆದ ತಿಂಗಳು, ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai) ಕಂಪನಿಯು ತನ್ನ 25ನೇ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಬ್ಲಾಗ್ ಪೋಸ್ಟ್‌ ಬರೆದಿದ್ದರು. ಮೊದಲ ಕಾಲು ಶತಮಾನವನ್ನು ಪ್ರತಿಬಿಂಬಿಸುತ್ತಾ, ಇನ್ನೂ ದೊಡ್ಡ ಪ್ರಮಾಣದಲ್ಲಿ ಮುಖ್ಯವಾದ ಕೆಲಸಗಳನ್ನು ಮಾಡಲು AI ಜೊತೆಗಿನ ಅವಕಾಶಗಳ ಕುರಿತು ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದರು.

“ಈ ತಿಂಗಳು, ಗೂಗಲ್ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಮೈಲಿಗಲ್ಲನ್ನು ತಲುಪುವುದು ದೊಡ್ಡ ಸಾಧನೆ. ನಮ್ಮ ಉತ್ಪನ್ನವನ್ನು ಬಳಸುವ ಜನರು ನಾವೀನ್ಯತೆಯನ್ನು ಮುಂದುವರಿಸಲು ನಮಗೆ ಸವಾಲು ಒಡ್ಡುತ್ತಾರೆ. ಆ ಉತ್ಪನ್ನವನ್ನು ನಿರ್ಮಿಸಲು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ನೂರಾರು ಸಾವಿರ ಗೂಗ್ಲರ್‌ಗಳು ಮತ್ತು ನಮ್ಮ ಪಾಲುದಾರರಿಗೆ ಇದು ಕೃತಜ್ಞತೆ ಸಲ್ಲಿಸುವ ಸಮಯ. ನಾವೀನ್ಯತೆ ಅತ್ಯಗತ್ಯ ಸತ್ಯವೆಂದರೆ ತಂತ್ರಜ್ಞಾನದ ಗಡಿಯನ್ನು ಮೀರುವ ಕ್ಷಣ. ಗೂಗಲ್ ನಮ್ಮ ಯಶಸ್ಸನ್ನು ಎಂದಿಗೂ ಲಘುವಾಗಿ ತೆಗೆದುಕೊಂಡಿಲ್ಲ. ನಾವಿನ್ನೂ ಹುಡುಕಾಟದಲ್ಲಿದ್ದೇವೆ. ಇನ್ನೂ ಹೆಚ್ಚಿನದನ್ನು ಮಾಡಬೇಕಾದ ಅಗತ್ಯವಿದೆ. ಖಂಡಿತವಾಗಿಯೂ ಗೂಗಲ್ ಇಂದು ಸರ್ಚ್‌ ಇಂಜಿನ್‌ಗಿಂತ ಹೆಚ್ಚಿನದಾಗಿದೆ. ನಾವು 15 Google ಉತ್ಪನ್ನಗಳನ್ನು ಹೊಂದಿದ್ದೇವೆ. ಪ್ರತಿಯೊಂದೂ ಐವತ್ತು ಕೋಟಿಗಿಂತ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಿದೆ” ಎಂದು ಪಿಚೈ ನುಡಿದಿದ್ದಾರೆ.

ಇದನ್ನೂ ಓದಿ: Sundar Pichai : ಐಐಟಿಯ ಸಾಮಾನ್ಯ ವಿದ್ಯಾರ್ಥಿ 10,000 ಕೋಟಿ ರೂ.ಗೆ ಒಡೆಯನಾಗಿದ್ದು ಹೇಗೆ?

Exit mobile version