ಬೆಂಗಳೂರು: ಭಾರತದ ಸಾರ್ವಕಾಲಿಕ ಶ್ರೇಷ್ಠ ಕುಸ್ತಿಪಟು ಖಾಶಾಬಾ ದಾದಾಸಾಹೇಬ್ ಜಾಧವ್ (Khashaba Dadasaheb Jadhav) ಅವರ 97ನೇ ಜಯಂತಿಗೆ ಗೂಗಲ್, ವಿಶೇಷ ಡೂಡಲ್ (Google Doodle) ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಿದೆ. 1952ರ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ, ಈ ಸಾಧನೆ ಮೆರೆದ ಭಾರತದ ಮೊದಲ ಅಥ್ಲಿಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ತನ್ನ ಎದುರಾಳಿಯನ್ನು ಆಕ್ರಮಣ ಮಾಡಲು ಸಿದ್ಧವಾಗುತ್ತಿರುವುದನ್ನು ತೋರಿಸುವ ಜಾಧವ್ ಅವರ ಡೂಡಲ್ ಅನ್ನು ಗೂಗಲ್ ತನ್ನ ಮುಖಪುಟದಲ್ಲಿ ಪ್ರದರ್ಶಿಸಿದೆ.
ಕುಸ್ತಿಪಟು ಖಾಶಬಾ ದಾದಾಶೇಬ್ ಜಾಧವ್ ಅವರು ಮಹಾರಾಷ್ಟ್ರದ ಗೋಲೇಶ್ವರ ಗ್ರಾಮದಲ್ಲಿ 1926ರಲ್ಲಿ ಜನವರಿ 15ರಂದು ಜನಿಸಿದರು. ಇವರ ತಂದೆ ಕೂಡ ಕುಸ್ತಿಪಟು. ಹಾಗಾಗಿ, ಜಾಧವ್ ಅವರಿಗೆ ಕುಸ್ತಿ ಕಲೆ ರಕ್ತಗತವಾಗಿಯೇ ಬಂದಿತ್ತು. ಈಜು ಮತ್ತು ರನ್ನರ್ ಆಗಿ ಪರಿಣತಿ ಪಡೆದುಕೊಂಡು ಬಳಿಕ ಖಾಸಾಬಾ ಅವರು ತಮ್ಮ ತಂದೆಯ ಬಳಿಯ ಮೊದಲಿಗೆ ಕುಸ್ತಿ ಟ್ರೈನಿಂಗ್ ಪಡೆದುಕೊಳ್ಳಲಾರಂಭಿಸಿದರು. 5.5 ಅಡಿಯಷ್ಟೇ ಇದ್ದ ಖಾಸಾಬಾ ಅವರು, ಕೌಶಲ್ಯಪೂರ್ಣ ವಿಧಾನ ಮತ್ತು ಹಗುರವಾದ ಪಾದಗಳಿಂದಾಗಿ ಅವರು ತಮ್ಮ ಪ್ರೌಢಶಾಲೆಯಲ್ಲಿ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ವಿಶೇಷವಾಗಿ ಧಕ್-ಎ ಕುಸ್ತಿಯ ಚಲನೆಗಳಲ್ಲಿ ಅವರು ನಿಷ್ಣಾತರಾಗಿದ್ದರು.
ಅವರು ಅನೇಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಈ ಯಶಸ್ಸು ಕೊಲ್ಹಾಪುರದ ಮಹಾರಾಜರ ಗಮನವನ್ನು ಸೆಳೆಯಿತು. ಅದರ ಫಲವಾಗಿ ಜಾಧವ್ ಲಂಡನ್‌ನಲ್ಲಿ 1948 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಯಿತು. ಆದರೆ, 6ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮತ್ತೆ ಕಠಿಣ ತರಬೇತಿ ನಡೆಸಿದ ಜಾಧವ್ ಅವರು, 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಅವರು ಪದಕ ಪಡೆದುಕೊಂಡರು. ಆ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.
ಇದನ್ನೂ ಓದಿ | ಭಾರತದ ಸ್ವಾತಂತ್ರ್ಯ ದಿನ ಗೂಗಲ್‌ನಲ್ಲಿ ಕಾಣಿಸಿಕೊಂಡ ಗಾಳಿಪಟದ ಡೂಡಲ್ ಅರ್ಥವೇನು?