ನ್ಯೂಯಾರ್ಕ್: ಸುದ್ದಿ ಲೇಖನಗಳನ್ನು (news articles) ಬರೆಯಬಲ್ಲ ಕೃತಕ ಬುದ್ಧಿಮತ್ತೆ (Artificial technology) ತಂತ್ರಜ್ಞಾನವನ್ನು ಗೂಗಲ್ (Google Genesis AI) ಸಿದ್ಧಪಡಿಸಿದ್ದು, ಪ್ರಯೋಗಕ್ಕೆ ಒಳಪಡಿಸುತ್ತಿದೆ ಎಂದು ತಿಳಿದುಬಂದಿದೆ.
ನೂತನ ಎಐ ತಂತ್ರಜ್ಞಾನವನ್ನು ದಿ ನ್ಯೂಯಾರ್ಕ್ ಟೈಮ್ಸ್, ದಿ ವಾಷಿಂಗ್ಟನ್ ಪೋಸ್ಟ್, ದಿ ವಾಲ್‌ಸ್ಟ್ರೀಟ್ ಜರ್ನಲ್‌ನಂತಹ ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ಗೂಗಲ್ ಒದಗಿಸಲಿದೆ. ಇದನ್ನು ಆಂತರಿಕವಾಗಿ ಸದ್ಯ ಜೆನೆಸಿಸ್ (genesis) ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದು ಪ್ರಸ್ತುತ ಸುದ್ದಿ ಬೆಳವಣಿಗೆಗಳ ವಿವರಗಳನ್ನು ಪಡೆದು, ಅದನ್ನು ಸುದ್ದಿಯ ರೂಪದಲ್ಲಿ ಬರೆಯಬಲ್ಲುದು ಎಂದು ಸಂಸ್ಥೆಯ ಒಳಗಿನ ಮೂಲಗಳು ತಿಳಿಸಿವೆ.
ಇದು ಜರ್ನಲಿಸ್ಟ್‌ಗಳಿಗೆ ವೈಯಕ್ತಿಕ ಅಸಿಸ್ಟೆಂಟ್‌ನಂತೆ ಕೆಲಸ ಮಾಡಲಿದೆ. ಆಟೋಮೇಶನ್ ಮೂಲಕ ಸಮಯವನ್ನು ಉಳಿಸಲಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. ಆದರೆ ಇದು ನಿಖರವಾದ, ಕಲಾತ್ಮಕವಾದ, ಸುದ್ದಿ ಲೇಖನಗಳನ್ನು ಬರೆಯುವ ಹಂತ ತಲುಪಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಗೂಗಲ್ ಸಂಸ್ಥೆಯಾಗಲೀ, ನ್ಯೂಯಾರ್ಕ್ ಟೈಮ್ಸ್- ವಾಷಿಂಗ್ಟನ್ ಪೋಸ್ಟ್ ಆಗಲೀ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ʼʼಈ ತಂತ್ರಜ್ಞಾನವು ನಿಖರವಾಗಿ ಮಾಹಿತಿಯನ್ನು ಬಳಸಿಕೊಳ್ಳುತ್ತದಾದರೆ, ಆಗ ಮಾಧ್ಯಮದವರು ಇದನ್ನು ಒಂದು ಸಾಧನವಾಗಿ ಬಳಸಿಕೊಳ್ಳಬಹುದು. ಆದರೆ, ಆಳವಾದ ಸಾಂಸ್ಕೃತಿಕ ಅರಿವು ಹೊಂದಿರಬೇಕಾದ ಸಂದರ್ಭದಲ್ಲಿ ಇದು ದುರ್ಬಳಕೆಯಾಗುವಂತಾದರೆ, ಆಗ ಇದರಿಂದ ಹಾನಿಯೇ ಹೆಚ್ಚುʼʼ ಎಂದು ಮಾಧ್ಯಮ ತಜ್ಞ ಜೆಫ್ ಜಾರ್ವಿಸ್ ಎಂಬವರು ಹೇಳಿದ್ದಾರೆ.
ಎಐ ತಂತ್ರಜ್ಞಾನವನ್ನು ಸುದ್ದಿಮನೆಗಳಲ್ಲಿ ಬಳಸಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವು ಮುಂದುವರಿದ ಸುದ್ದಿಸಂಸ್ಥೆಗಳು, ಎಐಯ ಸಾಧ್ಯತೆಗಳನ್ನು ಅನ್ವೇಷಿಸುವಂತೆ ತಮ್ಮ ಉದ್ಯೋಗಿಗಳಿಗೆ ಉತ್ತೇಜನ ನೀಡಿವೆ. ಅಸೋಸಿಯೇಟೆಡ್ ಪ್ರೆಸ್‌ನಂಥ ಕೆಲವು ಸುದ್ದಿಸಂಸ್ಥೆಗಳು ಹಲವು ವರ್ಷಗಳಿಂದ ಎಐಯನ್ನು ಬಳಸುತ್ತಿವೆ. ಆದರೆ ಅದು ಅತೀ ಸಣ್ಣ ಪ್ರಮಾಣದಲ್ಲಿ ಮಾತ್ರ ಇದೆ. ಆದರೆ ಗೂಗಲ್‌ನಂಥ ದೈತ್ಯ ಸಂಸ್ಥೆಯ ಆಗಮನವು ಖಂಡಿತವಾಗಿಯೂ ವಸ್ತುಸ್ಥಿತಿಯನ್ನು ಬದಲಾಯಿಸಲಿದೆ ಎಂದು ಮಾಧ್ಯಮ ತಜ್ಞರು ಅಂದಾಜಿಸಿದ್ದಾರೆ.
ಒಂದು ಕಡೆ ಗೂಗಲ್ ಸುದ್ದಿ ತಯಾರಿಸುವ ಎಐ ಸಿದ್ಧಪಡಿಸುವ ಪ್ರಯತ್ನದಲ್ಲಿದ್ದರೆ, ಇನ್ನೊಂದು ಕಡೆ ಗೂಗಲ್ ಕೂಡ ಸುದ್ದಿಸಂಸ್ಥೆಗಳ ಸಿಟ್ಟನ್ನು ಎದುರಿಸುತ್ತಿದೆ. ಸಂಸ್ಥೆಗಳು ಸಿದ್ಧಪಡಿಸುವ ಸುದ್ದಿಯನ್ನು ಹಂಚುವ ಕೆಲಸ ಮಾಡುವ ಗೂಗಲ್, ಅದರ ಆದಾಯದ ಸಿಂಹಪಾಲನ್ನು ತಾನೇ ಪಡೆಯುತ್ತಿದೆ. ಸುದ್ದಿಸಂಸ್ಥೆಗಳಿಗೂ ಇದರಲ್ಲಿ ಪಾಲು ಕೊಡಬೇಕು ಎಂದು ಆಸ್ಟ್ರೇಲಿಯಾ ಸೇರಿದಂತೆ ಹಲವು ಸರ್ಕಾರಗಳೂ ತಾಕೀತು ಮಾಡಿವೆ. ಹಲವು ಬೃಹತ್ ಸುದ್ದಿಸಂಸ್ಥೆಗಳು, ಎಐ ಬೆಳವಣಿಗೆಗಾಗಿ ತಮ್ಮ ಸುದ್ದಿ- ಲೇಖನಗಳನ್ನು ಬಳಸಿಕೊಳ್ಳದಂತೆ ಗೂಗಲ್‌ಗೆ ತಾಕೀತು ಮಾಡಿವೆ.
ಇದನ್ನೂ ಓದಿ: Google Doodle: ಭಾರತದ ಪಾನಿಪುರಿಗೆ ಗೂಗಲ್ ಡೂಡಲ್ ವಿಶೇಷ ಗೌರವ; ನೀವೂ ಈ ಗೇಮ್ ಆಡಿ