ನವ ದೆಹಲಿ: ಗೂಗಲ್ ಕೊನೆಗೂ ಭಾರತದಲ್ಲಿ ʻಸ್ಟ್ರೀಟ್ ವ್ಯೂʼ ಸೌಲಭ್ಯವನ್ನು ತರುತ್ತಿದ್ದು, ಆರಂಭದಲ್ಲಿ ದೇಶದ ಹತ್ತು ನಗರಗಳಲ್ಲಿ ಅಳವಡಿಸುತ್ತಿದೆ.
ಸ್ಟ್ರೀಟ್ ವ್ಯೂ ಮೂಲಕ ಗ್ರಾಹಕರು ತಾವಿದ್ದಲ್ಲೇ ತಮಗೆ ಅಗತ್ಯವಾದ ನಗರದ ವಿವಿಧ ತಾಣಗಳ ರಿಯಲ್ ಟೈಮ್ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಯಾವುದೇ ಪ್ರೇಕ್ಷಣೀಯ ಸ್ಥಳ, ರೆಸ್ಟೋರೆಂಟ್, ಟ್ರಾಫಿಕ್ ಪರಿಸ್ಥಿತಿ, ಒನ್‌ವೇ ಇತ್ಯಾದಿಗಳನ್ನು ಅನ್ವೇಷಿಸಬಹುದು. ರಸ್ತೆಗಳ ವೇಗದ ಮಿತಿ, ರಸ್ತೆ ಮುಚ್ಚುಗಡೆ, ಅಡಚಣೆಗಳ ಮಾಹಿತಿ, ಟ್ರಾಫಿಕ್ ಜಂಕ್ಷನ್‌ಗಳ ಒತ್ತಡಗಳನ್ನು ಕೂಡ ಇದು ತೋರಿಸುತ್ತದೆ.
ಸ್ಥಳೀಯ ಕಂಪನಿಗಳಾದ ಸುಧಾರಿತ ಮ್ಯಾಪಿಂಗ್ ಸಂಸ್ಥೆ ಜೆನೆಸಿಸ್ ಇಂಟರ್‌ನ್ಯಾಶನಲ್, ಡಿಜಿಟಲ್ ಸಲಹೆ ಮತ್ತು ವ್ಯಾಪಾರ ಸೇವಾ ಸಂಸ್ಥೆ ಟೆಕ್ ಮಹೀಂದ್ರಾ ಸಹಭಾಗಿತ್ವದಲ್ಲಿ ಭಾರತದಲ್ಲಿ ಸ್ಟ್ರೀಟ್ ವ್ಯೂ ಪ್ರಾರಂಭಿಸುವುದಾಗಿ ಗೂಗಲ್ ಘೋಷಿಸಿದೆ. ಗೂಗಲ್‌ಗೆ ಸ್ವತಂತ್ರವಾಗಿ ಭಾರತದಲ್ಲಿ ಕಾರ್ಯಾಚರಿಸಲು ಅನುಮತಿ ನೀಡಲಾಗಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಜತೆ ಸಹಭಾಗಿತ್ವದಲ್ಲಿ ಇದನ್ನು ತರುತ್ತಿದೆ. ಈ ಸಂಸ್ಥೆಗಳು ನೀಡಿದ ಡೇಟಾವನ್ನು ಗೂಗಲ್ ಬಳಸಿಕೊಳ್ಳಲಿದೆ.
ಇಂದಿನಿಂದ ಹೊಸ ಸ್ಟ್ರೀಟ್ ವ್ಯೂ ಫೀಚರ್ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮಾತ್ರ Google Mapsನಲ್ಲಿ ಲಭ್ಯ. ಮುಂಬರುವ ದಿನಗಳಲ್ಲಿ ಇದನ್ನು ಹೈದರಾಬಾದ್, ಕೋಲ್ಕತ್ತಾದಲ್ಲಿ ಬಿಡುಗಡೆ ಮಾಡಲಾಗುವುದು. ನಂತರ ಚೆನ್ನೈ, ದೆಹಲಿ, ಮುಂಬೈ, ಪುಣೆ, ನಾಸಿಕ್, ವಡೋದರಾ, ಅಹ್ಮದ್‌ನಗರ ಮತ್ತು ಅಮೃತಸರ ಸೇರಿದಂತೆ ಭಾರತದ ಹೆಚ್ಚಿನ ನಗರಗಳಲ್ಲಿ ಸ್ಟ್ರೀಟ್ ವ್ಯೂ ತರಲಾಗುವುದು ಎಂದು ಗೂಗಲ್ ಇಂಡಿಯಾ ತಿಳಿಸಿದೆ.
ಒಮ್ಮೆ ಗ್ರಾಹಕ ಬಳಕೆಗ ಲಭ್ಯವಾದ ಬಳಿಕ ಈ ಫೀಚರ್ ಬಳಕೆ ಸುಲಭವಾಗಲಿದೆ. Google map ಅಪ್ಲಿಕೇಶನ್ ಅನ್ನು ತೆರೆದು, ಯಾವುದೇ ಉದ್ದೇಶಿತ ಸ್ಥಳವನ್ನು ಜೂಮ್ ಮಾಡಿ ಟ್ಯಾಪ್ ಮಾಡಬೇಕು. ಸ್ಥಳೀಯ ಕೆಫೆಗಳು, ಸಾಂಸ್ಕೃತಿಕ ಹಾಟ್‌ಸ್ಪಾಟ್‌ಗಳು, ಸ್ಥಳೀಯ ಪ್ರೇಕ್ಷಣೀಯ ತಾಣಗಳು, ಪಾರ್ಕ್‌ಗಳು, ರಸ್ತೆಗಳನ್ನು ನೀವು ನೋಡಬಹುದು. ಆದರೆ ಭದ್ರತಾ ಕಾರಣಗಳಿಗಾಗಿ ಸೂಕ್ಷ್ಮ ಹಾಗೂ ಸುರಕ್ಷಿತ ಪ್ರದೇಶಗಳು, ಸ್ಟ್ರೀಟ್ ವ್ಯೂ ಬಳಕೆಗೆ ಅನುಮತಿ ಒದಗಿಸದ ತಾಣಗಳು ಲಭ್ಯವಾಗುವುದಿಲ್ಲ. ಈ ಹಿಂದೆ ಎರಡು ಬಾರಿ ಭಾರತದಲ್ಲಿ ಸ್ಟ್ರೀಟ್ ವ್ಯೂ ತರಲು ಗೂಗಲ್ ಯತ್ನಿಸಿದ್ದರೂ, ಭದ್ರತಾ ಕಾರಣಗಳಿಗಾಗಿ ಸರ್ಕಾರ ನಿರಾಕರಿಸಿತ್ತು. 2011ರಲ್ಲಿ ಸ್ಟ್ರೀಟ್ ವ್ಯೂಗಾಗಿ ಬೆಂಗಳೂರಿನ ಬೀದಿಗಳನ್ನು ಚಿತ್ರೀಕರಿಸಲು ಮುಂದಾದಾಗ ಇಲ್ಲಿನ ಪೊಲೀಸರು ತಡೆದಿದ್ದರು.
ಇದನ್ನೂ ಓದಿ: ನನಗೂ ಮನುಷ್ಯರಂತೆ ಆನಂದ-ಬೇಸರ ಎರಡೂ ಆಗುತ್ತದೆ ಎಂದ ಗೂಗಲ್ AI ಚಾಟ್‌ಬೋಟ್! ಎಂಜಿನಿಯರ್ ಸಸ್ಪೆಂಡ್