ಕ್ಯಾಲಿಫೋರ್ನಿಯಾ, ಅಮೆರಿಕ: ಸದ್ಯ ಕೃತಕ ಬುದ್ಧಿಮತ್ತೆ (AI) ಸ್ಪರ್ಧೆ ಜೋರಾಗಿದೆ. ದಿನದಿಂದ ದಿನಕ್ಕೆ ಈ ಹೊಸ ತಂತ್ರಜ್ಞಾನ ಆವಿಷ್ಕಾರದ ಸ್ಪರ್ಧೆ ತೀವ್ರವಾಗುತ್ತಿದೆ. ಈಗ ಟೆಕ್ ದೈತ್ಯ ಗೂಗಲ್ (Google) ಈ ಕೂಡ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ಅಷ್ಟೇ ಅಲ್ಲದೇ, ಗೂಗಲ್ ತನ್ನೆಲ್ಲ ಸ್ಪರ್ಧಿಗಳನ್ನು ಹಿಂದಿಕ್ಕುವ ಪ್ರಯತ್ನವನ್ನು ಮಾಡುತ್ತಿದೆ. ವಾಲ್‌ಸ್ಟ್ರೀಟ್ ಜರ್ನಲ್‌ಗೆ ನೀಡಿರುವ ಸಂದರ್ಶನದಲ್ಲಿ ಗೂಗಲ್ ಒಡೆತನದ ಅಲ್ಫಾಬೆಟ್ ಸಿಇಒ ಸುಂದರ್ ಪಿಚ್ಚೈ(Sundar Pichai), ಕೃತಕ ಬುದ್ಧಿ ಮತ್ತೆಯಲ್ಲಿ ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆಗಳು ಗೂಗಲ್ ಸರ್ಚ್ ಎಂಜಿನ್ ಮತ್ತಷ್ಟು ಶಕ್ತಿಗೊಳಿಸುವಂತಿವೆ ಎಂದು ಹೇಳಿದ್ದಾರೆ. ಅಲ್ಲದೇ, ಶೀಘ್ರವೇ ಗೂಗಲ್ ಸರ್ಚ್ ಎಂಜಿನ್‌ಗೆ ಎಐ ಚಾಟ್ (AI Chat) ಅಳವಡಿಸುವುದಾಗಿ ಹೇಳಿದ್ದಾರೆ.
ಮೆಟಾ, ಮೈಕ್ರೋಸಾಫ್ಟ್ ಮತ್ತು ಹಲವಾರು ಇತರ ಟೆಕ್ ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳನ್ನು ಸಂಯೋಜಿಸಲು ಪರದಾಡುತ್ತಿರುವ ಸಮಯದಲ್ಲಿ ಗೂಗಲ್ ಸಿಇಒ ಅವರ ಈ ಮಾತು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಜನರು ಗೂಗಲ್‌ಗೆ ಪ್ರಶ್ನೆಗಳನ್ನು ಕೇಳಲು ಮತ್ತು ಹುಡುಕಾಟದ ಸಂದರ್ಭದಲ್ಲಿ ಎಲ್‌ಎಲ್‌ಎಂ(large language model)ಗಳೊಂದಿಗೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಸುಂದರ್ ಪಿಚ್ಚೈ, ಚಾಟ್‌ಬಾಟ್‌ಗಳು ಸರ್ಚ್ ಎಂಜಿನ್‌ಗೆ ಅಪಾಯವನ್ನುಂಟು ಮಾಡುತ್ತವೆ ಎಂದು ಸೂಚಿಸಿದ ವರದಿಗಳನ್ನು ಸಹ ತಳ್ಳಿಹಾಕಿದರು.
ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್(LLM)ಗಳನ್ನು ರೂಪಿಸುವುದಲ್ಲಿ ಅಲ್ಫಾಬೆಟ್ ಕಂಪನಿ ಖ್ಯಾತಾಗಿದೆ. ಈ ಮಾದರಿಗಳು, ಮಾನವ ನೀಡುವ ಉತ್ತರ ರೀತಿಯಲ್ಲೇ ಸಂಸ್ಕರಿಸುವ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೀಗಿದ್ದಾಗ್ಯೂ, ಕಂಪನಿಯು ತನ್ನ ಸರ್ಚ್ ಎಂಜಿನ್‌ನಲ್ಲಿ ತಂತ್ರಜ್ಞಾನವನ್ನು ಸಂಯೋಜಿಸಿಲ್ಲ, ಇದು ಕಂಪನಿಯ ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ಹೊಂದಿದೆ ಎಂದು ಹೇಳಬಹುದು.
ಇದನ್ನೂ ಓದಿ: ChatGpt Lawsuit: ಆಸ್ಟ್ರೇಲಿಯಾ ಮೇಯರ್ ದೋಷಿ ಎಂದು ಷರಾ; ಚಾಟ್‌ಜಿಪಿಟಿ ವಿರುದ್ಧ ಬಿತ್ತು ಮಾನಹಾನಿ ಕೇಸ್
ಕಳೆದ ಮಾರ್ಚ್ ತಿಂಗಳಲ್ಲಿ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಎಐ ಸಂಯೋಜಿಸುವ ಸಾಧ್ಯಗಳಿವೆ ಎಂಬ ಕಂಪನಿ ಸುಳಿವು ನೀಡಿತ್ತು. ಆದರೆ, ಯಾವಾಗ ಈ ಪ್ರಕ್ರಿಯೆ ನಡೆಯಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ನೀಡಿರಲಿಲ್ಲ. ಗೂಗಲ್ ಎದುರಾಳಿಯಾಗಿರುವ ಓಪನ್ಐಎನ ಚಾಟ್‌ಜಿಪಿಟಿಗೆ ಪ್ರತಿಸ್ಪರ್ಧಿಯಾಗಿ ಗೂಗಲ್ ತನ್ನ ಬ್ರಾಡ್ ಲಾಂಚ್ ಮಾಡುವಾಗ ಈ ಸುಳಿವು ಬಿಟ್ಟುಕೊಟ್ಟಿತ್ತು.