ನವದೆಹಲಿ: ಹಣಕ್ಕಾಗಿ ಒತ್ತಾಯಿಸಿ ದಿಲ್ಲಿ ಏಮ್ಸ್ ಸರ್ವರ್ ಅಟ್ಯಾಕ್ ಮಾಡಿದ್ದ ಹ್ಯಾಕರ್ಸ್, ಅದಕ್ಕೂ ಮೊದಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR Website) ವೆಬ್‌ಸೈಟ್ ಹ್ಯಾಕ್ ಮಾಡಲು ಪ್ರಯತ್ನಿಸಿದ ಮಾಹಿತಿ ಈಗ ಬಹಿರಂಗವಾಗಿದೆ. ಈ ವೆಬ್‌ಸೈಟ್ ಹ್ಯಾಕ್ ಮಾಡಲು ಸುಮಾರು 6000 ಬಾರಿ ಪ್ರಯತ್ನಿಸಲಾಗಿತ್ತು ಎಂದು ತಿಳಿದು ಬಂದಿದೆ.
ವೆಬ್‌ಸೈಟ್ ಹ್ಯಾಕ್ ಮಾಡಲು ಬಳಸಲಾದ ಐಪಿ ಐಡ್ರೆಸ್ ಅನ್ನು ಹಾಂಕಾಂಗ್‌ನಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಪತ್ತೆ ಹಚ್ಚಲಾಗಿದೆ. ಆದರೆ, ಐಸಿಎಂಆರ್ ವೆಬ್‌ಸೈಟ್‌ಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮತ್ತು ಅಪ್‌ಡೇಟೆಡ್ ಫೈರ್‌ವಾಲ್ ಇದ್ದುದರಿಂದ ಹ್ಯಾಕ್ ಮಾಡಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಐಸಿಎಂಆರ್ ವೆಬ್‌ಸೈಟ್ ಸುರಕ್ಷಿತವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ದಿಲ್ಲಿಯ ಏಮ್ಸ್ ಸರ್ವರ್ ಹ್ಯಾಕ್ ಮಾಡಿ, ಹಣಕ್ಕೆ ಹ್ಯಾಕರ್ಸ್ ಬೇಡಿಕೆ ಇಟ್ಟಿದ್ದರು. ಸರ್ವರ್ ಹ್ಯಾಕ್ ಆದ ಪರಿಣಾಮ ಏಮ್ಸ್ ಆಸ್ಪತ್ರೆಯ ಒಟ್ಟು ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರಿತ್ತು. ಏಮ್ಸ್ ಸರ್ವರ್ ಹ್ಯಾಕ್ ಮಾಡುವ ಮೊದಲು ಡಿಸೆಂಬರ್ 4ರಂದು ಏಮ್ಸ್ ಹಾಸ್ಟಿಟಲ್ ಎದುರು ಇರುವ ಸಫ್ದರ್ ಜಂಗ್ ಆಸ್ಪತ್ರೆಯ ಸರ್ವರ್ ಹ್ಯಾಕ್ ಮಾಡಲಾಗಿತ್ತು. ಆದರೆ, ಏಮ್ಸ್ ಮೇಲಿನ ಅಟ್ಯಾಕ್‌ನಿಂದಾದಷ್ಟು ಪರಿಣಾಮ ಇದರಿಂದ ಆಗಿರಲಿಲ್ಲ. ಏಮ್ಸ್ ಸರ್ವರ್ ಅನ್ನು ಹ್ಯಾಕರ್ಸ್ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು. ಇದರಿಂದ ಆಸ್ಪತ್ರೆಯ ಒಟ್ಟು ಸೇವೆಯಲ್ಲಿ ಭಾರೀ ವ್ಯತ್ಯಯವಾಗಿತ್ತು.
ಇದನ್ನೂ ಓದಿ | Server Issue at AIIMS | ದೆಹಲಿ ಏಮ್ಸ್‌ನಲ್ಲಿ ಸರ್ವರ್ ಡೌನ್, ರೋಗಿಗಳ ಪರದಾಟ, ಹ್ಯಾಕರ್‌ಗಳಿಂದ ವೈರಸ್ ದಾಳಿ ಶಂಕೆ