ಬೆಂಗಳೂರು: ಶಿಯೋಮಿ ಮತ್ತು ರಿಯಲ್ ಮಿ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ಗಳು ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ತಮ್ಮ ಮೊಬೈಲ್ ಫೋನ್‌ಗಳಿಗೆ (Mobile phone) ಚಿಲ್ಲರೆ ವ್ಯಾಪಾರಿಗಳು ನೀಡುತ್ತಿರುವ ರಿಯಾಯಿತಿಗಳಿಗೆ ಬ್ರೇಕ್ ಹಾಕಲು ಹೊರಟಿವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಂದರೆ, ಇನ್ನು ಮುಂದೆ ಪ್ರಮುಖ ಬ್ರ್ಯಾಂಡ್‌ಗಳ ಮೊಬೈಲ್‌ಗಳು ಆನ್‌ಲೈನ್ ಮೂಲಕ ಹೆಚ್ಚಿನ ರಿಯಾಯಿತಿ ದರದಲ್ಲಿ ಸಿಗುವುದಿಲ್ಲ.
ಭಾರತದಲ್ಲಿ ತಮ್ಮ ಉತ್ಪನ್ನಗಳ ಮಾರಾಟದ ವ್ಯಾಪ್ತಿ ಹೆಚ್ಚಿಸಲು ಕಂಪನಿಗಳು ಆಫ್ ಲೈನ್ ಚಾನಲ್ ಗಳಿಗೆ ಒತ್ತು ನೀಡುವ ಗುರಿಯನ್ನು ಹೊಂದಿವೆ. ಹಾಗಾಗಿ ಆನ್‌ಲೈನ್ ರಿಯಾಯಿತಿಗಳಿಗೆ ತಡೆ ಹಾಕಲು ಮುಂದಾಗಿವೆ. ಆನ್‌ಲೈನ್ ರಿಯಾಯಿತಿ ಮಾರಾಟದಿಂದಾಗಿ ತಮಗೆ ಭಾರಿ ನಷ್ಟವಾಗುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘಗಳು ದೂರಿದ್ದವು. ಈ ಹಿನ್ನೆಲೆಯಲ್ಲಿ ಶಿಯೋ ಮಿ ಮತ್ತು ರಿಯಲ್ ಮಿ ಕಂಪನಿಗಳು ರಿಯಾಯಿತಿ ದರದಲ್ಲಿನ ಆನ್‌ಲೈನ್ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿವೆ. ಮಿತಿ ಮೀರಿದ ವಿನಾಯಿತಿ ನೀಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಟಾಕ್ ಗಳನ್ನು ಈ ಕಂಪನಿಗಳು ಮರುಖರೀದಿ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ.
ವ್ಯಾಪಾರಿಗಳ ಮೇಲೆ ಏನು ಕ್ರಮ?
ಬ್ರ್ಯಾಂಡ್ ಗಳು ಸದ್ಯಕ್ಕೆ ಚಿಲ್ಲರೆ ವ್ಯಾಪಾರಿಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಅಧಿಕೃತ ಚಾನೆಲ್‌ಗಳ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಡೆಯುವ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಎಚ್ಚರಿಕೆ ನೀಡುತ್ತಿವೆ. ಜಮ್ಮು, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡಿನ ಹಲವು ಚಿಲ್ಲರೆ ವ್ಯಾಪಾರಿಗಳಿಂದ ಈ ರೀತಿ ಸಹಿ ಹಾಕಿಸಿಕೊಳ್ಳಲಾಗಿದೆ.
ಆನ್ ಲೈನ್ ಮೊಬೈಲ್ ಮಾರಾಟದ ಹೆಚ್ಚಿನ ರಿಯಾಯಿತಿಗಳ ಮೇಲೆ ದೂರು
ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ (AIMRA)ನ ರಾಜ್ಯ ಘಟಕಗಳಿಂದ ಹಲವಾರು ದೂರುಗಳು ಬಂದಿವೆ. ಅದರ ಪ್ರಕಾರ ಶಿಯೋಮಿ, ರಿಯಲ್ ಮಿ ಮತ್ತು ಸ್ಯಾಮ್ ಸಂಗ್ ನಂತಹ ಬ್ರ್ಯಾಂಡ್ ಗಳ ಹನ್ನೆರಡು ಉತ್ಪನ್ನಗಳನ್ನು ಆನ್‌ಲೈನ್ ಚಾನೆಲ್ ಗಳಲ್ಲಿ ಸುಮಾರು 1,000-2,000 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ:Phone Addiction: ಸ್ಮಾರ್ಟ್‌ಫೋನ್ ಚಟದಿಂದ ಹೊರಬರಲು ಹೀಗೆ ಮಾಡಿ!
“ಇಕಾಮರ್ಸ್ ಪ್ಲಾಟ್ ಫಾರ್ಮ್‌ಗಳು ಆನ್ ಲೈನ್‌ನಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ನೋಂದಾಯಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬ್ರ್ಯಾಂಡ್ ಅನುಮತಿಸಿದೆ. ಇದು ನಿಜವಾಗಿಯೂ ಆತಂಕಕಾರಿ ಪರಿಸ್ಥಿತಿಯಾಗಿದೆ. ಗ್ರಾಹಕರಿಗೆ ತಮ್ಮ ಅತ್ಯುತ್ತಮ ಸಾಮರ್ಥ್ಯಗಳೊಂದಿಗೆ ಉತ್ಪನ್ನವನ್ನು ಮಾರಾಟ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವ ಮುಖ್ಯ ಚಿಲ್ಲರೆ ವ್ಯಾಪಾರಿಗಳ ನಂಬಿಕೆಯನ್ನು ಬ್ರ್ಯಾಂಡ್ ಕಳೆದುಕೊಳ್ಳುತ್ತಿದೆ.” ಎಂದು ಚಿಲ್ಲರೆ ವ್ಯಾಪಾರಿಗಳ ಸಂಘವು ಮಾರ್ಚ್ 26ರಂದು ರಿಯಲ್ ಮಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು.
ಇದೇ ರೀತಿಯ ಪತ್ರಗಳನ್ನು ಶಿಯೋಮಿಗೂ ಕಳುಹಿಸಲಾಗಿದೆ. ಅದರ ಪ್ರತಿನಿಧಿಯೊಬ್ಬರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಾವು ಈ ಸಮಸ್ಯೆಯ ಮೂಲ ಹುಡುಕಲು ಮತ್ತು ಭಾರೀ ದಂಡದೊಂದಿಗೆ ಅದನ್ನು ಸರಿಪಡಿಸಲು ಸ್ಟಾಕ್ ಗಳನ್ನು ಖರೀದಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.