Site icon Vistara News

Hiring Pause: ಟೆಕ್‌ ಉದ್ಯೋಗ 90% ಕುಸಿತ? ಫೇಸ್‌ಬುಕ್, ಆ್ಯಪಲ್, ಗೂಗಲ್‌ ನೇಮಕಾತಿಗೆ ವಿರಾಮ

tech job

ಹೊಸದಿಲ್ಲಿ: ಭಾರತದಲ್ಲಿ ದೊಡ್ಡ 6 ಟೆಕ್ ಕಂಪನಿಗಳು (big tech company) ಉದ್ಯೋಗ ನೇಮಕಾತಿಗೆ (Job recruitments) ಸದ್ಯ ವಿರಾಮ (hiring pause) ನೀಡಲಿವೆ ಎನ್ನಲಾಗುತ್ತಿದೆ. ಗೂಗಲ್‌ ಸೇರಿದಂತೆ ಆರು ಕಂಪನಿಗಳ ಉದ್ಯೋಗ ನೇಮಕಾತಿಯಲ್ಲಿ 90% ಕಡಿತ ಕಂಡುಬಂದಿದೆ.

ಗೂಗಲ್ ಮತ್ತು ಫೇಸ್‌ಬುಕ್ (ಮೆಟಾ) ನಂತಹ ಕಂಪನಿಗಳು ಐಟಿ ವಲಯದ ಉದ್ಯೋಗಿಗಳಿಂದ ಹೆಚ್ಚು ಬೇಡಿಕೆಯಿರುವ ಸಂಸ್ಥೆಗಳು. ಆದರೆ ಈ ಸಂಸ್ಥೆಗಳು ಶೀಘ್ರದಲ್ಲೇ ಭಾರತದಲ್ಲಿ ಸಂಪೂರ್ಣ ನೇಮಕಾತಿ ವಿರಾಮ ನೀಡುವ ಸಾಧ್ಯತೆಯಿದೆ ಎಂದು ವಾಣಿಜ್ಯ ಪತ್ರಿಕೆಯೊಂದು ಹೇಳಿದೆ.

ವಿಶೇಷ ಸಿಬ್ಬಂದಿ ಫಾರ್ಮ್ Xpheno ಮೂಲಕ ನಡೆಸಲಾದ ಸಮೀಕ್ಷೆಯ ಡೇಟಾ ಪ್ರಕಾರ ದೊಡ್ಡ 6 ಕಂಪನಿಗಳಾದ Facebook (Meta Platforms), Amazon, Apple, Microsoft, Netflix ಮತ್ತು Google (Alphabet) ಮೂಲಕ ಭಾರತದಲ್ಲಿ ಉದ್ಯೋಗ ಪೋಸ್ಟಿಂಗ್‌ಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಒಟ್ಟಾರೆಯಾಗಿ ಈ ಕಂಪನಿಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಭಾರತದಲ್ಲಿ ಸಕ್ರಿಯ ಉದ್ಯೋಗ ಪೋಸ್ಟಿಂಗ್‌ಗಳಲ್ಲಿ ಶೇಕಡಾ 90ರಷ್ಟು ಕುಸಿತವನ್ನು ದಾಖಲಿಸಿವೆ.

ಇದು, ಈ ಸಂಸ್ಥೆಗಳಿಂದ ಭಾರತದಲ್ಲಿ ನೇಮಕಾತಿಗೆ ಸದ್ಯ ವಿರಾಮ ನೀಡಲಾಗಿದೆ ಎಂಬ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಈ ಸಂಸ್ಥೆಗಳ ಸಕ್ರಿಯ ನೇಮಕಾತಿಯು ಸಾರ್ವಕಾಲಿಕ ಕಡಿಮೆಯಾಗಿದೆ. ಭಾರತದಲ್ಲಿ ನೇಮಕ ಸಂಖ್ಯೆ ಶೇಕಡಾ 98ರಷ್ಟು ಕಡಿಮೆಯಾಗಿದೆ. ಟೆಕ್ ಕಂಪನಿಗಳು ಜಾಗತಿಕ ಆರ್ಥಿಕ ಕುಸಿತದಿಂದ ಹೆಚ್ಚು ಹಾನಿಗೊಳಗಾದವುಗಳಲ್ಲಿ ಒಂದು. ಏಕೆಂದರೆ ಈ ಕಂಪನಿಗಳ ಹೆಚ್ಚಿನ ಆದಾಯ ಅಮೆರಿಕದ ಆರ್ಥಿಕತೆಯೊಂದಿಗೆ ಜೋಡಿಕೊಂಡಿದೆ.

ಆರ್ಥಿಕ ಕುಸಿತದ ಸಮಯದಲ್ಲಿ ಗೂಗಲ್‌ ಅತ್ಯಂತ ಪ್ರಮುಖವಾದ ಕ್ರಮ ತೆಗೆದುಕೊಂಡಿತು. ಅತಿದೊಡ್ಡ ಉದ್ಯೋಗ ಕಡಿತ ಮಾಡಿ 12,000 ಉದ್ಯೋಗಿಗಳನ್ನು ವಜಾಗೊಳಿಸಿತು. “ಈ ನೇಮಕಾತಿ ಕೊರತೆಯು ಅನುಭವಿ ತಂತ್ರಜ್ಞಾನದ ಪ್ರತಿಭೆಗಳ ಚಲನೆಯ ಮೇಲೂ ಪರಿಣಾಮ ಬೀರಲಿದೆ” ಎಂದು ಎಕ್ಸ್‌ಫೆನೊದ ಕಾರ್ಯಪಡೆಯ ಸಂಶೋಧನೆಯ ಮುಖ್ಯಸ್ಥ ಪ್ರಸಾದ್ ಎಂಎಸ್ ಹೇಳಿದ್ದಾರೆ.

ವರದಿಯ ಪ್ರಕಾರ, ಗೂಗಲ್, ನೆಟ್‌ಫ್ಲಿಕ್ಸ್ ಮತ್ತು ಮೆಟಾದಂತಹ ಕಂಪನಿಗಳಲ್ಲಿ ಟೆಕ್ ಉದ್ಯೋಗಗಳ ಬೇಡಿಕೆ 2023ರಲ್ಲಿ ವಿಶೇಷವಾಗಿ ಭಾರತದಲ್ಲಿ ಶೇಕಡಾ 78ರಷ್ಟು ಕಡಿಮೆಯಾಗಿದೆ. ಪ್ರಸ್ತುತ ಜಾಗತಿಕ ಆರ್ಥಿಕ ಸ್ಥಿತಿ ಮತ್ತು ಕೃತಕ ಬುದ್ಧಿಮತ್ತೆಯ ಪ್ರಗತಿಯೊಂದಿಗೆ, ಈ ನೇಮಕಾತಿ ವಿರಾಮ ಮುಂದಿನ ಎರಡು ತ್ರೈಮಾಸಿಕಗಳವರೆಗೆ ಇರಬಹುದು.

ದೊಡ್ಡ ಟೆಕ್ ಕಂಪನಿಗಳಲ್ಲಿ ಪ್ರಸ್ತುತ ಜಾಗತಿಕವಾಗಿ ಕೇವಲ 30,000 ಉದ್ಯೋಗಾವಕಾಶಗಳು ಇವೆ. ಎಲ್ಲವೂ ನೇಮಕಾತಿಯಲ್ಲಿ 50 ಪ್ರತಿಶತದಷ್ಟು ಕುಸಿತವನ್ನು ದಾಖಲಿಸಿವೆ. ಭಾರತದಲ್ಲಿ ಪ್ರಸ್ತುತ 150,000ಕ್ಕಿಂತ ಕಡಿಮೆ ಜನ ಟೆಕ್‌ ವಲಯದ ಪ್ರಮುಖ ಕಾರ್ಯಾಚರಣೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಟೆಕ್ ಕಂಪನಿಗಳು ಮಾತ್ರವಲ್ಲ, ಭಾರತೀಯ ಸ್ಟಾರ್ಟ್‌ಅಪ್‌ಗಳು ಸಹ ಈ ವರ್ಷ ಉದ್ಯೋಗ ಕಡಿತ ಮತ್ತು ನೇಮಕಾತಿ ಸ್ಥಗಿತ ಮಾಡಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತೀಯ ಸ್ಟಾರ್ಟಪ್ ಕಂಪನಿಗಳು ಈ ವರ್ಷ ದೇಶಾದ್ಯಂತ 28,000 ಉದ್ಯೋಗಗಳನ್ನು ವಜಾಗೊಳಿಸಿವೆ.

ಇದನ್ನೂ ಓದಿ: 40 ಗಂಟೆ ದೇಶಕ್ಕಾಗಿ, 30 ಗಂಟೆ ನಿಮಗಾಗಿ; ಮೂರ್ತಿ ಹೇಳಿಕೆ ಬೆಂಬಲಿಸಿದ ಟೆಕ್‌ ಮಹೀಂದ್ರಾ ಸಿಇಒ

Exit mobile version