ಭಾರತದಲ್ಲಿ ಇತ್ತೀಚೆಗೆ ಯಾವುದೇ ಹಿಂಸಾಚಾರ, ಗಲಭೆ ಅಥವಾ ಪರೀಕ್ಷೆಗಳಾದಾಗ ಮೊಬೈಲ್ ಅಂತರ್ಜಾಲ ಸ್ಥಗಿತಗೊಳಿಸುವುದು ಸರ್ಕಾರದ ಮೊದಲ ನಡೆಯಾಗಿದೆ. ಕೇಳಲು ಇದು ವಿಚಿತ್ರವಾಗಿದೆ ಅನಿಸಿದರೂ, ಸರ್ಕಾರ ಭಾರತದಲ್ಲಿ ಯಾವುದೇ ತುರ್ತು ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಯಾವ ಸೂಚನೆಯನ್ನೂ ನೀಡದೆ ಅಂತರ್ಜಾಲ ಸ್ಥಗಿತಗೊಳಿಸುವ ಸಂದರ್ಭಗಳು ಇತ್ತೀಚೆಗೆ ಹೆಚ್ಚಿದೆ. ಚುನಾವಣೆಯಿರಲಿ, ಪರೀಕ್ಷೆಯಿರಲಿ, ಅಥವಾ ಯಾವುದೇ ಹಿಂಸಾಚಾರವಿರಲಿ ಇದ್ದಕ್ಕಿದ್ದಂತೆ ಭಾರತದ ನಗರವೊಂದರಲ್ಲಿ ಮೊಬೈಲ್ ಅಂತರ್ಜಾಲ ಸ್ಥಗಿತಗೊಂಡರೆ, ದಿನನಿತ್ಯದ ವ್ಯವಹಾರಗಳ ಮೇಲೆ ಆಗುವ ಪರಿಣಾಮ ದೊಡ್ಡದು. ಇದನ್ನು ಸಾಮಾನ್ಯರು ಪ್ರಶ್ನೆ ಮಾಡಿದರೆ ಸರ್ಕಾರ ಹಲವು ಕಾರಣಗಳನ್ನು ಹೇಳಿ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಬಹುದು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರಣಗಳನ್ನು ವಿವರಿಸಬಹುದು. ಆದರೆ, ಇದ್ದಕ್ಕಿದ್ದಂತೆ ಸಾಮಾನ್ಯನು ಬಳಸುವ ಸ್ಮಾರ್ಟ್‌ಫೋನ್ ಆಫ್‌ಲೈನ್ ಆಗುವ ಸಂದರ್ಭ ದಿಢೀರ್ ಎದುರಾದರೆ ಜನಸಾಮಾನ್ಯರು ಯಾವ ರೀತಿಯಲ್ಲಿ ತಯಾರಾಗಿರಬಹುದು ಎಂಬುದನ್ನು ತಿಳಿಯೋಣ.
೧. ಯಾವಾಗಲೂ ಮೊಬೈಲ್ ವ್ಯಾಲೆಟ್‌ಗಳ ಮುಖಾಂತರವೇ ನೀವು ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರೂ, ಅಂತರ್ಜಾಲವಿಲ್ಲದಂತ ಪರಿಸ್ಥಿತಿ ಬರದು ಎಂದು ತಿಳಿದಿದ್ದರೂ ಎಂಥ ಸಂದರ್ಭಕ್ಕಾದರೂ ಕೈಯಲ್ಲಿ ಒಂದಿಷ್ಟು ದುಡ್ಡನ್ನು ಯಾವಾಗಲೂ ಇಟ್ಟುಕೊಂಡಿರುವುದು ಒಳ್ಳೆಯದು. ನೀವು ಯಾವುದೋ ಊರಿನ ಪ್ರವಾಸದ ಸಂದರ್ಭ ಇಂಥದ್ದೊಂದು ಸಂದರ್ಭ ದಿಢೀರ್ ಎದುರಾದರೆ, ಕೈಯಲ್ಲಿ ಹಣ ಇರುವುದು ಎಷ್ಟು ಮುಖ್ಯ ಎಂಬುದು ನಿಮಗೆ ಅರಿವಾಗುತ್ತದೆ.
೨. ಯಾವಾಗಲೂ ನಿಮ್ಮ ಆಧಾರ್ ಕಾರ್ಡ್ ಅಥವಾ ಯಾವುದೇ ದಾಖಲೆಗಳ ಪ್ರತಿ ನಿಮ್ಮ ಪರ್ಸ್‌ನಲ್ಲಿ ಇಟ್ಟಿರಿ. ನಿಮ್ಮ ಸ್ಮಾರ್ಟ್‌ಫೋನ್ ಗೂಗಲ್ ಡ್ರೈವ್ ಅಥವಾ ಇನ್ನಾವುದೋ ಆ್ಯಪ್‌ನಲ್ಲಿ ದಾಖಲೆಗಳು ಇವೆಯಲ್ಲ ಎಂಬ ನಿಶ್ಚಿಂತೆಯ ಪ್ರಯಾಣ ಬೇಡ. ಅಗತ್ಯ ಸಂದರ್ಭಗಳಲ್ಲೇ ಇಂತಹ ನಂಬಿಕೆಗಳು ಕೈಕೊಡುತ್ತವೆ. ಹಾಗಾಗಿ ಟಿಕೆಟ್ ಬುಕ್ಕಿಂಗ್ ಪ್ರತಿಗಳು, ಯಾವುದೇ ದಾಖಲೆಗಳು, ಹೊಟೆಲ್ ಬುಕ್ಕಿಂಗ್ ಪ್ರತಿಗಳ ಹಾರ್ಡ್ ಕಾಪಿ ನಿಮ್ಮಲ್ಲಿರಲಿ.
೩. ಗೂಗಲ್ ಮ್ಯಾಪ್‌ನಲ್ಲಿ ಆಫ್‌ಲೈನ್ ಮ್ಯಾಪನ್ನು ಡೌನ್‌ಲೋಡ್ ಮಾಡಿಟ್ಟುಕೊಂಡಿರಿ. ಎಲ್ಲೇ ಪ್ರಯಾಣ ಮಾಡುತ್ತಿದ್ದರೂ ಹೊಸ ಊರಿನಲ್ಲಿ ಮ್ಯಾಪ್ ಬಳಸುವ ಸಂದರ್ಭ ಬಂದಾಗಲೇ ಅಂತರ್ಜಾಲ ಕೈಕೊಟ್ಟರೆ ಆಫ್‌ಲೈನ್ ಮ್ಯಾಪ್ ಅಷ್ಟೇ ನಿಮ್ಮ ಕೈಹಿಡಿಯುತ್ತದೆ.
೪. ಮೊಬೈಲ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಲಿ. ಹೊಸ ಊರಿಗೆ ಹೋಗುವಾಗ, ಅಥವಾ ಇನ್ನಾವುದೇ ಸಂದರ್ಭಗಳಲ್ಲಿ ರಿಚಾರ್ಜ್ ಮಾಡಲು ಮರೆತು ಇದ್ದಕ್ಕಿದ್ದಂತೆ ಇಂಥ ಸಂದರ್ಭ ಎದುರಾಗುವ ಸಂಭವವೂ ಇರಬಹುದು.
೫. ಮನೆಗೆ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಇರಲಿ. ಸರ್ಕಾರ ಇದ್ದಕ್ಕಿದ್ದಂತೆ ಮೊಬೈಲ್ ಸೇವೆಗಳನ್ನು ಕಡಿತಗೊಳಿಸಿದರೆ, ಬ್ರಾಡ್‌ಬ್ಯಾಂಡ್ ನಿಮ್ಮ ಉಪಯೋಗಕ್ಕೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್ ಕಡಿಮೆ ದರದಲ್ಲಿಯೂ ಸಿಗುತ್ತಿದೆ. ಅಲ್ಲದೆ, ಮೊಬೈಲ್ ಅಂತರ್ಜಾಲಕ್ಕಿಂತಲೂ ಮನೆಯಲ್ಲಿರುವ ಸಂದರ್ಭ ಬ್ರಾಡ್‌ಬ್ಯಾಂಡ್ ಹೆಚ್ಚು ಒಳ್ಳೆಯದು.
೬. ೨ಜಿ ಸಂದರ್ಭ ಸಿನಿಮಾ, ಹಾಡುಗಳನ್ನು ಡೌನ್‌ಲೋಡ್ ಮಾಡಿ ಕೇಳುವ ಕಾಲ ಇತ್ತು. ಆದರೆ ಈಗಿನ ನೆಟ್‌ಫ್ಲಿಕ್ಸ್ ಕಾಲದಲ್ಲಿ ಡೌನ್‌ಲೋಡ್ ಮಾಡುವ ಅಭ್ಯಾಸ ಬಹುತೇಕ ನಿಂತುಹೋಗಿದೆ. ಹಾಗಾಗಿ, ಇಂತಹ ಸಂದರ್ಭಕ್ಕಾಗಿ ಒಂದಿಷ್ಟಾದರೂ ಡೌನ್ಲೋಡ್ ಮಾಡಿಟ್ಟುಕೊಳ್ಳಿ.
೭. ಅಂತರ್ಜಾಲ ಭಾಗಶಃ ಕಡಿತವಾಗಿದ್ದಾಗ ವಿಪಿಎನ್ ಆ್ಯಪ್ ಅಂತರ್ಜಾಲದ ಜೊತೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಸಂಪೂರ್ಣ ಸ್ಥಗಿತದ ಸಂದರ್ಭ ವಿಪಿಎನ್ ಕೂಡಾ ಉಪಯೋಗಕ್ಕೆ ಬರುವುದಿಲ್ಲ. ಆದರೆ, ಇಂತಹುದನ್ನು ಪಾವತಿಸಿ ಇಟ್ಟುಕೊಳ್ಳುವುದು ಬಹಳ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ.
೮. ಬ್ಲೂಟೂತ್ ಮೆಶ್ ನೆಟ್‌ವರ್ಕ್‌ಗಳ ಬಗ್ಗೆ ತಿಳಿದಿದೀರಾ? ಬ್ರಿಡ್ಜ್‌ಫೈ, ಫೈರ್‌ಚಾಟ್ ಮತ್ತಿತರ ಆ್ಯಪ್‌ಗಳ ಮೂಲಕ ಹತ್ತಿರದಲ್ಲೇ ಇರುವ ಬೇರೆಯವರ ಅಂತರ್ಜಾಲವನ್ನು ಬ್ಲೂಟೂತ್ ಮುಖಾಂತರ ಬಳಸಬಹುದು.
೯. ಹಳೆಯ ೨ಜಿ ಸೆಟ್ ಬಹಳಷ್ಟು ತುರ್ತು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಹಳೆಯ ಮೊಬೈಲೊಂದನ್ನು ಯಾವಾಗಲೂ ಇಟ್ಟುಕೊಳ್ಳಿ. ಇದರಲ್ಲಿರುವ ಟಾರ್ಚ್, ಎಫ್ ಎಂ ರೇಡಿಯೋ, ಕ್ಯಾಮರಾ, ಎಂಪಿ೩ಗಳು ಆಪದ್ಭಾಂಧವನೂ ಆಗಬಹುದು.
೧೦. ನೀವಿರುವ ನಗರ ಅಥವಾ ಊರು ಆಗಾಗ ಇಂಥ ಅಂತರ್ಜಾಲ ಸ್ಥಗಿತದಂತಹ ತೊಂದರೆಗಳನ್ನು ಅನುಭವಿಸುತ್ತಿರುವ ಪ್ರದೇಶವಾದರೆ, ಒಂದು ಸ್ಥಿರ ದೂರವಾಣಿ ಸಂಪರ್ಕವೊಂದನ್ನು ಪಡೆದುಕೊಳ್ಳುವುದು ಒಳ್ಳೆಯದು.