ನಾವು ಇಂಟರ್‌ನೆಟ್‌ನಲ್ಲಿ ಫೀಡ್ ಮಾಡುವ ಪ್ರತಿಯೊಂದು ಮಾಹಿತಿಯೂ ಡಿಜಿಟಲ್ ಹೆಜ್ಜೆಗುರುತಾಗಿ ಎಲ್ಲೋ ಒಂದು ಕಡೆ ಉಳಿದುಹೋಗುತ್ತದೆ. ಕೆಲವೊಮ್ಮೆ ಅದು ಹತ್ತಾಗಿ, ನೂರಾಗಿ, ಸಾವಿರವಾಗಿ ಬಹಳಷ್ಟು ಕಡೆ ಉಳಿಯಬಹುದು. ನಮಗಿಷ್ಟವಾದದ್ದೆಲ್ಲಾ ಉಳಿಯದಿರಬಹುದು, ಆದರೆ ನಮಗಿಷ್ಟವಾಗದ ನಮ್ಮ ಕೆಲವು ಮಾಹಿತಿಗಳು ಬೇಡ ಎಂದರೂ ಉಳಿಯಬಹುದು. ಮುಜುಗರ ತರಿಸುವ ಇಂಥ ಸಂಗತಿಗಳು ಅಲ್ಲಿ ಉಳಿಯುವುದು ನಿಮಗೆ ಬೇಕಿಲ್ಲ. ಅದನ್ನು ಅಲ್ಲಿಂದ ತೆಗೆಸುವುದು ಹೇಗೆ?
ನೀವು ಗೂಗಲ್‌ಗೇ ರಿಕ್ವೆಸ್ಟ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಲ್ಲಿಂದ ತೆಗೆಸಿ ಹಾಕಬಹುದು. ಈ ಅವಕಾಶವನ್ನು ಗೂಗಲ್ ಏಪ್ರಿಲ್ 27ರಿಂದ ಕೊಟ್ಟಿದೆ. ನಿಮ್ಮ ಇಮೇಲ್ ಐಡಿ, ನಿಮ್ಮ ಫೋನ್ ನಂಬರ್, ನಿಮ್ಮ ಮನೆಯ ವಿಳಾಸ- ಇಂಥ ಮಾಹಿತಿಗಳು ಅಲ್ಲಿದ್ದರೆ, ಅವು ಪಬ್ಲಿಕ್ ಕೈಗೆ ಸಿಗುವುದು ನಿಮಗೆ ಬೇಡ ಅಂತಿದ್ದರೆ ನೀವು ಅದನ್ನು ತೆಗೆಸಬಹುದು.
ಇದರ ಜೊತೆಗೆ ಅಪ್ರಾಪ್ತ ವಯಸ್ಸಿನವರ ಫೋಟೋಗಳು, ಡೀಪ್‌ಫೇಕ್ ಪೋರ್ನೋಗ್ರಫಿ ಮತ್ತಿತರ ಕಂಟೆಂಟ್ ತೆಗೆಸಿಹಾಕುವ ಕುರಿತೂ ಗೂಗಲ್ ಚಿಂತಿಸುತ್ತಿದೆ. ಇಷ್ಟಿದ್ದರೂ ನಿಮ್ಮ ಕುರಿತು ಎಲ್ಲೆಲ್ಲೋ ಹಂಚಿಹೋದ ಮಾಹಿತಿಗಳೆಲ್ಲವೂ ಸಂಪೂರ್ಣ ಮಾಯವಾಗುತ್ತವೆ ಎಂಬ ಭರವಸೆಯೇನೂ ಬೇಕಿಲ್ಲ. ಕೆಲವು ಉಳಿದೇಬಿಡಬಹುದು.
ಏನನ್ನು ತೆಗೆಸಬಹುದು?
- ನಿಮ್ಮ ಅಧಿಕೃತ ಸರಕಾರಿ ಗುರುತುಚೀಟಿ ಸಂಖ್ಯೆಗಳು- ಉದಾಹರಣೆಗೆ ಆಧಾರ್, ಪ್ಯಾನ್ ನಂಬರ್ ಇತ್ಯಾದಿ.
- ಬ್ಯಾಂಕ್ ಖಾತೆ ನಂಬರ್
- ಕ್ರೆಡಿಟ್ ಕಾರ್ಡ್ ನಂಬರ್
- ನಿಮ್ಮ ಹಸ್ತಾಕ್ಷರದ ಚಿತ್ರ
- ನಿಮ್ಮ ಗುರುತುಪತ್ರಗಳ ಚಿತ್ರ
- ತೀರಾ ವೈಯಕ್ತಿಕ ದಾಖಲೆಗಳು, ವೈದ್ಯಕೀಯ ದಾಖಲೆ ಇತ್ಯಾದಿ
- ವೈಯಕ್ತಿಕ ಸಂಪರ್ಕ ಮಾಹಿತಿಗಳು
- ರಹಸ್ಯ ಲಾಗಿನ್ ಮಾಹಿತಿಗಳು
ತೆಗೆಸಬೇಕಿದ್ದರೆ ಏನಿರಬೇಕು?
- ಅಲ್ಲಿ ನಿಮ್ಮ ಕಾಂಟ್ಯಾಕ್ಟ್ ಮಾಹಿತಿಯಿರಬೇಕು
- ದುರ್ಬಳಕೆಯ, ನಿಮಗೆ ಹಾನಿಯಾಗುವ ಸಾಧ್ಯತೆಯಿರಬೇಕು
ಗೂಗಲ್ ಏನನ್ನು ತೆಗೆದುಹಾಕುತ್ತದೆ?
ನಿಮ್ಮ ರಿಕ್ವೆಸ್ಟ್ ಅನ್ನು ಗೂಗಲ್ ತಂಡ ಪರಿಶೀಲಿಸುತ್ತದೆ. ನಿಮ್ಮ ವಿನಂತಿ ಪ್ರಾಮಾಣಿಕವಾಗಿದೆ ಎನಿಸಿದರೆ, ಗೂಗಲ್ ತಂಡ ನಿರ್ದಿಷ್ಟ ಯುಆರೆಲ್ ಅನ್ನು ತೆಗೆದುಹಾಕುತ್ತದೆ.
ರಿಕ್ವೆಸ್ಟ್ ಕಳಿಸುವುದು ಹೇಗೆ?
- ಮೊದಲು ಏನನ್ನು ತೆಗೆಸಿಹಾಕಬೇಕು ಎಂಬುದನ್ನು ಗುರುತು ಮಾಡಿಟ್ಟುಕೊಳ್ಳಿ. ಅದು ವೆಬ್ಪೇಜ್ ಅಥವಾ ಚಿತ್ರ ಆಗಿದ್ದರೆ, ಅದರ url ತೆಗೆದಿಟ್ಟುಕೊಳ್ಳಿ.
- ಗೂಗಲ್ ಪುಟದಲ್ಲಿ ಟಾಪಿಕ್ಸ್ ಸಪೋರ್ಟ್ ಪುಟಕ್ಕೆ ಹೋಗಿ, ಅಲ್ಲಿ Start removal request ಬಟನ್ ಒತ್ತಿ.
- ಆಯಾ ವೆಬ್ ಪುಟಗಳ ಮಾಲಿಕರನ್ನು ಸಂಪರ್ಕಿಸಿದ್ದೀರಾ ಎಂದು ಕೇಳುತ್ತದೆ ಗೂಗಲ್. ಅದರ ಅಗತ್ಯವಿಲ್ಲ. ʼಇಲ್ಲ. ಅಗತ್ಯವಿಲ್ಲʼ ಎಂದೇ ಆರಿಸಿಕೊಳ್ಳಿ.
- ಯಾವ ಬಗೆಯ ವೈಯಕ್ತಿಕ ಮಾಹಿತಿ ತೆಗೆಸಿಹಾಕಬೇಕು ಎಂಬ ಮಾಹಿತಿಯನ್ನು ಗೂಗಲ್ ಕೇಳುತ್ತದೆ.
- ಅಕ್ಷೇಪಣಕಾರಿ ಮಾಹಿತಿ ಇರುವ ವೆಬ್ಪೇಜ್ನ ಸ್ಕ್ರೀನ್ಶಾಟ್ ಕಳಿಸಲು ಗೂಗಲ್ ಕೇಳುತ್ತದೆ.
- ನಿಮ್ಮ ಬೇಡಿಕೆಯನ್ನು ಸಲ್ಲಿಸಿ. ಪರಿಶೀಲನೆ ಹಾಗೂ ಅಳಿಸಿಹಾಕುವ ಪ್ರಕ್ರಿಯೆಗೆ ಗೂಗಲ್ ಕೊಂಚ ಸಮಯ ತೆಗೆದುಕೊಳ್ಳಬಹುದು.
ಇದನ್ನೂ ಓದಿ: ನಿಮ್ಮ ಜಮೀನು ಸ್ಕೆಚ್ ನೀವೇ ಮಾಡಿಕೊಳ್ಳಿ: ಕಂದಾಯ ಇಲಾಖೆಯಿಂದ ಸ್ವಾವಲಂಬಿ ಆ್ಯಪ್