ನವ ದೆಹಲಿ: ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ವಾಟ್ಸ್ಆ್ಯಪ್ ಖಾತೆಗಳು ಬ್ಯಾನ್ (WhatsApp Account Ban) ಆಗುವುದನ್ನು ಕಂಡಿರುತ್ತೀರಿ. ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ನಿಯಮಗಳ ಪ್ರಕಾರ, ಪ್ರತಿ ತಿಂಗಳು ತಾನು ಡಿಲಿಟ್ ಮಾಡಿದ ಖಾತೆಗಳ ವಿವರವನ್ನು ವಾಟ್ಸ್ಆ್ಯಪ್ ಕೇಂದ್ರ ಸರ್ಕಾರದ ಜತೆಗೆ ಹಂಚಿಕೊಳ್ಳುತ್ತದೆ. ಕೆಲವೊಮ್ಮೆ ಅಪಾಯಕಾರಿಯಲ್ಲದ ವಾಟ್ಸ್ಆ್ಯಪ್ ಖಾತೆಗಳು ಡಿಲಿಟ್ ಆದ ಉದಾಹರಣೆಗಳಿವೆ. ಅಂದರೆ, ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಶಿಕ್ಷೆಯನ್ನು ಅನುಭವಿಸಬೇಕಾದ ಅನಿವಾರ್ಯತೆಯು ಸೃಷ್ಟಿಯಾಗಿರುತ್ತದೆ. ಹಾಗಾದರೆ, ನಿಮ್ಮ ವಾಟ್ಸ್ಆ್ಯಪ್ ಖಾತೆ ಡಿಲಿಟ್ ಆಗದಂತೆ ನೋಡಿಕೊಳ್ಳುವುದು ಹೇಗೆ?
ಒಂದು ವೇಳೆ, ನಿಮ್ಮ ಖಾತೆ ದೃಢೀಕೃತವಲ್ಲದ ಮಾಹಿತಿಯನ್ನು ಒಳಗೊಂಡಿದ್ದರೆ ಅಂಥ ಖಾತೆ ಬ್ಯಾನ್ ಆಗುವುದರಿಂದ ಬಚಾವ್ ಆಗಲು ಸಾಧ್ಯವಿಲ್ಲ. ಹಾಗೆಯೇ, ಕಂಪನಿಯ ಒಪ್ಪಂದಗಳನ್ನು ಉಲ್ಲಂಘಿಸುವಂಥ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ನಿಷೇಧ ಪಕ್ಕಾ. ಹಾಗಾಗಿ, ನಿಯಮಗಳನ್ನು ತಿಳಿದುಕೊಂಡು ಫಾಲೋ ಮಾಡುವುದು ಮುಖ್ಯವಾಗುತ್ತದೆ.
ಯಾವುದೇ ಮೇಸೆಜ್ ಫಾರ್ವರ್ಡ್ ಮಾಡುವ ಮುಂಚೆ ನಾಲ್ಕಾರು ಬಾರಿ ಯೋಚಿಸಿ. ಯಾಕೆಂದರೆ, ನೀವು ಫಾರ್ವರ್ಡ್ ಮಾಡುವ ಸಂದೇಶವು ಅಪಾಯಕಾರಿಯಾಗಿದ್ದರೆ, ನಕಲಿಯಾಗಿದ್ದರೆ ನಿಮ್ಮ ಖಾತೆಗೇ ಕುತ್ತು ಬರಬಹುದು. ಹಾಗಾಗಿ, ನೀವು ಕಳುಹಿಸುವ ಯಾವುದೇ ಮೇಸೆಜ್‌ನ ಅಸಲಿಯತ್ತು ಪರೀಕ್ಷಿಸುವುದು ಒಳೀತು. ಆಟೋಮೆಟೆಡ್ ಮತ್ತು ಬಲ್ಕ್ ಮೇಸೆಜ್‌ಗಳನ್ನು ಆದಷ್ಟು ತಿರಸ್ಕರಿಸಿ. ಇಂಥ ಮೇಸೆಜ್‌ಗಳನ್ನು ನೀವು ಸೆಂಡ್ ಅಥವಾ ಫಾರ್ವರ್ಡ್ ಮಾಡಿದರೆ ನಿಮ್ಮ ಖಾತೆ ಅಪಾಯಕ್ಕೆ ಸಿಲುಕಿಕೊಳ್ಳುವುದು ಖಚಿತ.
ಬ್ರಾಡ್‌ಕಾಸ್ಟ್ ಲಿಸ್ಟ್ ಅನ್ನು ಮಿತಿ ಮೀರಿ ಬಳಸಲು ಹೋಗಬೇಡಿ. ಒಂದೊಮ್ಮೆ ನೀವು ಬ್ರಾಡ್‌ಕಾಸ್ಟ್ ಲಿಸ್ಟ್ ಬಳಸಿ ಸಂದೇಶಗಳನ್ನು ಕಳುಹಿಸಿದರೆ, ಬಳಕೆದಾರರು ನಿಮ್ಮ ನಂಬರ್ ಸೇವ್ ಮಾಡಿಕೊಂಡಿದ್ದರೆ ಮಾತ್ರವೇ ಅದು ಡೆಲಿವರ್ ಆಗುತ್ತದೆ. ನೀವು ಮೇಲಿಂದ ಮೇಲಿಂದ ಬ್ರಾಡ್‌ಕಾಸ್ಟ್ ಮೇಸೆಜ್‌ಗಳನ್ನು ಬಳಸಿದರೆ, ಅವರು ನಿಮ್ಮ ಖಾತೆ ಬಗ್ಗೆ ರಿಪೋರ್ಟ್ ಮಾಡಬಹುದು. ಆಗ ಬ್ಯಾನ್ ಆಗುವ ಸಾಧ್ಯತೆಗಳೇ ಹೆಚ್ಚು.
ಅದೇ ರೀತಿ, ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲೂ ಡಿಜಿಟಲ್ ನಡವಳಿಕೆಯನ್ನು ಮರೆಯಬಾರದು. ಗ್ರೂಪ್‌ಗೆ ಯಾರನ್ನಾದರೂ ಸೇರಿಸುವ ಮುನ್ನ ಅನುಮತಿ ಪಡೆದುಕೊಳ್ಳಬೇಕು. ಒಂದೊಮ್ಮೆ ನೀವು ಗ್ರೂಪ್ ರೂಲ್ಸ್ ಬ್ರೇಕ್ ಮಾಡುತ್ತಾ ಹೋಗುತ್ತಿದ್ದರೆ, ನಿಮ್ಮ ಖಾತೆ ಕುರಿತು ರಿಪೋರ್ಟ್ ಮಾಡಬಹುದು. ಆಗಲೂ ಬ್ಯಾನ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಾಟ್ಸ್‌ಆ್ಯಪ್ ಸೂಚಿಸುವ ಯಾವುದೇ ಸೇವಾ ನಿಯಮಗಳನ್ನು ಉಲ್ಲಂಘಿಸಬಾರದು. ಅನೈತಿಕ, ಅವಮಾನಕಾರಿ, ದೌರ್ಜನ್ಯ ಸೇರಿದಂತೆ ಇನ್ನಿತರ ಕಂಟೆಂಟ್ ಇರುವ ಸಂದೇಶಗಳನ್ನು ರವಾನಿಸಿದರೆ ಅದು ನಿಮ್ಮ ಖಾತೆ ಬ್ಯಾನ್‌ಗೆ ದಾರಿ ಮಾಡಿಕೊಟ್ಟಂತೆಯೇ ಸರಿ.
ಇದನ್ನೂ ಓದಿ | Edited Message | ವಾಟ್ಸ್ಆ್ಯಪ್ ಮೆಸೇಜ್‌ಗೆ Edited ಲೇಬಲ್, ಗ್ರೂಪ್ ಸದಸ್ಯರ ಸಂಖ್ಯೆ 1024ಕ್ಕೆ ಏರಿಕೆ!