Site icon Vistara News

Indian Web Browser: ಗೂಗಲ್‌ಗೆ ಬೈ ಬೈ… ಸ್ವದೇಶಿ ಬ್ರೌಸರ್‌ಗೆ ಹೇಳಿ ಹಾಯ್! ಡೆವಲಪರ್ಸ್‌ಗೆ 3.4 ಕೋಟಿ ರೂ. ಬಹುಮಾನ!

indian web browser

ನವದೆಹಲಿ: ಭಾರತವು (India) ತನ್ನದೇ ಆದ ವೆಬ್‌ ಬ್ರೌಸರ್ (Indian Web Browser) ಹೊಂದುವ ಪ್ರಯತ್ನಗಳು ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಇಂಡಿಯನ್ ವೆಬ್ ಬ್ರೌಸರ್ ಡೆವಲಪ್‌ಮೆಂಟ್ ಚಾಲೆಂಜ್ (ಭಾರತೀಯ ವೆಬ್‌ ಬ್ರೌಸರ್ ಸ್ಪರ್ಧೆ) ಆರಂಭಿಸಿದೆ. ಗೂಗಲ್ ಕ್ರೋಮ್ (Google Chrome), ಮೋಜಿಲ್ಲಾ (Mozilla Browser), ಫೈರ್ ಫಾಕ್ಸ್ (Firefox Browser), ಮೈಕ್ರೋಸಾಫ್ಟ್ (Micro Soft) ಸೇರಿದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಬ್ರೌಸರ್‌ಗಳಿಗೆ ಪ್ರತಿಸ್ಫರ್ಧೆ ನೀಡುವಂತೆ ಭಾರತೀಯ ಬ್ರೌಸರ್ ವಿನ್ಯಾಸಗೊಳಿಸುವುದು ಈ ಸವಾಲಿನ ಉದ್ದೇಶವಾಗಿದೆ. ಸ್ವದೇಶಿ ಬ್ರೌಸರ್ ಅಭಿವೃದ್ಧಿಪಡಿಸುವ ಡೆವಲಪರ್ಸ್‌ಗೆ 3.4 ಕೋಟಿ ರೂ. ನಗದು ಬಹಮಾನ ದೊರೆಯಲಿದೆ.

ಜಾಗತಿಕ ಬಳಕೆಗಾಗಿ ಸ್ವದೇಶಿ ವೆಬ್ ಬ್ರೌಸರ್ ಅನ್ನು ರಚಿಸುವುದು ಈ ಸವಾಲಿನ ಪ್ರಾಥಮಿಕ ಉದ್ದೇಶವಾಗಿದೆ, ಇದು ಇಂಟಿಗ್ರೇಟೆಡ್ ಕಂಟ್ರೋಲರ್ ಆಫ್ ಸರ್ಟಿಫೈಯಿಂಗ್ ಅಥಾರಿಟೀಸ್ (CCA) ಇಂಡಿಯಾ ರೂಟ್ ಪ್ರಮಾಣಪತ್ರವನ್ನು ಹೊಂದಿದೆ. ಕಂಟ್ರೋಲರ್ ಆಫ್ ಸರ್ಟಿಫೈಯಿಂಗ್ ಅಥಾರಿಟೀಸ್‌ನ ಅರವಿಂದ್ ಕುಮಾರ್ ಸ್ವದೇಶಿ ವೆಬ್ ಬ್ರೌಸಿಂಗ್ ಸ್ಪರ್ಧೆಗೆ ದಿಲ್ಲಿಯಲ್ಲಿ ಚಾಲನೆ ನೀಡಿದರು. ತನ್ನದೇ ಆದ ಸ್ವಂತ ವೆಬ್‌ ಬ್ರೌಸಿಂಗ್ ಶುರು ಮಾಡುವ ಹೊಸ ಯಾನ ಆರಂಭಿಸುತ್ತಿರುವದು ಅದರ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.

ಜಗತ್ತಿನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿರುತ್ತಿರುವ ಭಾರತವು ಅಂತಾರಾಷ್ಟ್ರೀ ಬ್ರೌಸರ್‌ಗಳು ಹಾಗೂ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಾಗಿದೆ. ಭಾರತದ ಉದ್ದೇಶಿತ ಬ್ರೌಸರ್ ಅಂತಾರಾಷ್ಟ್ರೀಯ ಮಾನದಂಡಗಳಿಗೆ, ಗುಣಮಟ್ಟಕ್ಕೆ ಅನುಗುಣವಾಗಿಯೇ ಇರಲಿದೆ ಮತ್ತು ಬಳಕೆದಾರರ ಮಾಹಿತಿಗೆ ರಕ್ಷಣೆಗೆ ಒದಗಿಸಲಿದೆ ಎಂದು ಹೇಳಿದರು.

ಸಿ-ಡಿಎಸಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್ ಡಿ ಸುದರ್ಶನ್, ಸರ್ಕಾರದ ಉಪಕ್ರಮವನ್ನು ಸ್ವಾಗತಿಸಿದರು, ಇದು ಸಾರ್ವಜನಿಕರಲ್ಲಿ ವಿಶ್ವಾಸವನ್ನು ತುಂಬುತ್ತದೆ ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಉದ್ಯಮಿಗಳಿಗೆ ಹೊಸ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.

ಡೆವಲಪರ್ಸ್‌ಗೆ 3.4 ಕೋಟಿ ರೂ. ಬಹುಮಾನ

ಸ್ವದೇಶಿ ಬ್ರೌಸರ್‌ ಅಭಿವೃದ್ಧಿಪಡಿಸುವ ಡೆವಲಪರ್ಸ್‌ಗಾಗಿಯೇ ಕೇಂದ್ರ ಸರ್ಕಾರವು 3.4 ಕೋಟಿ ರೂ. ನಗದು ಬಹುಮಾನ ಹಂಚಿಕೆ ಮಾಡಿದೆ. ದೇಶದಲ್ಲಿ ಡಿಜಿಟಲ್‌ಗಳ ಅತ್ಯುನ್ನತ ಪ್ರಾಧಿಕಾರವಾದ ಭಾರತದ ಪ್ರಮಾಣೀಕರಣ ಪ್ರಾಧಿಕಾರಗಳ ನಿಯಂತ್ರಕದಲ್ಲಿ ಬ್ರೌಸರ್ ನಂಬಿಕೆ ಮೂಡುವಂತೆ ಇರಬೇಕು ಎಂದು ಸಚಿವಾಲಯವು ಷರತ್ತು ವಿಧಿಸಿದೆ.

ಈ ಸುದ್ದಿಯನ್ನೂ ಓದಿ: Google Chrome | ಗೂಗಲ್‌ ಕ್ರೋಮ್ ಪಾಸ್ವರ್ಡ್ ಫ್ರೀ! ಬಳಕೆದಾರರಿಗೆ ಈಗ ಪಾಸ್‌ಕೀ ಲಭ್ಯ

ಯಾರು ಬ್ರೌಸರ್ ರೂಪಿಸಬಹುದು?

ಭಾರತೀಯ ಟೆಕ್ ಸ್ಟಾರ್ಟ್-ಅಪ್‌ಗಳು, ಎಂಎಸ್‌ಎಂಇಗಳು, ಕಂಪನಿಗಳು ಮತ್ತು 2013ರ ಕಾಯ್ದೆಯಡಿ ನೋಂದಾಯಿತವಾದ ಎಲ್‌ಎಲ್‌ಪಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಘಟಕವು ಭಾರತೀಯ ನಾಗರಿಕರು ಅಥವಾ ಭಾರತೀಯ ಮೂಲದ ವ್ಯಕ್ತಿಗಳಿಂದ ಕನಿಷ್ಠ 51 ಪ್ರತಿಶತದಷ್ಟು ಷೇರುಗಳನ್ನು ಹೊಂದಿರಬೇಕು ಮತ್ತು ಯಾವುದೇ ವಿದೇಶಿ ನಿಗಮದ ಅಂಗಸಂಸ್ಥೆಯಾಗಿರಬಾರದು.

Exit mobile version