ನವ ದೆಹಲಿ: ಬಹುಶಃ ಜೈಪುರದ ಈ ಹುಡುಗ ಬಗ್(ತಾಂತ್ರಿಕ ದೋಷ) ಕಂಡು ಹಿಡಿಯದೇ ಹೋಗಿದ್ದರೆ, ಫೋಟೋ ಷೇರಿಂಗ್ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್(Instagram)ನ ಕೋಟ್ಯಂತರ ಖಾತೆಗಳು ಹ್ಯಾಕರ್ಸ್‌ಗೆ ಸುಲಭ ತುತ್ತಾಗಲಿದ್ದವು! ಹೌದು, ಇದು ನಿಜ, ನೀರಜ್ ಶರ್ಮಾ ಎಂಬ ವಿದ್ಯಾರ್ಥಿ, ಇನ್‌ಸ್ಟಾಗ್ರಾಮ್‌ದಲ್ಲಿನ ಬಗ್ ಪತ್ತೆ ಹಚ್ಚಿದ್ದಾನೆ. ಇದಕ್ಕಾಗಿ ಆತನಿಗೆ 38 ಲಕ್ಷ ರೂ. ಬಹುಮಾನ ಕೂಡ ದೊರೆತಿದೆ. ಒಂದು ವೇಳೆ, ಈ ಬಗ್ ಗೊತ್ತಾಗದೇ ಹೋಗಿದ್ದರೆ, ಹ್ಯಾಕರ್ಸ್‌ಗೆ ತುಂಬ ಸುಲಭವಾಗಿ ಯಾವುದೇ ಬಳಕೆದಾರರ ಥಂಬ್‌ನೇಲ್ ಬದಲಿಸಲು ಸಾಧ್ಯವಾಗುತ್ತಿತ್ತು.
ಈ ತಾಂತ್ರಿಕ ಲೋಪವನ್ನು ಪತ್ತೆ ಹಚ್ಚಿದ ಶರ್ಮಾ ಅವರಿಗೆ ಇನ್‌ಸ್ಟಾಗ್ರಾಮ್ ಬಹುಮಾನವಾಗಿ 38 ಲಕ್ಷ ರೂ. ನೀಡಿದೆ. ಮೆಟಾ ಒಡೆತನದ ಫೇಸ್‌ಬುಕ್‌ನ ಇನ್‌ಸ್ಟಾಗ್ರಾಮ್‌ದಲ್ಲಿ ಬಗ್ ಇತ್ತು. ಅದರಿಂದಾಗಿ ಯಾವುದೇ ಖಾತೆಯ ಥಂಬ್‌ನೇಲ್ ಅನ್ನು ಸುಲಭವಾಗಿ ಬದಲಿಸಬಹುದಾಗಿತ್ತು. ಪಾಸ್ವರ್ಡ್ ಎಷ್ಟೇ ಸ್ಟ್ರಾಂಗ್ ಆಗಿದ್ದರೂ ಮೀಡಿಯಾ ಐಡಿಯೊಂದಿದ್ದರೆ ಆರಾಮವಾಗಿ ಹ್ಯಾಕ್ ಮಾಡಲು ಸಾಧ್ಯವಾಗುತ್ತಿತ್ತು ಎಂದು ಶರ್ಮಾ ತಿಳಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ನನ್ನ ಇನ್‌ಸ್ಟಾ ಖಾತೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತು. ಹಾಗಾಗಿ, ಸಮಸ್ಯೆ ಎಲ್ಲಾಗಿದೆ ಎಂದು ಹುಡುಕಲು ಆರಂಭಿಸಿದೆ. ಅಂತಿಮವಾಗಿ ಜನವರಿ 31ರಂದು ಬಗ್(ತಾಂತ್ರಿಕ ಲೋಪ) ಇರುವುದನ್ನು ಪತ್ತೆ ಹಚ್ಚಿದೆ. ಬಳಿಕ ಇದಕ್ಕೆ ಸಂಬಂಧಿಸಿದ ವರದಿಯನ್ನು ಫೇಸ್‌ಬುಕ್‌ಗೆ ಕಳುಹಿಸಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ | Instagram | ಹೊಸ ವಿನ್ಯಾಸದಲ್ಲಿ ʼಇನ್‌ಸ್ಟಾಗ್ರಾಂ ಸ್ಯಾನ್ಸ್ʼ