Site icon Vistara News

5G India: ಭಾರತದ 5ಜಿ ವೇಗಕ್ಕೆ ಸಾಟಿ ಇಲ್ಲ; ನಮ್ಮ ಸ್ಪೀಡ್‌ ಮುಂದೆ ಜಪಾನ್‌, ಬ್ರಿಟನ್‌ ಕೂಡ ಹಿಂದೆ!

5G In India

India's 5G Network Speed Beats UK, Japan; Ranks Number 10 On Global List In 2023

ನವದೆಹಲಿ: ದೇಶದಲ್ಲಿ 5ಜಿ ಇಂಟರ್‌ನೆಟ್‌ ಸೇವೆ ಜಾರಿಯಾದ (5G India) ಒಂದೇ ವರ್ಷದಲ್ಲಿ ಜಾಗತಿಕವಾಗಿ ಪ್ರಮುಖ ಸಾಧನೆ ಮಾಡಲಾಗಿದೆ. ಜಾಗತಿಕವಾಗಿ 5ಜಿ ಇಂಟರ್‌ನೆಟ್‌ ವೇಗದಲ್ಲಿ (5G Internet Speed In India) ಭಾರತದ 5ಜಿ ಸೇವೆಯು ಟಾಪ್‌ 10ನೇ ಸ್ಥಾನ ಪಡೆದಿದೆ. ಅಷ್ಟೇ ಅಲ್ಲ, ಜಪಾನ್‌, ಬ್ರಿಟನ್‌ಅನ್ನೂ ಕೂಡ ಭಾರತದ 5ಜಿ ಅಂತರ್ಜಾಲ ವೇಗವು ಹಿಂದಿಕ್ಕಿದೆ ಎಂಬುದು ಮಹೋನ್ನತ ಸಾಧನೆಯಾಗಿದೆ. ಸ್ಪೀಡ್‌ಟೆಸ್ಟ್‌.ನೆಟ್‌ (Speedtest.net) ಸೈಟ್‌ ಆದ ಊಕ್ಲಾ (Ookla) ಸಂಸ್ಥೆಯು ಈ ಕುರಿತು ವರದಿ ಮಾಡಿದೆ.

ಅಷ್ಟೇ ಅಲ್ಲ, ಸ್ಪೀಡ್‌ಟೆಸ್ಟ್‌ ಗ್ಲೋಬಲ್‌ ಇಂಡೆಕ್ಸ್‌ನಲ್ಲಿ 2022ರ ಸೆಪ್ಟೆಂಬರ್‌ನಿಂದ 2023ರ ಆಗಸ್ಟ್ ಮಧ್ಯೆ ಭಾರತವು 72 ಸ್ಥಾನ ಮೇಲೇರಿರುವುದು ಗಮನಾರ್ಹ ಸಾಧನೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಭಾರತದ 5ಜಿಯು 312.09 ಎಂಬಿಪಿಎಸ್‌ (ಸೆಕೆಂಡ್‌ಗೆ 312 ಎಂಬಿ ಡೌನ್‌ಲೋಡ್‌ ಮಾಡುವ ಸಾಮರ್ಥ್ಯ) ವೇಗವನ್ನು ಹೊಂದಿದ್ದು, ಜಗತ್ತಿನಲ್ಲೇ 10ನೇ ಸ್ಥಾನ ಪಡೆದಿದೆ. 2022ರ ಮೂರನೇ ತ್ರೈಮಾಸಿಕ ವರದಿಯಲ್ಲಿ ಬ್ರೆಜಿಲ್‌ 10ನೇ ಸ್ಥಾನ ಹೊಂದಿತ್ತು. ಆದರೆ, ಬ್ರೆಜಿಲ್‌ ವೇಗ ಈಗ 443.93 ಎಂಬಿಪಿಎಸ್‌ ಇರುವುದರಿಂದ 5ನೇ ಸ್ಥಾನಕ್ಕೇರಿದೆ.

ಟಾಪ್‌ 3 ರಾಷ್ಟ್ರಗಳ 5ಜಿ ವೇಗ

ದೇಶವೇಗ
ಯುಎಇ592.01 Mbps
ದಕ್ಷಿಣ ಕೊರಿಯಾ507.59 Mbps
ಮಲೇಷ್ಯಾ485.24 Mbps

2023ರ ಮೂರನೇ ತ್ರೈಮಾಸಿಕ ವರದಿಯಲ್ಲಿ ಯುಎಇ 5ಜಿ ವೇಗವು ಶೇ.14ರಷ್ಟು ಸುಧಾರಣೆಯಾಗಿದೆ. ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ 5ಜಿ ವೇಗವೂ ಜಾಸ್ತಿಯಾಗಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಕತಾರ್‌ ಇದ್ದರೆ, ಬ್ರೆಜಿಲ್‌ ಐದನೇ ಸ್ಥಾನದಲ್ಲಿದೆ. ಡಾಮಿನಿಕಲ್‌ ರಿಪಬ್ಲಿಕ್, ಕುವೈತ್‌, ಮಕಾವು ಹಾಗೂ ಸಿಂಗಾಪುರ ದೇಶಗಳು ಕ್ರಮವಾಗಿ 6, 7, 8 ಮತ್ತು 9ನೇ ಸ್ಥಾನದಲ್ಲಿವೆ. ಭಾರತ 10ನೇ ಸ್ಥಾನಕ್ಕೆ ಏರಿದೆ. ಟಾಪ್‌ 10ರಲ್ಲಿ ಅಮೆರಿಕ, ಜಪಾನ್‌, ಚೀನಾ, ಬ್ರಿಟನ್‌ ಸ್ಥಾನ ಗಳಿಸದಿರುವುದು ಮಹತ್ವದ ಸಂಗತಿಯಾಗಿದೆ.

5g

ಇದನ್ನೂ ಓದಿ: Reliance Jio: ದೇಶದಾದ್ಯಂತ 5ಜಿ ಜಾರಿಯಲ್ಲಿ ಅವಧಿಗೂ ಮುಂಚೆ ಗುರಿ ತಲುಪಿದ ರಿಲಯನ್ಸ್ ಜಿಯೋ

ಪ್ರಧಾನಿ ನರೇಂದ್ರ ಮೋದಿ ಅವರು 2022ರ ಅಕ್ಟೋಬರ್‌ 1ರಂದು ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದರು. ದೇಶದ 13 ನಗರಗಳಲ್ಲಿ ಮಾತ್ರ ಆರಂಭದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಾಗಿತ್ತು. ಏರ್‌ಟೆಲ್‌ ಗ್ರಾಹಕರು ಮಾತ್ರ ಮೊದಲು 5ಜಿ ಅಂತರ್ಜಾಲ ಸೇವೆ ಪಡೆಯುತ್ತಿದ್ದರು. ಆದರೆ, ಈಗ ಬೆಂಗಳೂರು ಸೇರಿ ದೇಶದ ಬಹುತೇಕ ನಗರಗಳಲ್ಲಿ 5ಜಿ ಸೇವೆ ಇದೆ. ಈಗ ರಿಲಯನ್ಸ್‌ ಜಿಯೋ ಕೂಡ ದೇಶದ ಬಹುತೇಕ ನಗರಗಳಲ್ಲಿ 5ಜಿ ಸೇವೆ ಆರಂಭಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version