ನವದೆಹಲಿ: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಇನ್ಫಿನಿಕ್ಸ್ ಕಂಪನಿಯು ಇನ್ಫಿನಿಕ್ಸ್ ಸ್ಮಾರ್ಟ್ 7 (Infinix Smart 7) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇತ್ತೀಚೆಗಷ್ಟೇ ಈ ಫೋನ್ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಭಾರತದಲ್ಲಿ ಬಿಡುಗಡೆಯಾಗಿರುವ ಈ ಫೋನ್‌ನಲ್ಲಿ 6000mAH ಬ್ಯಾಟರಿ ಇದೆ. ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 33 ದಿನಗಳವರೆಗೆ ಬರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. 50 ಗಂಟೆಗಳು ಟಾಕ್‌ಟೈಮ್ ಇದೆ. ಹಾಗೆಯೇ ಒಮ್ಮೆ ಚಾರ್ಜ್ ಮಾಡಿದರೆ ಸತತವಾಗಿ 24 ಗಂಟೆ ವಿಡಿಯೋ ಪ್ಲೇ ಮಾಡಬಹುದು.
ಇನ್ಫಿನಿಕ್ಸ್ ಸ್ಮಾರ್ಟ್ 7 ವಿಶೇಷತೆಗಳೇನು?
ಈ ಇನ್ಫಿನಿಕ್ಸ್ ಸ್ಮಾರ್ಟ್ 7 ಫೋನ್ 6.6 ಇಂಚ್ ಐಪಿಎಸ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಇದೆ. ರಿಫ್ರೇಶ್ ರೇಟ್ 60Hz ಮತ್ತು 500nits ಬ್ರೈಟ್ನೆಸ್ ಇದೆ. Unisoc SC9863A1 SoC ಮತ್ತು PowerVR GPU ಈ ಸ್ಮಾರ್ಟ್‌ಫೋನ್‌ಗೆ ಶಕ್ತಿಯನ್ನು ಒದಗಿಸುತ್ತವೆ. ಇದು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಜತೆಗೆ, ಬಳಕೆದಾರರು ವರ್ಚುವಲ್ ಆಗಿ ಹೆಚ್ಚುವರಿಯಾಗಿ 3ಜಿಬಿಯಷ್ಟು RAM ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.
ಕ್ಯಾಮೆರಾ ಹೇಗಿದೆ?
ಈ ಹೊಸ ಇನ್ಫಿನಿಕ್ಸ್ ಸ್ಮಾರ್ಟ್ 7 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾ ಸೆಟ್ ಅಪ್ ಇದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಇದ್ದು ಎಐ ಸೆನ್ಸರ್‌ನೊಂದಿಗೆ ಎಲ್ಇಡಿ ಫ್ಲ್ಯಾಶ್ ಒಳಗೊಂಡಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಕ್ಯಾಮೆರಾ ಆಗಿದೆ. ಇನ್ನೂ ಫ್ರಂಟ್‌ನಲ್ಲಿ ಕಂಪನಿಯು 5 ಮೆಗಾಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. ಈ ಕ್ಯಾಮೆರಾವನ್ನು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ವಾಟರ್‌ಡ್ರಾಪ್‌ನಲ್ಲಿ ನಾಚ್‌ನಲ್ಲಿ ಪ್ಲೇಸ್ ಮಾಡಲಾಗಿದೆ.
ಅದ್ಭುತ ಬ್ಯಾಟರಿ ಇದೆ
ಈ ವಿಭಾಗದ ಸ್ಮಾರ್ಟ್‌ಫೋನ್‌ಗಳ ಪೈಕಿ ಇದೇ ಮೊದಲ ಬಾರಿಗೆ ಇನ್ಫಿನಿಕ್ಸ್ ಸ್ಮಾರ್ಟ್ 7 ಫೋನ್ ಗರಿಷ್ಠ ಸಾಮರ್ಥ್ಯದ ಬಾಟರಿಯನ್ನು ಒಳಗೊಂಡಿದೆ. ಕಂಪನಿಯು 6,000mAH ಬ್ಯಾಟರಿಯನ್ನು ನೀಡಿದ್ದು ಇದು 10 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ರಿಯರ್‌ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಮೆಮೋರಿ ಹೆಚ್ಚಳಕ್ಕೆ ಕಂಪನಿಯು ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್ ಕೂಡ ಒದಗಿಸಿದೆ.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಕಳೆದು ಹೋಗಿದೆಯೇ? IMEI Number ಮೂಲಕ ಟ್ರ್ಯಾಕ್ ಅಥವಾ ಬ್ಲಾಕ್ ಮಾಡಬಹುದು!
ಇನ್ಫಿನಿಕ್ಸ್ ಸ್ಮಾರ್ಟ್ 7 ಬೆಲೆ ಎಷ್ಟು?
4GB RAM ಮತ್ತು 64GB ಸ್ಟೋರೇಜ್ ಇನ್ಫಿನಿಕ್ಸ್ ಸ್ಮಾರ್ಟ್ 7 ವೆರಿಯಂಟ್ ಫೋನ್ ಬೆಲೆ 7,299 ರೂ. ಇದೆ. ಪ್ಲಿಫ್‌ಕಾರ್ಟ್ ಮೂಲಕ ಫೆಬ್ರವರಿ 27ರಿಂದ ಈ ಫೋನ್ ಖರೀದಿಸಬಹುದಾಗಿದೆ. ನೈಟ್ ಬ್ಲ್ಯಾಕ್, ಆ್ಯಜುರ್ ಬ್ಲ್ಯೂ ಮತ್ತು ಎಮರ್ಲ್ಡ್ ಗ್ರೀನ್ ಬಣ್ಣಗಳಲ್ಲಿ ಈ ಫೋನ್ ಮಾರಾಟಕ್ಕೆ ಸಿಗಲಿದೆ. ಈ ಫೋನ್ ಮೆಮೋರಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.