ಬೆಂಗಳೂರು: ಪ್ರಸಿದ್ಧ ವಿಡಿಯೋ ಮತ್ತು ಫೋಟೋ ಷೇರಿಂಗ್ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್ ಕೆಲ ಕಾಲ ಸ್ಥಗಿತವಾಗಿದ್ದು(Instagram Down), ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರು ತೀವ್ರ ತೊಂದರೆಯನ್ನು ಎದುರಿಸಿದ ಘಟನೆ ಬುಧವಾರ ನಡೆದಿದೆ. ಸುಮಾರು 27 ಸಾವಿರಕ್ಕೂ ಅಧಿಕ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಅಕ್ಸೆಸ್ ಪಡೆಯಲು ಪರದಾಡುವಂತಾಯಿತು.
ಡೌನ್‌ಡೆಕ್ಟರ್ ಪ್ರಕಾರ ಬೆಳಗ್ಗೆ ಸುಮಾರು 7.00 ಗಂಟೆ ದಾಖಲಾದ ರಿಪೋರ್ಟ್‌ಗಳ ಪ್ರಕಾರ ಅರ್ಧದಷ್ಟು ಮಂದಿ ಸರ್ವರ್ ಡೌನ್ ಬಗ್ಗೆ ಹೇಳಿಕೊಂಡಿದ್ದರು. ಶೇ.20 ಬಳಕೆದಾರರು ಲಾಗಿನ್ ಮಾಡುತ್ತಿದ್ದಾಗ ಉಂಟಾದ ತೊಂದರೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: GMail Server Down | ಭಾರತ ಸೇರಿ ವಿಶ್ವಾದ್ಯಂತ ಜಿಮೇಲ್ ಸರ್ವರ್ ಡೌನ್, ಕೋಟ್ಯಂತರ ಜನಕ್ಕೆ ತೊಂದರೆ
ವಿಶೇಷ ಎಂದರೆ, ಈ ಬಗ್ಗೆ ಇನ್‌ಸ್ಟಾ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಇನ್‌ಸ್ಟಾ ಡೌನ್ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿರುವುದು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ತೊಂದರೆಯನ್ನು ಎದುರಿಸುತ್ತಿರುವ ಬಳಕೆದಾರರು, ಇನ್‌ಸ್ಟಾ ಓಪನ್ ಮಾಡಲಾಗುತ್ತಿಲ್ಲ. ಓಪನ್ ಮಾಡಲು ಹೋದಾಗ ಕ್ರ್ಯಾಶಿಂಗ್ ಆಗುತ್ತಿದೆ. ಜತೆಗೆ, ಲಾಗಿನ್ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.