ಮುಂಬಯಿ: ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ವಲಯದ ಜೆರೋಧಾದ ಮೊಬೈಲ್ ಆ್ಯಪ್ ಕೈಟ್‌ನಲ್ಲಿ ಗುರುವಾರ ಬೆಳಗ್ಗೆ ಕೆಲಕಾಲ ದಿಢೀರ್ ತಾಂತ್ರಿಕ ಅಡಚಣೆಯಾಗಿರುವ ಬಗ್ಗೆ ಷೇರು ಹೂಡಿಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರಿದರು.ಬಳಿಕ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಜೆರೋಧಾ, ತಾಂತ್ರಿಕ ಅಡಚಣೆಯನ್ನು ಬಗೆಹರಿಸಲಾಗಿದೆ ಎಂದು ಸ್ಪಷ್ಟಪಡಿಸಿತು.
ಷೇರು ಮಾರುಕಟ್ಟೆಯ ಬೆಳಗ್ಗಿನ ವಹಿವಾಟಿನಲ್ಲಿ ಷೇರಿನ ದರಗಳು ಜೆರೋಧಾ ಆ್ಯಪ್‌ನಲ್ಲಿ ಅಪ್‌ಡೇಟ್ ಆಗುತ್ತಿಲ್ಲ ಎಂದು ಷೇರುದಾರರು ಆರೋಪಿಸಿದರು. ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅಡಚಣೆ ಕಾಣಿಸಿದ ಬಳಿಕ ನೆಟ್ಟಿಗರೊಬ್ಬರು ” ಜೆರೋಧಾ ತಂಡದ ಪ್ರತಿಯೊಬ್ಬರೂ ರಕ್ಷಾಬಂಧನದ ರಜೆಯಲ್ಲಿ ಇದ್ದಾಗʼ ಎಂದು ಟೀಕಿಸಿದರು.
ಕೆಲವು ಹೂಡಿಕೆದಾರರಿಗೆ ಆ್ಯಪ್‌ನಲ್ಲಿ ಷೇರು ದರಗಳು ಅಪ್‌ಡೇಟ್ ಆಗುತ್ತಿರಲಿಲ್ಲ. ಆದರೆ ಈಗ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಯಾವುದೇ ಆರ್ಡರ್ ಪ್ಲೇಸ್‌ಮೆಂಟ್‌ಗಳಿಗೆ ಸಮಸ್ಯೆಯಾಗಿಲ್ಲ ಎಂದು ಜೆರೋಧಾ ತಿಳಿಸಿದೆ.