Site icon Vistara News

5G and Cancer | 5G ಮೊಬೈಲ್‌ಗಳಿಂದ ಕ್ಯಾನ್ಸರ್‌ ಬರುತ್ತಾ?, ಅಧ್ಯಯನ ವರದಿಗಳು ಹೇಳುವುದೇನು?

5g

ಮೊಬೈಲ್‌ (Mobile) ದೂರವಾಣಿಗಳು ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿದ ದಿನಗಳಲ್ಲಿ, ಅಂದರೆ ಸುಮಾರು ಮೂರು ದಶಕಗಳ ಹಿಂದೆ, ಅವುಗಳ ಸಾಧಕ-ಬಾಧಕಗಳ ಬಗ್ಗೆ ಜನರಲ್ಲಿ ಕುತೂಹಲವಿತ್ತು. ನಿಸ್ತಂತುವಾಗಿ ಕೆಲಸ ಮಾಡುವ ಇವುಗಳು ವಿಕಿರಣ ಸೂಸುತ್ತವೆಯೇ? ಇವುಗಳು ಸೂಸುವ ಕಿರಣಗಳು ಕ್ಯಾನ್ಸರ್‌ಕಾರಕವೇ ಎಂಬ ಬಗ್ಗೆ ಅಂದು ಆರಂಭವಾದ ಚರ್ಚೆ ಇಂದಿಗೂ ಜಾರಿಯಲ್ಲಿದೆ. ಅದರಲ್ಲೂ ಈಗ ೫ಜಿ ತಂತ್ರಜ್ಞಾನದ (5G Technology) ಹೊಸಿಲಲ್ಲಿರುವ ನಾವು ವಿಕಿರಣಗಳಿಗೆ ಎಷ್ಟು ಒಡ್ಡಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಎಲ್ಲರ ಕುತೂಹಲ, ಆತಂಕ ಸಹಜವಾದದ್ದು. ವಿದ್ಯುದಯಸ್ಕಾಂತೀಯ ತರಂಗಗಳ ಸ್ತರಗಳಲ್ಲಿ ರೇಡಿಯೊ ಫ್ರಿಕ್ವೆನ್ಸೀ ವಲಯದಲ್ಲಿ ಮೊಬೈಲ್‌ ದೂರವಾಣಿಗಳು ಕಿರಣಗಳನ್ನು ಸೂಸುತ್ತವೆ. ೨ಜಿ, ೩ಜಿ ಮತ್ತು ೪ಜಿ ಮೊಬೈಲುಗಳು ೦.೭ ರಿಂದ ೨.೭ ಗಿಗಾ ಹರ್ಡ್ಸ್‌ ಕಂಪನಾಂಕಗಳಲ್ಲಿ ಕೆಲಸ ಮಾಡಿದರೆ, ೫ಜಿ ದೂರವಾಣಿಗಳು ೮೦ ಗಿಗಾ ಹರ್ಟ್ಸ್‌ ಕಂಪನಗಳಲ್ಲಿ, ಅಂದರೆ ತುಂಬ ಕಡಿಮೆ ಶಕ್ತಿ ಮತ್ತು ಕಂಪನಗಳಲ್ಲಿ ಕೆಲಸ ಮಾಡುತ್ತವೆ. ಅಂದಾಜಿಗೆ ಹೇಳುವುದಾದರೆ, ಮೈಕ್ರೋವೇವ್ ಅವನ್‌ಗಳಿಂದ ಬರುವಷ್ಟೇ ರೇಡಿಯೇಶನ್‌ ಈ ದೂರವಾಣಿಗಳಿಂದ ಸೂಸುತ್ತದೆ. ಈ ಕಿರಣಗಳಿಂದ ನಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೇನು ಎಂಬ ಬಗ್ಗೆ ಹಲವಾರು ವರ್ಷಗಳಿಂದ ಅಧ್ಯಯನ ನಡೆಸಲಾಗುತ್ತಿದೆ. ಜನರಿಂದ ಈ ಬಗ್ಗೆ ಮತ್ತೆಮತ್ತೆ ಕೇಳಿ ಬರುತ್ತಿರುವ ಆತಂಕದ ದನಿಯನ್ನು ಆಲಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ೧೯೯೬ರಿಂದಲೇ ಈ ಕುರಿತು ಹಲವಾರು ಅಧ್ಯಯನಗಳನ್ನು ಹಮ್ಮಿಕೊಂಡಿದೆ. ಮೊಬೈಲ್‌ ಬಳಕೆ ಮತ್ತು ಕ್ಯಾನ್ಸರ್‌ ನಡುವಿನ ಸಂಬಂಧ ಏನು ಎನ್ನುವ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ(5G and Cancer).

ಔದ್ಯೋಗಿಕ ಮತ್ತು ಪಾರಿಸರಿಕ ಔಷಧಗಳ ಬಗೆಗಿನ ಭಾರತೀಯ ನಿಯತಕಾಲಿಕ ೨೦೧೬ರಲ್ಲಿ ನಡೆಸಿದ ಅಧ್ಯಯನ ಅಥವಾ ೨೦೧೯ರಲ್ಲಿ ಕ್ಯಾನ್ಸರ್‌ ರಿಸರ್ಚ್‌ ಸೊಸೈಟಿಯ ಅಧ್ಯಯನದ ಪ್ರಕಾರ, ಮೊಬೈಲ್‌ ಬಳಕೆಯಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಿಲ್ಲ. ಬ್ರಿಟನ್‌ನಲ್ಲಿ ನಡೆಸಲಾಗಿದ್ದ ಅಧ್ಯಯನವೊಂದರಲ್ಲಿ ಮೆದುಳಿನ ಗಡ್ಡೆಗೆ ಮೊಬೈಲ್‌ ವಿಕಿರಣ ಲಾರಣವಾಗುವ ಬಗ್ಗೆ ಕೆಲವು ಶಂಕೆಗಳು ವ್ಯಕ್ತವಾಗಿದೆ. ಆದರೆ ಇಡಿ ಅಧ್ಯಯನಕ್ಕೆ ಸೂಕ್ತ ಮುಕ್ತಾಯ ಒದಗಿಬಂದಿಲ್ಲ. ಕ್ಯಾನ್ಸರ್‌ ಹೆಚ್ಚಳಕ್ಕೆ ಮೊಬೈಲ್‌ ಬಳಕೆಗಿಂತಲೂ ದೋಷಪೂರಿತ ಜೀವನಶೈಲಿ, ವ್ಯಸನಗಳು, ಆನುವಂಶಿಕತೆ, ನಾನಾ ರೀತಿಯ ಸೋಂಕುಗಳು ಮುಂತಾದ ಹಲವು ಕಾರಣಗಳನ್ನು ನೀಡಲಾಗಿದೆ. ಮೊಬೈಲ್‌ ಬಳಕೆ ಮಾತ್ರವಲ್ಲ, ಎಷ್ಟು ದೀರ್ಘವಾಗಿ ಬಳಸಲಾಗುತ್ತದೆ, ದೇಹದಿಂದ ಎಷ್ಟು ಸಮೀಪಕ್ಕೆ ಅದನ್ನು ಹಿಡಿಯಲಾಗುತ್ತದೆ, ಯಾವ ಮಾಡೆಲ್‌ ಮೊಬೈಲ್‌ ಉಪಕರಣವದು, ಮೊಬೈಲ್‌ ಟವರ್‌ ಎಷ್ಟು ದೂರವಿದೆ- ಇಂತಹ ಹಲವಾರು ಪ್ರಶ್ನೆಗಳು ಸಹ ಮಹತ್ವ ಪಡೆದುಕೊಂಡಿವೆ.

ವಿಕಿರಣಗಳು ಇನ್ನೆಲ್ಲಿ?: ಹಾಗಾದರೆ ಆಧುನಿಕ ಜೀವನಶೈಲಿಯಲ್ಲಿ ಇನ್ನೂ ಎಲ್ಲೆಲ್ಲಿ ನಾವು ವಿಕಿರಣಗಳಿಗೆ ಒಡ್ಡಿಕೊಳ್ಳುತ್ತಿದೇವೆ ಎಂಬ ಕುತೂಹಲ ಇರಬಹುದು. ಮೊಬೈಲ್‌ ದೂರವಾಣಿ, ಮೈಕ್ರೋವೇವ್‌ ಅವನ್‌ಗಳು, ಇಂಡಕ್ಷನ್‌ ಕುಕ್‌ಟಾಪ್‌ಗಳು- ಇಂಥವು ಕಡಿಮೆ ವಿಕಿರಣಗಳನ್ನು ಹೊಮ್ಮಿಸುವಂಥವು. ಆರೋಗ್ಯ ತಪಾಸಣೆಗಾಗಿ ಎಕ್ಸ್‌ ರೇ ಅಥವಾ ಸಿಟಿ ಸ್ಕ್ಯಾನ್‌ ಸೇರಿದಂತೆ ನಡೆಸಲಾಗುವ ನಾನಾ ರೀತಿಯ ಪರೀಕ್ಷೆಗಳು ಇವೆಲ್ಲದಕ್ಕಿಂತ ಹೆಚ್ಚಿನ ರೇಡಿಯೇಶನ್‌ ಹೊಮ್ಮಿಸುತ್ತವೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಆರೋಗ್ಯ ತಪಾಸಣೆಯಲ್ಲಿ ಬಳಸಲಾಗುವ ಹಲವು ರೀತಿಯ ವಿಕಿರಣಗಳು ದೇಹಕ್ಕೆ ಹಾನಿಯುಂಟುಮಾಡಬಲ್ಲವು. ಅದರಲ್ಲೂ, ದೇಹವನ್ನು ಒಡ್ಡಿಕೊಳ್ಳಬಹುದಾದ ಕನಿಷ್ಟ ಅಥವಾ ಗರಿಷ್ಟ ಮಟ್ಟದ ವಿಕಿರಣ ಎಂಬುದಿಲ್ಲ. ಎಲ್ಲಿ ಸಾಧ್ಯವೋ ಅಲ್ಲಿ ವಿಕಿರಣಗಳಿಂದ ದೂರವಿರುವುದು ಕ್ಷೇಮ. ಹಾಗೆಂದು ಅಗತ್ಯ ಆರೋಗ್ಯ ತಪಾಸಣೆಗಳನ್ನು ತಪ್ಪಿಸಿ, ಮತ್ತೊಂದು ಸಮಸ್ಯೆ ಸೃಷ್ಟಿಸಿಕೊಳ್ಳುವುದೂ ಜಾಣತನವಲ್ಲ. ಈ ನಿಟ್ಟಿನಲ್ಲಿ ಎಂಆರ್‌ಐ ಪರೀಕ್ಷೆ ಎಲ್ಲದಕ್ಕಿಂತ ಸುರಕ್ಷಿತ ಎನಿಸಿದೆ.

ಈ ಬಗ್ಗೆ ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯ ಅಭಿಪ್ರಾಯ ಹೀಗಿದೆ- “ಒಂದು ಸರಳ ಎಕ್ಸ್‌ರೇ ಪರೀಕ್ಷೆಯಿಂದ ನಮ್ಮ ದೇಹಕ್ಕೆ ಸೇರುವ ವಿಕಿರಣಕ್ಕಿಂತ ವಾರ್ಷಿಕವಾಗಿ ನೈಸರ್ಗಿಕ ಸ್ವರೂಪದಲ್ಲಿ ದೇಹ ಪ್ರವೇಶಿಸುವ ವಿಕಿರಣ ಅಂಶವೇ ಸಾಕಷ್ಟು ಹೆಚ್ಚಿದೆ. ಹಾಗೆಂದು ಅಲ್ಪ ವಿಕಿರಣವೂ ಹಾನಿ ಮಾಡಬಹುದು, ಕ್ಯಾನ್ಸರ್‌ ತರಬಹುದು ಅಥವಾ ವಂಶವಾಹಿಗಳನ್ನು ವಿರೂಪ ಮಾಡಬಹುದು ಎಂಬುದನ್ನು ಅಲ್ಲಗಳೆಯಲಾಗದು. ಅದಕ್ಕಾಗಿಯೇ ಅಗತ್ಯವಿಲ್ಲದ ಎಷ್ಟು ಸಣ್ಣ ರೇಡಿಯೇಶನ್‌ ಪರೀಕ್ಷೆಯನ್ನೂ ವೈದ್ಯವಿಜ್ಞಾನ ಸಮರ್ಥಿಸುವುದಿಲ್ಲ. ಹಾಗೆಂದು ಮಾಡಲೇಬೇಕಾದ ಪರೀಕ್ಷೆಗಳನ್ನು ಇಂಥ ಕಾರಣಗಳಿಂದ ತಪ್ಪಿಸುವುದೂ ಸರಿಯಲ್ಲ.

ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಮೊಬೈಲ್‌ ಬಳಕೆ ಅತಿಯಾದರೆ ಹಾನಿ ಕಟ್ಟಿಟ್ಟಿದ್ದು. ಕ್ಯಾನ್ಸರ್‌ ಬಂದರೆ ಮಾತ್ರವೇ ಆರೋಗ್ಯಕ್ಕೆ ಹಾನಿ ಎಂದಕೊಳ್ಳದೇ, ಅತಿಯಾದ ಸ್ಕ್ರೀನ್‌ಟೈಮ್‌ ತರಬಹುದಾದ ಸಮಸ್ಯೆಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಸೂಕ್ತ. ಬ್ಯಾಟರಿ ಮುಗಿಯುತ್ತಿರುವಾಗ ಫೋನ್‌ ಉಪಯೋಗಿಸದೆ ಚಾರ್ಜ್‌ ಮಾಡುವುದು, ಕಿವಿಗಿಟ್ಟು ಮಾತಾಡುವ ಬದಲು ಸ್ಪೀಕರ್‌ ಅಥವಾ ಇಯರ್‌ ಪ್ಲಗ್‌ ಉಪಯೋಗಿಸುವುದು- ಇಂಥ ಕ್ರಮಗಳು ಸದಾ ಸುರಕ್ಷಿತ.

ಇದನ್ನೂ ಓದಿ | 5G Service Launch | ಮೊದಲ ಹಂತದಲ್ಲಿ ಬೆಂಗಳೂರಲ್ಲೂ 5ಜಿ ಲಭ್ಯ ಇದೆಯಾ?

Exit mobile version