Site icon Vistara News

Chandrayana-3 : ಚಂದ್ರಯಾನ ಲ್ಯಾಂಡ್​ ಆಗುವ ದಿನಾಂಕ ಬದಲಾಗಲಿದೆಯಾ? ಹೊಸ ಅಪ್ಡೇಟ್​ ಇಲ್ಲಿದೆ

Chandrayana-3

ಬೆಂಗಳೂರು: ಆಗಸ್ಟ್ 23 ರಂದು ಸಂಜೆ ಚಂದ್ರಯಾನ -3ರ (Chandrayana-3) ಲ್ಯಾಂಡರ್​ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಭಾರತಿಯ ಬಾಹ್ಯಾಕಾಶ ಸಂಸ್ಥೆ (ISRO) ಸಮಯ ಹಾಗೂ ದಿನಾಂಕವನ್ನು ಸ್ಪಷ್ಟವಾಗಿ ಘೋಷಿಸಿದೆ. ಏತನ್ಮಧ್ಯೆ, ಹಿರಿಯ ವಿಜ್ಞಾನಿ ಸೋಮವಾರ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಆ ದಿನದಂದು ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಮಾತ್ರ ಲ್ಯಾಂಡಿಂಗ್ (Soft Landing) ಮಾಡುತ್ತದೆ ಎಂದು ಹೇಳಿದ್ದಾರೆ ಈ ಮೂಲಕ ಅವರು ಅನಿವಾರ್ಯವಾದರೆ ಆಗಸ್ಟ್ 27ರಂದು ಹೊಸ ಪ್ರಯತ್ನ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ಚಂದ್ರಯಾನ -3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು, ಲ್ಯಾಂಡರ್ ಮಾಡ್ಯೂಲ್​ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಅದನ್ನು ಇಳಿಸುವುದು ಸೂಕ್ತವೇ ಅಥವಾ ಇಲ್ಲವೇ ಎಂಬ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ವೇಳೆ, ಯಾವುದೇ ಅಂಶವು ಅನುಕೂಲಕರವಾಗಿಲ್ಲ ಎಂದು ಕಂಡುಬಂದರೆ, ನಾವು ಆಗಸ್ಟ್ 27ರಂದು ಚಂದ್ರನ ಮೇಲೆ ಮಾಡ್ಯೂಲ್ ಅನ್ನು ಇಳಿಸುತ್ತೇವೆ ” ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

ಮಿಷನ್​ನ ಲ್ಯಾಂಡರ್ ಮಾಡ್ಯೂಲ್ ಮೂಲ ವೇಳಾಪಟ್ಟಿಯ ಪ್ರಕಾರ ಚಂದ್ರನ ಮೇಲ್ಮೈಯನ್ನು ತಲುಪುತ್ತದೆ ಎಂದು ದೇಸಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಇಸ್ರೋ ಪ್ರಕಾರ, ಆಗಸ್ಟ್ 23 ರಂದು (ಬುಧವಾರ) ಸಂಜೆ 6 ಗಂಟೆಯ ನಂತರ ಲ್ಯಾಂಡಿಂಗ್​ಗೆ ಪ್ರಯತ್ನಿಸಲಾಗುವುದು. ಇದು ಯಶಸ್ವಿಯಾದರೆ, ಭಾರತವು ಎಲೈಟ್ ಪಟ್ಟಿಗೆ ಪ್ರವೇಶಿಸಲಿದೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಲಿದೆ. ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾವನ್ನು ಉಳಿದ ದೇಶಗಳು. ಆದಾಗ್ಯೂ, ರಷ್ಯಾದ ಲೂನಾ -25 ಮಿಷನ್​​ನ ಇತ್ತೀಚಿನ ವೈಫಲ್ಯದಿಂದಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂಕ್ತವಾಗಿ ಇಳಿಯುವ ಮೊದಲ ದೇಶವಾಗಲು ಭಾರತಕ್ಕೆ ಅವಕಾಶವಿದೆ. ಇದು ಚಂದ್ರಯಾನ್ -3 ರ ಉದ್ದೇಶಿತ ಸ್ಥಾನವಾಗಿದೆ.

ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ಡಿಸಿಸಿ) ಚಂದ್ರಯಾನ -3 ಉಡಾವಣೆಯಾಯಿತು.

ಗೆಳೆಯನ ಭೇಟಿಯಾದ ಲ್ಯಾಂಡರ್;‌ ಚಂದ್ರಯಾನ 2 ಜತೆ ಸಂಪರ್ಕ

ಭಾರತದ ಇಸ್ರೋ ಕೈಗೊಂಡಿರುವ ಚಂದ್ರಯಾನ 3 ಮಿಷನ್‌ ಕುರಿತು ದೇಶಾದ್ಯಂತ ಕುತೂಹಲ ಮೂಡಿದೆ. ಚಂದ್ರಯಾನ 3 ಲ್ಯಾಂಡರ್‌ ಮಾಡ್ಯೂಲ್‌ (Lander Module) ಆಗಸ್ಟ್‌ 23ರಂದು ಸಂಜೆ ಸಾಫ್ಟ್‌ ಲ್ಯಾಂಡ್‌ ಆಗಲಿದೆ. ಇದರೊಂದಿಗೆ ಭಾರತ ಇತಿಹಾಸ ಸೃಷ್ಟಿಸಲಿದೆ. ಹೀಗೆ ಲ್ಯಾಂಡರ್‌ ಮಾಡ್ಯೂಲ್‌ ಸಾಫ್ಟ್‌ ಲ್ಯಾಂಡಿಂಗ್‌ ಯಶಸ್ಸಿಗೆ ದೇಶವೇ ಕಾಯುತ್ತಿರುವ ಬೆನ್ನಲ್ಲೇ ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಮಾಡ್ಯೂಲ್‌ಗೆ 2019ರಲ್ಲಿ ಉಡಾವಣೆ ಮಾಡಲಾದ ಚಂದ್ರಯಾನ 2ರ ಆರ್ಬಿಟರ್‌ ಸಿಕ್ಕಿದೆ. ಅದರ ಜತೆ ಸಂಪರ್ಕ ಸಾಧಿಸಿದೆ.

ಹೌದು, ಇಸ್ರೋ ಈ ಕುರಿತು ಮಾಹಿತಿ ನೀಡಿದೆ. “ಚಂದ್ರಯಾನ 3ಅನ್ನು ಚಂದ್ರಯಾನ 2 ಔಪಚಾರಿಕವಾಗಿ ಸ್ವಾಗತಿಸಿದೆ. ಚಂದ್ರಯಾನ 3 ಲ್ಯಾಂಡರ್‌ ಹಾಗೂ ಚಂದ್ರಯಾನ 2ರ ಆರ್ಬಿಟರ್‌ ಮಧ್ಯೆ ದ್ವಿಮುಖ ಸಂವಹನ ಸಾಧ್ಯವಾಗಿದೆ. ಲ್ಯಾಂಡರ್‌ ಮಾಡ್ಯೂಲ್‌ ಜತೆ ಸಂಪರ್ಕ ಸಾಧಿಸಲು ಮತ್ತಷ್ಟು ದಾರಿ ಸಿಕ್ಕಂತಾಗಿದೆ” ಎಂದು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಯಶಸ್ಸಿಗಾಗಿ ಪ್ರಾರ್ಥಿಸಿ ಪೂಜೆ

ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಸುರಕ್ಷಿತವಾಗಿ ಇಳಿಯಲಿ ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ವಿಶೇಷ ಪೂಜೆ ನೆರವೇರಿಸಲಾಗಿದೆ. ನಾಗರ ಪಂಚಮಿ ದಿನದಂದು ಇಸ್ರೋ ಹೆಸರಿನಲ್ಲಿ ನಾಗ ದೇವರಿಗೆ ಕಾರ್ತಿಕ ಪೂಜೆಯನ್ನು ಸಲ್ಲಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಸೇವೆ ಅಡಿ ಚಂದ್ರಯಾನ 3 ರ ಯಶಸ್ವಿಗೆ ಇಸ್ರೋ ಹೆಸರಲ್ಲಿ ಅರ್ಚನೆ ಮಾಡಲಾಗುತ್ತಿದೆ. ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿದ್ದು, ನಾಗ ದೇವರಿಗೆ ಹಾಲಿನ ಅಭಿಷೇಕ ಮಾಡಿ ಪೂಜೆ ಮಾಡಲಾಗುತ್ತಿದೆ.

ಚಂದ್ರಯಾನ 3 ಲೈವ್‌ ವೀಕ್ಷಿಸಿ

ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್​ ಲ್ಯಾಂಡಿಂಗ್​ ಆಗಸ್ಟ್ 23, 2023 ರಂದು ಸಂಜೆ 5:27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್‌ಬುಕ್‌ ಪೇಜ್‌ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ. ಆಗಸ್ಟ್ 23, 2023 ರಂದು ಸಂಜೆ 6:04 ರ ಸುಮಾರಿಗೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

Exit mobile version