Site icon Vistara News

ಅಮೃತ ಮಹೋತ್ಸವ | 750 ಬಾಲಕಿಯರು ಸಿದ್ಧಪಡಿಸಿದ ಪೇಲೋಡ್‌‌, ತ್ರಿವರ್ಣಧ್ವಜ ಬಾಹ್ಯಾಕಾಶಕ್ಕೆ

isro

ನವ ದೆಹಲಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಿದ್ಧಪಡಿಸಿರುವ ಅತಿ ಸಣ್ಣ ವಾಣಿಜ್ಯ ರಾಕೆಟ್‌ ನಭ ಸೇರಲಿದ್ದು, ಅಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸಲಿದೆ. ಆಗಸ್ಟ್‌ 7ರಂದು ಈ ಅತಿ ಸಣ್ಣ ರಾಕೆಟ್‌ (Small Satellite Launch Vehicle (SSLV) ಅನ್ನು ಹಾರಿಬಿಡಲಾಗುತ್ತಿದೆ. ಇದರ ವಿಶೇಷತೆ ಏನೆಂದರೆ 75 ಗ್ರಾಮೀಣ ಸರಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ತಯಾರಿಸಿದ 75 ಪೇಲೋಡ್‌ಗಳನ್ನು ಇದರಲ್ಲಿ ಹಾರಿಬಿಡಲಾಗುವ ಉಪಗ್ರಹ ಹೊತ್ತಿರುತ್ತದೆ.

2018ರ ಆಗಸ್ಟ್‌ 15ರಂದು ಕೆಂಪುಕೋಟೆಯ ಮೇಲಿನಿಂದ ಮಾತಾಡುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಾಹ್ಯಾಕಾಶದಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸಲಾಗುತ್ತದೆ ಎಂದಿದ್ದರು. ಅವರ ಆಶಯವನ್ನು ನಿಜಗೊಳಿಸಲು ಇಸ್ರೋ ಶ್ರಮಿಸಿದೆ. ಎಸ್‌ಎಸ್‌ಎಸ್‌ಎಲ್‌ವಿಯ ಮೂಲಕ AzaadiSAT ಎಂಬ ಉಪಗ್ರಹವನ್ನೂ ಉಡಾಯಿಸಲಾಗುತ್ತಿದೆ. ಅದರಲ್ಲಿ ದೇಶದ 75 ಗ್ರಾಮೀಣ ಸರಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸಿದ್ಧಪಡಿಸಿದ 75 ಪೇಲೋಡ್‌ಗಳು ಇರುವುದು ವಿಶೇಷ. ಹೆಣ್ಣುಮಕ್ಕಳಲ್ಲಿ ವೈಜ್ಞಾನಿಜ ಹುಮ್ಮಸ್ಸು ಮೂಡಿಸಲು, ಬಾಹ್ಯಾಕಾಶ ವಿಜ್ಞಾನವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ರಾಕೆಟ್‌ ಉಡಾಯಿಸುವಷ್ಟು ಶಕ್ತಿಶಾಲಿ ಜೈವಿಕ ಇಂಧನ ಬ್ಯಾಕ್ಟೀರಿಯಾದಿಂದ ಸೃಷ್ಟಿ

SSLVಯು 120 ಟನ್‌ ತೂಕವಿದ್ದು, 500 ಕಿಲೋ ಭಾರವನ್ನು ಹೊರಬಲ್ಲುದು. ಇದರ ಎತ್ತರ 34 ಮೀಟರ್.‌

ಸಣ್ಣ ಉಪಗ್ರಹ ಉಡಾವಣೆ ರಾಕೆಟ್‌ಗಳು ಭವಿಷ್ಯದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾತ್ರ ವಹಿಸಲಿವೆ. ಅಲ್ಪವೆಚ್ಚದ ಈ ವೆಹಿಕಲ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಿದ್ಧಪಡಿಸುವ ಸಾಮರ್ಥ್ಯವನ್ನು ಭಾರತ ಹೊಂದಿದ್ದು, ಈ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಈ ವಲಯದಲ್ಲಿ ಮುನ್ನಡೆಯಲಿದೆ ಎಂದು ಇಸ್ರೋ ಚೇರ್‌ಮನ್‌ ಎಸ್.ಸೋಮನಾಥ್ ಅವರು ಹೇಳಿದ್ದಾರೆ.

ಈ ರಾಕೆಟ್‌ ಸಾಗಿಸುವ ಪೇಲೋಡ್‌ಗಳನ್ನು ಇಸ್ರೋದ ವಿದ್ಯಾರ್ಥಿ ತಂಡ Space Kidz India ಸಿದ್ಧಪಡಿಸಿದೆ. ಮೊದಲ ಬಾರಿಗೆ ಹೆಣ್ಣುಮಕ್ಕಳೇ ತಯಾರಿಸಿರುವ ಈ ಪೇಲೋಡ್‌ ತಯಾರಿಕೆಯ ಹಿಂದೆ, ಮಹಿಳೆಯರನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಗಣಿತ ವಲಯಗಳಲ್ಲಿ (STEM) ಇನ್ನಷ್ಟು ಒಳಗೊಳ್ಳುವ ಉಪಕ್ರಮವಿದೆ. ಹಾಗೂ ಈ ವರ್ಷದ ವಿಶ್ವಸಂಸ್ಥೆಯ ಥೀಮ್‌ ಕೂಡ ʼಬಾಹ್ಯಾಕಾಶದಲ್ಲಿ ಮಹಿಳೆಯರುʼ ಆಗಿದೆ.

ಇದನ್ನೂ ಓದಿ: ವಿಸ್ತಾರ Explainer: ʼನಂಬಿʼ ಕೆಟ್ಟವರಲ್ಲ! ದೇಶ ಪ್ರೇಮಿ ವಿಜ್ಞಾನಿ ದೇಶ ದ್ರೋಹಿ ಆಗಿದ್ದು ಹೇಗೆ?

Exit mobile version