ಬೆಂಗಳೂರು, ಕರ್ನಾಟಕ: ಚೀನಾ (China) ಮೂಲದ ಕಂಪ್ಯೂಟರ್ ತಯಾರಿಕಾ ಕಂಪನಿ ಲೆನೋವೋ (Lenovo) ಕಚೇರಿಗಳ ಮೇಲೆ ಬುಧವಾರ ಭಾರತೀಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿರುವ (Puducherry) ಲೆನೋವೋ ಕಾರ್ಖಾನೆ ಮತ್ತು ಬೆಂಗಳೂರಿನಲ್ಲಿರುವ (Bengaluru) ಅದರ ಕಚೇರಿಯೊಂದಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಲೆನೋವೋ ಮಾತ್ರವಲ್ಲದೇ, ಬೆಂಗಳೂರಿನ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳ (Private Companies) ಮೇಲೆ ಐಟಿ ಅಧಿಕಾರಿಗಳು (IT officials) ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ (Income tax evasion) ನೀಡಿದ ಹಿನ್ನೆಲೆಯಲ್ಲಿ ಈ ದಾಳಿ (IT Raid) ನಡೆದಿದೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳು ಭೇಟಿಯ ಸಮಯದಲ್ಲಿ ಲೆನೋವೋ ಉದ್ಯೋಗಿಗಳ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದರು. ವಿಚಾರಣೆಯ ಭಾಗವಾಗಿ ಭೇಟಿಯ ಸಮಯದಲ್ಲಿ ಮತ್ತು ನಂತರ ಅಧಿಕಾರಿಗಳು ಲೆನೋವೋ ಕಂಪನಿಯ ಹಿರಿಯ ನಿರ್ವಹಣಾ ವ್ಯಕ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸದರು. ಆದರೆ, ಸಾಧ್ಯವಾಗಿಲ್ಲ ಎಂದು ಮೂಲಗಳು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ತಮ್ಮ ಕಚೇರಿಯ ಮೇಲೆ ಐಟಿ ರೇಡ್ ಖಚಿತಪಡಿಸಿರುವ ಲೆನೋವೋ, ಅಧಿಕಾರಗಳಿಗೆ ಸಹಕಾರ ನೀಡುತ್ತಿದ್ದೇವೆ ಮತ್ತು ಅಗತ್ಯವಿರುವ ಎಲ್ಲ ಬೆಂಬಲವನ್ನು ನಾವು ಅವರಿಗೆ ನೀಡುತ್ತೇವೆ. ನಾವು ವ್ಯಾಪಾರ ಮಾಡುವ ಪ್ರತಿಯೊಂದು ನ್ಯಾಯವ್ಯಾಪ್ತಿಯಲ್ಲಿ ಅನ್ವಯವಾಗುವ ಎಲ್ಲಾ ಕಾನೂನುಗಳು, ನಿಯಮಗಳು ಮತ್ತು ವರದಿ ಮಾಡುವ ಅವಶ್ಯಕತೆಗಳಿಗೆ ನಾವು ಕಟ್ಟುನಿಟ್ಟಾಗಿ ಬದ್ಧರಾಗಿದ್ದೇವೆ ಎಂದು ಲೆನೋವೋ ಹೇಳಿದೆ.
ಐಟಿ ಕಂಪನಿಗಳಿಗೆ ಬಿಸಿ ಮುಟ್ಟಿಸಿದ ತೆರಿಗೆ ಇಲಾಖೆ
ಬೆಂಗಳೂರು ನಗರದ ಸರ್ ಸಿ.ವಿ. ರಾಮನ್ ನಗರ, ಬಾಗಮನೆ ಟೆಕ್ ಪಾರ್ಕ್, ಹುಳಿಮಾವು ಮೊದಲಾದ ಕಡೆಗಳಲ್ಲಿ ದಾಳಿ ನಡೆದಿದೆ. ಸುಮಾರು 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ನಾನಾ ಕಡೆ ದಾಳಿ ಮಾಡಿದೆ. ಹುಳಿಮಾವು ಸಮೀಪದ ಆಪಸ್ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿರುವ ಐಟಿ ಟೀಂ ಅಲ್ಲಿ ತಪಾಸಣೆಯನ್ನು ನಡೆಸುತ್ತಿದೆ. ಅಲ್ಲದೆ ಹಲವು ಕಡೆಗಳಲ್ಲಿ ದಾಳಿ ನಡೆದಿರುವ ಮಾಹಿತಿ ಇದೆ.
ಈ ಸುದ್ದಿಯನ್ನೂ ಓದಿ: IT raid: ಶೋಭಾ ಡೆವಲಪರ್ಸ್ ಮೇಲೆ ಐಟಿ ದಾಳಿ; ಬೆಂಗಳೂರು- ಚೆನ್ನೈ ಅಧಿಕಾರಿಗಳ ಜಂಟಿ ಕಾರ್ಯಾಚರಣೆ
ಆದಾಯ ತೆರಿಗೆ ಪಾವತಿಯಲ್ಲಿ ಕೆಲವು ಕಂಪನಿಗಳು ವಂಚನೆ ಮಾಡುತ್ತಿವೆ ಎಂಬುದನ್ನು ಕಂಡುಕೊಂಡಿರುವ ಅಧಿಕಾರಿಗಳು ಕಂಪನಿಯ ದಾಖಲೆ, ಕಡತಗಳ ಪರಿಶೀಲನೆಗಾಗಿ ಈ ದಾಳಿ ನಡೆಸಿವೆ. ತಂಡಗಳು ಕಂಪನಿಗಳ ಕಚೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿವುದಾಗಿ ತಿಳಿದು ಬಂದಿದೆ. ಹಲವಾರು ಖಾಸಗಿ ಕಂಪನಿಗಳು ಆದಾಯ ತೆರಿಗೆ ವಂಚನೆ ಮಾಡುವುದಕ್ಕಾಗಿ ಎರಡು ರೀತಿಯ ದಾಖಲೆ ನಿರ್ವಹಣೆ ಮಾಡುತ್ತಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಡುಕೊಂಡಿದ್ದರು. ಇದು ವಂಚನೆಯ ಪರಿಧಿಗೆ ಬರುತ್ತಿದ್ದು, ತೆರಿಗೆ ತಪ್ಪಿಸುವ ಹುನ್ನಾರವನ್ನು ಬಯಲು ಮಾಡಲು ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಕೂಡಾ ಈ ವಂಚನೆಯಲ್ಲಿ ಭಾಗಿಯಾಗಿವೆ ಎನ್ನಲಾಗಿದೆ.