ತಂತ್ರಜ್ಞಾನದಲ್ಲಿ ಮುಂದುವರಿದ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ ಪುಟ್ಟ ಜಪಾನ್ ದೇಶ. ಬೇರೆ ಯಾರನ್ನೂ ಅನುಕರಿಸದೆ, ತಮ್ಮದೇ ಪ್ರತ್ಯೇಕ ಸಂಸ್ಕೃತಿ, ಅದಕ್ಕೆ ತಕ್ಕಂತ ತರ್ಕ, ಅದಕ್ಕೆ ಸೂಕ್ತವಾದ ಕಾನೂನು… ಹೀಗೆ ಎಲ್ಲದರಲ್ಲೂ ಅವರ ವೈಶಿಷ್ಟ್ಯ ಎದ್ದು ಕಾಣುವಂಥದ್ದು. ಅಪರಾಧ ಹತ್ತಿಕ್ಕಲು ಸರಕಾರ ಮತ್ತು ಪೊಲೀಸರು ಅನುಸರಿಸುವ ಕ್ರಮಗಳೂ ಕೆಲವೊಮ್ಮೆ ವಿಶಿಷ್ಟ ಎಂದೇ ಅನಿಸುತ್ತವೆ.
ಅತಿ ನಿಬಿಡ ಜನಸಂಖ್ಯೆ ಇರುವ ಜಪಾನ್‌ನ ನಗರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದೂ ಅಷ್ಟೇ ದೊಡ್ಡ ಸವಾಲು. ವಿಶಾಲವಾಗಿ ಹರಡಿರುವ ಅಮೆರಿಕದಂಥ ದೇಶಗಳಲ್ಲಿ ಕಳ್ಳರನ್ನು ಹಿಡಿಯಲೋ ಅಥವಾ ಕಾರು ತಡೆಯಲೋ ರಸ್ತೆಗಳಲ್ಲಿ ಪರದಾಡಬೇಕಿಲ್ಲ. ಕಾರಣ, ರಸ್ತೆ-ನಗರಗಳು ಕಿಕ್ಕಿರಿದು ತುಂಬಿರುವುದು ಕಡಿಮೆಯೇ. ಆದರೆ ಜಪಾನ್‌ನ ಕಥೆ ಬೇರೆ. ತುಂಬಿತುಳುಕಾಡುವ ನಗರಗಳಲ್ಲಿ, ರಸ್ತೆಗಳ ಮೇಲೆ ಕಂಡೂ ಕಾಣದಂತೆ, ಸಿಕ್ಕೂ ಸಿಗದಂತೆ ತಪ್ಪಿಸಿಕೊಳ್ಳುವ ಕಳ್ಳರೇ ಹೆಚ್ಚು. ಅದರಲ್ಲೂ ಅಲ್ಲಿನ ʻಯಕುಝʼ ಹೆಸರಿನ ಭೂಗತ ಮಾಫಿಯಾ ಆಗಾಗ ತೊಂದರೆ ಕೊಡುವುದುಂಟು. ಅಂಥವರನ್ನು ಹಿಡಿಯಲು ಹೋಗಿ ಅಮಾಯಕರಿಗೆ ತೊಂದರೆ ಆಗಬಾರದಲ್ಲಾ ಎನ್ನುವುದಕ್ಕಾಗಿ ಹಳದಿ ಬಣ್ಣದ ಅಸ್ತ್ರವನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಏನಿದು ಎಂದರೆ, ದೂರದಿಂದಲೇ ಗೋಚರಿಸುವಂಥ ಹಳದಿ ಬಣ್ಣದ ಪೇಂಟ್‌ಬಾಲ್‌ಗಳನ್ನು ಪೊಲೀಸರು ಎಸೆಯುತ್ತಾರಂತೆ. ದೂರದಿಂದಲೇ ಶೂಟ್ ಮಾಡಬಹುದಾದ ಈ ಪೇಂಟ್‌ಬಾಲ್‌ಗಳು ವ್ಯಕ್ತಿಗೋ ಅಥವಾ ಕಾರಿಗೋ ಅಪಾಯ ಮಾಡದಿದ್ದರೂ, ಮೈಯಿಡೀ ಬಣ್ಣವಾಗುವಂತೆ ಮಾಡುತ್ತವೆ. ಪೊಲೀಸರಿಗೆ ಗುರುತು ಹಿಡಿಯಲು ನೆರವು ನೀಡುತ್ತವೆ. ಕಾನೂನು ಭಂಜಕರ ಮೇಲೆ ಪ್ರಯೋಗಿಸಲೆಂದು ಸುಂಕ ದ್ವಾರಗಳಲ್ಲಿ, ವಾಹನಕ್ಕೆ ಗ್ಯಾಸ್ (ಪೆಟ್ರೋಲ್) ತುಂಬಿಸುವಂಥ ನಾನಾ ಸ್ಥಳಗಳಲ್ಲಿ ಇವುಗಳನ್ನು ಇರಿಸಿಕೊಳ್ಳಲಾಗುತ್ತಿದೆ. ಕೈಗೆ ಸಿಗದಷ್ಟು ದೂರ ಓಡಿದರೂ, ಬಣ್ಣ ನೋಡಿ ಇತರರು ಹಿಡಿಯುತ್ತಾರೆ. ಹೀಗೆ, ಅಪರಾಧಿಗಳಿಗಿಂತ ಕೊತ್ವಾಲರೇ ಚಾಣಾಕ್ಷರು ಎಂಬುದನ್ನು ಜಪಾನ್ ಸಿದ್ಧಪಡಿಸಿ ತೋರಿಸುತ್ತಿದೆ.
ಇದನ್ನೂ ಓದಿ: ಸುನಾಮಿ ಬಂದರೂ ಜಗ್ಗದ ತೇಲುವ ಮನೆ ನೋಡಿದಿರಾ?