ಭಾರತೀಯರೆಲ್ಲರಿಗೂ ನಾಗರಿಕರ ವಿಶಿಷ್ಟ ಗುರುತಿನ ಚೀಟಿ(ಆಧಾರ್-Aadhaar) ಅತ್ಯಂತ ಪ್ರಮುಖ ದಾಖಲೆಯಾಗಿದೆ. ಯಾವುದೇ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಪಡೆಯಲು ಆಧಾರ್ ಬಳಕೆಯಾಗುತ್ತಿದೆ. ಹಾಗಾಗಿ, ಆಧಾರ್ ಬಳಕೆಯ ಪ್ರಾಮುಖ್ಯತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಒಂದೊಮ್ಮೆ ನಿಮ್ಮ ಮೊಬೈಲ್ ನಂಬರ್ ಆಧಾರ್ ಜತೆ ಲಿಂಕ್ ಆಗಿದ್ದರೆ, ನಿಮ್ಮ ಎಲ್ಲ ಸೇವೆಗಳು ಇನ್ನಷ್ಟು ಸುಗಮವಾಗುತ್ತವೆ. ಉದಾಹರಣೆಗೆ, ಡಿಜಿಟಲ್ ಬ್ಯಾಂಕ್, ಡಿಮ್ಯಾಟ್ ಖಾತೆಗಳನ್ನು ತೆರೆಯಬೇಕಿದ್ದರೆ ನಿಮ್ಮ ಆಧಾರ್ ಮತ್ತು ಮೊಬೈಲ್ ಲಿಂಕ್ ಆಗಿದ್ದರೆ ಕ್ಷಣಾರ್ಧದಲ್ಲಿ ಕೆಲಸವಾಗುತ್ತದೆ. ಇದರಿಂದ ಯಾವುದೇ ಹಂತದಲ್ಲಿ ಸೇವೆಯಲ್ಲಿ ಕೆವೈಸಿ ಪೂರೈಸಲು ಸಾಧ್ಯವಾಗುತ್ತದೆ(Aadhaar-Mobile Link).
ಆದರೆ, ಬಹಳಷ್ಟು ಮಂದಿಗೆ ತಮ್ಮ ಫೋನ್ ನಂಬರ್ ಅನ್ನು ಆಧಾರ್ ಜತೆ ಲಿಂಕ್ ಮಾಡುವುದು ಗೊತ್ತಿರುವುದಿಲ್ಲ. ಕೆಲವೊಮ್ಮೆ ನಂಬರ್ ಬದಲಾಗಿರುತ್ತದೆ. ಆ ಸಂದರ್ಭದಲ್ಲೂ ಲಿಂಕ್ ಮಾಡುವ ಪ್ರಕ್ರಿಯೆ ಗೊತ್ತಿಲ್ಲದೇ ಪರದಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ನಿಮಗೆ ಇಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್ ಜತೆ ಲಿಂಕ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಿದ್ದೇವೆ. ಎರಡು ರೀತಿಯಲ್ಲಿ ಮೊಬೈಲ್ ನಂಬರ್ ಅನ್ನು ಆಧಾರ್ ಜತೆ ಲಿಂಕ್ ಮಾಡಬಹುದು. ಮೊದಲನೆಯದ್ದು, ನೀವು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ನಂಬರ್ ಅಪ್‌ಡೇಟ್ ಮಾಡುವುದು. ಎರಡನೆಯದು- ಆನ್‌ಲೈನ್ ಮೂಲಕ ಲಿಂಕ್ ಮಾಡಬಹುದು.
ಆನ್‌ಲೈನ್ ಮೂಲಕ ಲಿಂಕ್ ಹೀಗೆ ಮಾಡಿ…
uidai.gov.in/en/ ಅಧಿಕೃತ ವೆಬ್‌ಸೈಟ್‌ಗೆ ಮೂಲಕವೂ ಮೊಬೈಲ್ ನಂಬರ್ ಲಿಂಕ್ ಮಾಡಬಹುದು. ನಾವು ನಿಮಗೆ ಇಲ್ಲಿ ಇಂಡಿಯನ್ ಪೋಸ್ಟಲ್ ಸರ್ವೀಸ್ ಮೂಲಕ ಹೇಗೆ ಲಿಂಕ್ ಮಾಡುವುದು ಎಂದು ಹೇಳಿಕೊಡುತ್ತಿದ್ದೇವೆ. ಇದಕ್ಕಾಗಿ ನೀವು ಮೊದಲಿಗೆ ಭಾರತೀಯ ಅಂಚೆ ಸೇವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ಅಲ್ಲಿ ಕೇಳಲಾದ ಅಧಿಕೃತ ವಿವರವನ್ನು ದಾಖಲಿಸಿ. ಬ್ಲಾಂಕ್ ಬಾಕ್ಸ್‌ಗಳಲ್ಲಿ ನಿಮ್ಮ ಮೇಲ್ ಐಡಿ ಮತ್ತು ಫೋನ್ ನಂಬರ್ ದಾಖಲಿಸಿ. ಬಳಿಕ ಡ್ರಾಪ್ ಮೆನು ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣುವ PPB-Aadhaar Service ಆಪ್ಷನ್ ಕ್ಲಿಕ್ಕಿಸಿ. ಇಷ್ಟಾದ ಮೇಲೆ UIDAI-Mobile/Email to Aadhaar linking/update ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ಅದು ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ. ಕೆಳಗೆ ಕಾಣಿಸುವ ಜನರೇಟ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ದಾಖಲಿಸಿ, ಕನ್ಫರ್ಮೇಷನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ರಿಕ್ವೆಸ್ಟ್ ರೆಫರೆನ್ಸ್ ನಂಬರ್ ಸೃಷ್ಟಿಯಾಗುತ್ತದೆ. ಅದನ್ನು ನೋಟ್ ಮಾಡಿಕೊಳ್ಳಿ. ಮತ್ತೆ ಕ್ಲಿಕ್ ಆನ್ ಟ್ರ್ಯಾಕ್ ಯುವರ್ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಮನವಿಯ ಡಿಟೇಲ್ಸ್ ಕಾಣುತ್ತದೆ.
ಇದನ್ನೂ ಓದಿ | ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ: ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ