Site icon Vistara News

ಮಾರುತಿ ಸುಜುಕಿ ಕಾರುಗಳನ್ನು ಈಗ್ಲೇ ಖರೀದಿಸಿ; ಜನವರಿಯಿಂದ ಆಗಲಿವೆ ತುಟ್ಟಿ!

Maruti suzuki cars price will be hike in January 2024

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ಮುಂದಿನ ವರ್ಷದಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವ (Car Price Hike) ನಿರ್ಧಾರ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರದ (Inflation) ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿಯು ಸೋಮವಾರ ಷೇರು ಮಾರುಕಟ್ಟೆಗೆ ತಿಳಿಸಿದೆ. ಹಾಗಿದ್ದೂ, ಎಷ್ಟರ ಮಟ್ಟಿಗೆ ದರ ಏರಿಕೆಯಾಗಲಿದೆ ನಿಖರ ಮಾಹಿತಿಯನ್ನು ಕಂಪನಿಯೇನೂ ನೀಡಿಲ್ಲ. ಆದರೆ, ಎಲ್ಲ ಮಾದರಿ ಕಾರುಗಳ ಬೆಲೆ ಏರಿಕೆಯಾಗಲಿದೆ.

ಒಟ್ಟಾರೆ ಹಣದುಬ್ಬರ ಮತ್ತು ಸರಕು ಬೆಲೆಗಳು ಹೆಚ್ಚುತ್ತಿರುವ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2024ರಿಂದ ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸುವ ಕುರಿತು ಕಂಪನಿ ಪ್ಲ್ಯಾನ್ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ, ಕಂಪನಿಯು ಹೆಚ್ಚುತ್ತಿರುವ ವೆಚ್ಚವನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದೆ.

ಮಾರುತಿ ಸುಜುಕಿ ತನ್ನ ಅತಿ ಹೆಚ್ಚು ಮಾಸಿಕ ಮಾರಾಟವನ್ನು ಅಕ್ಟೋಬರ್‌ನಲ್ಲಿ 1.99 ಲಕ್ಷ ಯುನಿಟ್‌ಗಳಲ್ಲಿ ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.19 ರಷ್ಟು ಬೆಳವಣಿಗೆಯಾಗಿದೆ. ಏತನ್ಮಧ್ಯೆ, ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.80.3 ರಷ್ಟು ಏರಿಕೆಯಾಗಿ 3,716.5 ಕೋಟಿ ರೂಪಾಯಿಗಳಿಗೆ ತಲುಪಿದೆ. ಉತ್ತಮ ಮಾರಾಟ, ಸರಕುಗಳ ಬೆಲೆಗಳನ್ನು ಕಡಿಮೆ ಮತ್ತು ವೆಚ್ಚ ಕಡಿತದ ಪ್ರಯತ್ನಗಳ ಫಲವಾಗಿ ಆದಾಯ ಹೆಚ್ಚಾಗಿದೆ.

ಮುಂದಿನ 2-3 ವರ್ಷಗಳಲ್ಲಿ ಹೆಚ್ಚುತ್ತಿರುವ ಜನರ ಆದಾಯದ ಮಟ್ಟಗಳು ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ, ಕೈಗೆಟುಕುವ ಸಣ್ಣ ಕಾರುಗಳ ಮತ್ತೆ ಪ್ರಾಬಲ್ಯ ಮೆರೆಯುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಹೆಚ್ಚಿನ ಮಾರಾಟದ ಪ್ರಮಾಣ ಮತ್ತು ಉತ್ಪನ್ನ ಮಿಶ್ರಣದ ಕಾರಣದಿಂದಾಗಿ ಕಂಪನಿಯು ಹಿಂದಿನ ಹಣಕಾಸು ವರ್ಷದ ಅದೇ ತ್ರೈಮಾಸಿಕದಲ್ಲಿ 28,543.50 ಕೋಟಿ ರೂ.ಗಳ ವಿರುದ್ಧ 35,535.1 ಕೋಟಿ ರೂ.ಗಳ ನಿವ್ವಳ ಮಾರಾಟವನ್ನು ದಾಖಲಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Maruti Suzuki: ಇನ್‌ಕಮ್‌ ಟ್ಯಾಕ್ಸ್‌ ನೋಟೀಸ್‌, ಮಾರುತಿ ಸುಜುಕಿ ಷೇರು ಬೆಲೆ 2% ಕುಸಿತ

Exit mobile version