ಬೆಂಗಳೂರು: ಮೈಸೂರಿನ ಕೋಚನಹಳ್ಳಿಯಲ್ಲಿ (Kochanahalli at Mysore) ಸೆಮಿಕಂಡಕ್ಟರ್ ಬಿಡಿ ಭಾಗಗಳನ್ನು ತಯಾರಿಸುವ ಘಟಕ (Semi Conductor Unit) ಸ್ಥಾಪಿಸುವ ಅತಿ ಮಹತ್ವದ ಒಪ್ಪಂದಕ್ಕೆ (Memorandum of Understanding) ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.
ಸೆಮಿಕಂಡಕ್ಟರ್ ಅಸೆಂಬ್ಲಿ ಬಿಡಿಭಾಗಗಳನ್ನು ಮತ್ತು ಟೆಸ್ಟಿಂಗ್ ಸೌಲಭ್ಯ, ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕೇನ್ಸ್ ಟೆಕ್ನಾಲಜೀಸ್ (Canes Technologies) ಸಂಸ್ಥೆ ಹಾಗೂ ಕೈಗಾರಿಕಾ ಇಲಾಖೆಯ ನಡುವೆ ಒಪ್ಪಂದವಾಗಿದ್ದು, ಈ ಒಪ್ಪಂದವನ್ನು ಸಿಎಂ ಸಾಕ್ಷೀಕರಿಸಿದರು.
ಈ ಒಪ್ಪಂದದಿಂದ ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಉತ್ಪಾದನಾ ಅಭಿವೃದ್ಧಿಗೆ ಪೂರಕವಾಗಲಿದೆ. ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.
ಈ ಸಂದರ್ಭದಲ್ಲಿ ಆರ್.ಡಿ.ಪಿಆರ್ ಮತ್ತು ಐ.ಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ, ಕೈಗಾರಿಕಾ ಇಲಾಖೆ ಆಯುಕ್ತ ರಾದ ಗುಂಜನ್ ಕೃಷ್ಣಾ, ಕೇನ್ಸ್ ಸಂಸ್ಥೆಯ ಸಿಇಒ ರಮೇಶ್ ಕಣ್ಣನ್, ಉಪಸ್ಥಿತರಿದ್ದರು.
22,900 ಕೋಟಿ ರೂ. ಹೂಡಿಕೆ, 10,000 ಉದ್ಯೋಗ ಸೃಷ್ಟಿ ಸಾಧ್ಯತೆ
ಕೇಂದ್ರ ಸರಕಾರದ ‘ಇಂಡಿಯಾ ಸೆಮಿ ಕಂಡಕ್ಟರ್ ಮಿಷನ್’ನಡಿ ಈ ಘಟಕ ರೂಪುಗೊಳ್ಳುತ್ತಿದೆ. ಮೈಸೂರಿನಲ್ಲಿ 22,900 ಕೋಟಿ ರೂ. ಹೂಡಿಕೆಯೊಂದಿಗೆ ಆರಂಭವಾಗುವ ಯೋಜನೆಯಡಿ 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಮೈಸೂರು ಏರ್‌ಪೋರ್ಟ್ ಸಮೀಪ ಇರುವ ಕೋಚನಹಳ್ಳಿ ಬಳಿ 240 ಎಕರೆ ಜಾಗವನ್ನು ಸೆಮಿಕಂಡಕ್ಟರ್ ಘಟಕ ನಿರ್ಮಾಣಕ್ಕೆಂದೇ ಗುರುತಿಸಲಾಗಿತ್ತು. ಘಟಕಕ್ಕೆ ಎರಡು ಮೂಲದಿಂದ ವಿದ್ಯುತ್, ನೀರು ನೀಡಲು ಐಟಿಬಿಟಿ ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ಹಿಂದೆ ಕಂಪನಿಯೊಂದು ಒಪ್ಪಂದ ಮಾಡಿಕೊಂಡಿತ್ತಾದರೂ ಅದು ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸದೆ ಹಿನ್ನಡೆಯಾಗಿತ್ತು. ನಿಜವೆಂದರೆ ಆ ಕಂಪನಿ ಬಳಿ ಚಿಪ್ ಉತ್ಪಾದಿಸುವ ತಂತ್ರಜ್ಞಾನವೇ ಇರಲಿಲ್ಲ. ಇದೀಗ ಹೊಸ ಕೇನ್ಸ್ ಟೆಕ್ನಾಲಜೀಸ್ ಸಂಸ್ಥೆ ಘಟಕ ಸ್ಥಾಪನೆಗೆ ಮುಂದಾಗಿದೆ.
ನಿಜವೆಂದರೆ ದೇಶದ ಮೊದಲ ಸೆಮಿ ಕಂಡಕ್ಟರ್ ಘಟಕ ಮೈಸೂರಿನಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಬಳಿಕ ಘೋಷಣೆಯಾದ ಗುಜರಾತ್ ಹಾಗೂ ಮಹಾರಾಷ್ಟ್ರದ ಘಟಕಗಳ ನಿರ್ಮಾಣಕ್ಕೆ ಆಗಲೇ ಚಾಲನೆ ದೊರೆತಿದೆ.
ಏನಿದು ಸೆಮಿ ಕಂಡಕ್ಟರ್ ಮಿಷನ್?
ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಿಂದ ಹಿಡಿದು ಸುಧಾರಿತ ಸೇವೆಗಳು, ಆಟೋಮೊಬೈಲ್ ಒಳಗೊಂಡಂತೆ ಬಹುತೇಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಅತ್ಯವಶ್ಯಕವಾಗಿ ಬಳಸುವ ಸಾಧನ ಸೆಮಿಕಂಡಕ್ಟರ್. ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ರೂಪಿಸುವುದರಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. ಆದರೆ, ಇಡೀ ದೇಶದಲ್ಲಿ ಚಿಪ್‌ಗಳನ್ನು ಉತ್ಪಾದಿಸುವ ಘಟಕಗಳು ಇರಲಿಲ್ಲ. ಹೀಗಾಗಿ ಚಿಪ್‌ಗಳಿಗೆ ಬೇರೆ ದೇಶದಲ್ಲಿರುವ ಕಂಪನಿಗಳನ್ನು ಅವಲಂಬಿಸುವ ಸ್ಥಿತಿ ಇದೆ. ಇದನ್ನು ನಿವಾರಿಸಲು ಕೇಂದ್ರ ಸರಕಾರ 2020ರಲ್ಲಿ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಯೋಜನೆ ಘೋಷಿಸಿತ್ತು. ಅದರ ಭಾಗವಾಗಿ ಮೈಸೂರಿನಲ್ಲಿ ಮೊದಲ ಘಟಕ ಸ್ಥಾಪನೆಯನ್ನು ಘೋಷಿಸಲಾಗಿತ್ತು.
ಇದನ್ನೂ ಓದಿ: Brand Bangalore: ಬ್ರ್ಯಾಂಡ್ ಬೆಂಗಳೂರಿಗಾಗಿ ಕೆನಡಾ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಒಪ್ಪಂದ