Site icon Vistara News

WhatsApp New Feature: ವಾಟ್ಸಾಪ್ ಬಳಕೆದಾರರಿಗೆ ಖುಷಿಯ ಸುದ್ದಿ, ನೀವಿನ್ನು ಮೆಸೇಜ್ ಎಡಿಟ್ ಮಾಡಬಹುದು!

Message Edit feature coming as WhatsApp New Feature

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಾಪ್(WhatsApp), ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಫೀಚರ್‌ಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ವಾಟ್ಸಾಪ್‌ನಲ್ಲಿ ಕಳುಹಿಸಲಾದ ಸಂದೇಶಗಳನ್ನು ಎಡಿಟ್ (Edit) ಮಾಡಲು ಈವರೆಗೂ ಅವಕಾಶವಿರಲಿಲ್ಲ. ಅಂಥದೊಂದು ಅವಕಾಶವನ್ನು ಕಲ್ಪಿಸುವಂತೆ ಬಳಕೆದಾರರು ಬೇಡಿಕೆ ಇಟ್ಟಿದ್ದರು. ವಾಟ್ಸಾಪ್ ಈಗ ಆ ಬೇಡಿಕೆಯನ್ನು ಪೂರೈಸುವ ಹಂತದಲ್ಲಿದೆ. ವಾಟ್ಸಾಪ್‌ ಸಂದೇಶವನ್ನು ಎಡಿಟ್ ಮಾಡುವ ಫೀಚರ್ ಪರಿಚಯಿಸುವುದು ಪಕ್ಕಾ ಆಗಿದೆ. ಒಂದು ವರ್ಷದಿಂದ ಪ್ರಯೋಗದ ಹಂತದಲ್ಲಿದ್ದ ಈ ಫೀಚರ್ ಈಗ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ(WhatsApp New Feature).

ಎಡಿಟ್ ಫೀಚರ್ ಕುರಿತು ವಾಟ್ಸಾಪ್ ಮಾಡಿರುವ ವಿಡಿಯೋ ಟ್ವೀಟ್

ಈ ಸಂಬಂಧ ವಾಟ್ಸಾಪ್ ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಷೇರ್ ಮಾಡಿದೆ. ಚಾಟ್‌ ಬಬಲ್‌ನಲ್ಲಿ ತಪ್ಪಾದ ಪಠ್ಯವನ್ನು ತೋರಿಸಲಾಗುತ್ತದೆ ಮತ್ತು ನಂತರ ತಪ್ಪಾದ ಪಠ್ಯವನ್ನು ಸರಿಪಡಿಸಲಾಗುತ್ತದೆ. ಈ ಚಟುವಟಿಕೆಯನ್ನು ವಿಡಿಯೋದಲ್ಲಿ ಕಾಣಬಹುದು. ಅದರರ್ಥ ಶೀಘ್ರವೇ ಬಳಕೆದಾರರಿಗೆ ಎಡಿಟ್ ಆಯ್ಕೆ ದೊರೆಯಲಿದೆ ಎಂದಾಯಿತು. ಸದ್ಯಕ್ಕೆ ಈ ಆಪ್ಷನ್ ಇನ್ನೂ ವಾಟ್ಸಾಪ್‌ನಲ್ಲಿ ಇಲ್ಲ. ಆದರೆ, ವಿಡಿಯೋ ಮಾಹಿತಿಯ ಪ್ರಕಾರ ಶೀಘ್ರವೇ ಎಲ್ಲರಿಗೂ ಈ ಎಡಿಟ್ ಆಪ್ಷನ್ ದೊರೆಯಲಿದೆ.

ಎಡಿಟ್ ಫೀಚರ್ ಆಪ್ಷನ್ ಈಗಾಗಲೇ ಕೆಲವು ಬೀಟಾ ವರ್ಷನ್‌ ಬಳಕೆದಾರರಿಗೆ ನೀಡಲಾಗಿದೆ. ಕೆಲವು ವಾರಗಳಿಂದ ಅವರು ಈ ಹೊಸ ಫೀಚರ್‌ ಬಳಸುತ್ತಿದ್ದಾರೆ. ವಾಟ್ಸಾಪ್‌ಕ್ಕಿಂತ ಮೂಲದ ಟೆಲಿಗ್ರಾಮ್ ಈ ಎಡಿಟ್ ಫೀಚರ್ ಲಾಂಚ್ ಮಾಡಿತ್ತು. ಬಳಿಕ ವಾಟ್ಸಾಪ್‌ ಬಳಕೆದಾರರೂ ಈ ಫೀಚರ್‌ಗೆ ಬೇಡಿಕೆ ಇಟ್ಟಿದ್ದರು. ಅದೀಗ ನಿಜವಾಗುತ್ತಿದೆ. ಈವರೆಗೆ ವಾಟ್ಸಾಪ್‌ ಬಳಕೆದಾರರು ಏನಾದರೂ ತಪ್ಪಾದ ಸಂದೇಶಗಳನ್ನು ಕಳುಹಿಸಿದರೆ ಅದನ್ನು ಸರಿಪಡಿಸಲು ಆಗುತ್ತಿರಲಿಲ್ಲ. ಬದಲಿಗೆ ಅಂಥ ಸಂದೇಶವನ್ನು ಡಿಲಿಟ್ ಮಾಡಲು ಮಾತ್ರವೇ ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಆ ತಾಪತ್ರಯ ಇರುವುದಿಲ್ಲ. ಕಳುಹಿಸಿ ಸಂದೇಶದಲ್ಲಿ ಏನಾದರೂ ತಪ್ಪಾಗಿದ್ದರೆ ಅಥವಾ ಹೆಚ್ಚಿನ ಮಾಹಿತಿಯನ್ನು ಸೇರಿಸಬೇಕಿದ್ದರೆ ಎಡಿಟ್ ಆಪ್ಷನ್ ದೊರೆಯಲಿದೆ.

ಬೀಟಾ ವರ್ಷನ್ ಬಳಕೆದಾರರ ಪ್ರಕಾರ, ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ 15 ನಿಮಿಷಗಳವರೆಗೂ ಅದನ್ನು ಎಡಿಟ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಮೆಸೇಜ್ ಎಡಿಟ್ ಮಾಡಲು ಬಳಕೆದಾರರು, ತಾವು ಎಡಿಟ್ ಮಾಡಬೇಕಿರುವ ಸಂದೇಶವನ್ನು ಒತ್ತಿ ಹಿಡಿಯಬೇಕು. ಬಳಿಕ ಸ್ಕ್ರೀನ್ ಮೇಲ್ಭಾಗದಲ್ಲಿ ಕಾಣಸಿಗುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ, ಅಲ್ಲಿರುವ ಎಡಿಟ್ ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು. ಆಗ ಕಿಬೋರ್ಡ್ ಹೈಲೆಟ್‌ನೊಂದಿಗೆ ಸಂದೇಶ ತೋರಿಸುತ್ತದೆ. ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಪಠ್ಯವನ್ನು ಎಡಿಟ್ ಮಾಡಬಹುದು.

WhatsApp New Feature: ಈಗ ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಿ

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಲಾಂಚ್ ಮಾಡಿದೆ. ಈ ಹೊಸ ಫೀಚರ್ ಅನ್ವಯ ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನು ಬಹುಸಾಧನಗಳಲ್ಲಿ ಏಕಕಾಲಕ್ಕೆ ಬಳಸಬಹುದಾಗಿದೆ. ಬಳಕೆದಾರರಿಂದ ಈ ಬೇಡಿಕೆ ಬಹುದಿನಗಳಿಂದಲೂ ಇತ್ತು. ವಾಟ್ಸಾಪ್ ಅದನ್ನೀಗ ಈಡೇರಿಸಿದೆ. ಮೆಟಾ-ಮಾಲೀಕತ್ವದ ವಾಟ್ಸಾಪ್, ಬಳಕೆದಾರರಿಗೆ ಬಹು ಫೋನ್‌ಗಳಿಂದ ವಾಟ್ಸಾಪ್ ಖಾತೆಗೆ ಲಾಗ್ ಇನ್ ಮಾಡಲು ಅನುಮತಿಸಲಾಗುವುದು ಎಂದು ಮಂಗಳವಾರ ಪ್ರಕಟಿಸಿದೆ(WhatsApp New Feature).

ಇದನ್ನೂ ಓದಿ: WhatsApp Links Scam: ವಾಟ್ಸಾಪ್‌ ಲಿಂಕ್ಸ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಸುರಕ್ಷತೆಗೆ ಹೀಗೆ ಮಾಡಿ…

ಈ ಮೊದಲು, ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ಕಂಪ್ಯೂಟರ್ ಮತ್ತು ಆ್ಯಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲಿ ಲಾಗ್ ಇನ್ ಮಾಡಲು ಅವಕಾಶ ಕಲ್ಪಿಸಿತ್ತು. ಈಗ ಬಳಕೆದಾರರು ಒಂದೇ ವಾಟ್ಸಾಪ್‌ ಖಾತೆಯನ್ನು ಏಕಕಾಲಕ್ಕೆ ನಾಲ್ಕು ಫೋನ್‌ಗಳಲ್ಲಿ ಲಾಗಿನ್ ಆಗಲು ಅವಕಾಶ ಕಲ್ಪಿಸಿದೆ. ವೆಬ್ ಬ್ರೌಸರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ನೀವು ವಾಟ್ಸಾಪ್ ಲಿಂಕ್ ಮಾಡಿದ ರೀತಿಯಲ್ಲೇ ನಾಲ್ಕು ಹೆಚ್ಚುವರಿ ಫೋನ್‌ಗಳಲ್ಲಿ ವಾಟ್ಸಾಪ್ ಲಿಂಕ್ ಮಾಡಬಹುದು. ಬೇರೆ ಬೇರೆ ಫೋನುಗಳಲ್ಲಿ ಒಂದೇ ವಾಟ್ಸಾಪ್ ಖಾತೆಯನ್ನು ಬಳಸಬಹುದಾಗಿದೆ. ಪ್ರತಿ ಲಿಂಕ್ ಮಾಡಲಾದ ಫೋನ್ ಸ್ವತಂತ್ರವಾಗಿ ವಾಟ್ಸಾಪ್‌ಗೆ ಸಂಪರ್ಕಗೊಂಡಿರುತ್ತದೆ. ನಿಮ್ಮ ವೈಯಕ್ತಿಕ ಸಂದೇಶಗಳು, ಮಾಧ್ಯಮ ಕಡತ ಮತ್ತು ಕರೆಗಳು ಅಂತ್ಯದಿಂದ ಅಂತ್ಯದವರೆಗೆ ಎನ್‌ಕ್ರಿಪ್ಟ್ ಆಗಿರುವುದನ್ನು ಖಚಿತಪಡಿಸುತ್ತದೆ. ನಿಮ್ಮ ಪ್ರಾಥಮಿಕ ಸಾಧನವು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಉಳಿದ ಎಲ್ಲ ಸಾಧನಗಳಿಂದಲೂ ಸ್ವಯಂ ಆಗಿ ಲಾಗೌಟ್ ಆಗಿರುತ್ತದೆ.

ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version