ನವ ದೆಹಲಿ: ಭಾರತದ ಮುಂಚೂಣಿ ಆಟೋಮೊಬೈಲ್ ಕಂಪನಿ ಮಹೀಂದ್ರಾ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಕಾರು XUV400 ಬಗ್ಗೆ ಶುಕ್ರವಾರ ಮಾಹಿತಿ ಪ್ರಕಟಿಸಿದೆ. ಕಾರನ್ನು ೨೦೨೨ರ ಸೆಪ್ಟೆಂಬರ್‌ನಲ್ಲಿ ಅನಾವರಣ ಮಾಡುವುದಾಗಿ ಹೇಳಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ ೩೦೦ ಕಾರಿನ ಮಾದರಿಯಲ್ಲೇ ಎಕ್ಸ್‌ಯುವಿ ೪೦೦ ಬಿಡುಗಡೆಯಾಗಲಿದೆ. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ೩೦೦ ಕಿಲೋ ಮೀಟರ್ ಅಂತರ ಕ್ರಮಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಮಹೀಂದ್ರಾ ಕಂಪನಿ ಹೇಳಿದೆ.
ಈ ಹಿಂದೆ ಮಹೀಂದ್ರಾ ಕಂಪನಿ e20 ಹಾಗೂ e20 ಪ್ಲಸ್ ಎಂಬ ಎರಡು ಕಾರುಗಳನ್ನು ಬಿಡುಗಡೆ ಮಾಡಿ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದುಕೊಂಡಿತ್ತು. ಜತೆಗೆ ವೆರಿಟೊ ಸೆಡಾನ್ ಕಾರನ್ನೂ ಭಾರತದ ರಸ್ತೆಗೆ ಇಳಿಸಿತ್ತು. ಇದೀಗ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಕ್ಸ್‌ಯುವಿ ೪೦೦ ಕಾರನ್ನು ಮಾರುಕಟ್ಟೆಗೆ ಇಳಿಸಲು ಸಿದ್ಧತೆ ನಡೆಸಿಕೊಂಡಿದೆ.
೪ ಕಾರುಗಳ ಬಿಡುಗಡೆ ಭರವಸೆ
ಮಹೀಂದ್ರಾ ಆಂಡ್ ಮಹೀಂದ್ರಾ ೨೦೨೭ರ ಒಳಗೆ ನಾಲ್ಕು ಬ್ಯಾಟರಿ ಚಾಲಿತ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅದರ ಭಾಗವಾಗಿ XUV 400 ಮಾರುಕಟ್ಟೆಗೆ ಇಳಿಯಲಿದೆ. ಮಹೀಂದ್ರಾ ಕಂಪನಿ ಇತ್ತೀಚೆಗೆ ಫೋಕ್ಸ್ ವ್ಯಾಗನ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ತಮ್ಮ ಎಲೆಕ್ಟ್ರಿಕ್ ಕಾರುಗಳಲ್ಲಿ ಆ ಕಂಪನಿಯ ಬ್ಯಾಟರಿಗಳು ಹಾಗೂ ಬಿಡಿಭಾಗಗಳನ್ನು ಬಳಸಿಕೊಳ್ಳುವುದಕ್ಕೆ ಅನುಮತಿ ಪಡೆದುಕೊಂಡಿದೆ.
ಹೊಸ XUV 400 ಕಾರು ಎಕ್ಸ್‌ಯುವಿ ೩೦೦ಗಿಂತ ಸ್ವಲ್ಪ ದೊಡ್ಡದಾಗಿರಲಿದೆ ಎಂದು ಹೇಳಲಾಗುತ್ತಿದೆ. ವಿನ್ಯಾಸವೂ ಆಧುನಿಕ ಎಲೆಕ್ಟ್ರಿಕ್ ಕಾರಿಗೆ ಪೂರಕವಾಗಿರಲಿದೆ. ಕಾರಿನ ಮೋಟಾರ್ ೧೫೦ ಎಚ್‌ಪಿ ಪವರ್ ಸೃಷ್ಟಿಸುವ ಸಾಮರ್ಥ್ಯ ಹೊಂದಿರಲಿದ್ದು, ಟಾಟಾದ ನೆಕ್ಸಾನ್‌ಗಿಂತ ೧೪೩ ಎಚ್‌ಪಿಗಿಂತ ಶಕ್ತಿಶಾಲಿಯಾಗಲಿದೆ.
ಭಾರಿ ಹೂಡಿಕೆ
ಮಹೀಂದ್ರಾ ಕಂಪನಿ ಎಲೆಕ್ಟ್ರಿಕ್ ಕಾರುಗಳು ತಯಾರಿಕೆಗೆ 792೫ ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದ್ದು, ಬ್ರಿಟಿಷ್ ಇಂಟರ್‌ನ್ಯಾಷನಲ್ ಇನ್ವೆಸ್ಟ್‌ಮೆಂಟ್‌ನಿಂದ ೧೯೨೫ ಕೋಟಿ ರೂಪಾಯಿ ಹೂಡಿಕೆ ಪಡೆದುಕೊಂಡಿದೆ. ಒಟ್ಟಾರೆ 70,070 ಕೋಟಿ ರೂಪಾಯಿ ಮೌಲ್ಯದ ಈ ಯೋಜನೆಯಲ್ಲಿ ಬ್ರಿಟಿಷ್ ಇನ್ವೆಸ್ಟ್‌ಮೆಂಟ್ ಕಂಪನಿ ಶೇಕಡ ೪.೭೬ ಪಾಲುದಾರಿಕೆ ಪಡೆದುಕೊಳ್ಳಲಿದೆ.
ಇದನ್ನೂ ಓದಿ: Mid Size SUV ಕಾರು ಬಿಡುಗಡೆಗೆ ಮಾರುತಿ ಸುಜುಕಿ ಸಿದ್ಧತೆ