Site icon Vistara News

New Toll System: ಫಾಸ್ಟ್‌ ಟ್ಯಾಗ್‌ಗೂ ಉಪಗ್ರಹ ಆಧರಿತ ಟೋಲ್‌ ಸಂಗ್ರಹಕ್ಕೂ ಏನು ವ್ಯತ್ಯಾಸ? ಏನು ಪ್ರಯೋಜನ?

New Toll System

ವಿಶ್ವದಲ್ಲೇ ಮೊದಲ ಬಾರಿಗೆ ಉಪಗ್ರಹ ಆಧಾರಿತ ಟೋಲ್ ಸಂಗ್ರಹ (satellite based toll collection) ವ್ಯವಸ್ಥೆಯನ್ನು ಪರಿಚಯಿಸಲು (New Toll System) ಭಾರತ ಮುಂದಾಗಿದೆ. ಇದಕ್ಕಾಗಿ ಜಿಎನ್‌ಎಸ್ಎಸ್ ಮತ್ತು ಜಿಪಿಎಸ್ (GNSS And GPS) ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಟೋಲ್ ಸಂಗ್ರಹ (Toll Collection) ಪ್ರಕ್ರಿಯೆಯಲ್ಲಿ ಪರಿವರ್ತಿಸಲಾಗುವುದು. ಹೊಸ ವ್ಯವಸ್ಥೆಯ ಅಡಿಯಲ್ಲಿ ವಾಹನಗಳಿಗೆ ಪ್ರಯಾಣಿಸುವ ದೂರವನ್ನು ಆಧರಿಸಿ ಶುಲ್ಕವನ್ನು ವಿಧಿಸಲಾಗುತ್ತದೆ. ಈ ವ್ಯವಸ್ಥೆ ಪ್ರಯಾಣಿಕರ ಸಮಯ ಉಳಿಸಲಿದೆ ಎನ್ನುವುದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Union Transport Minister Nitin Gadkari) ಅವರ ಅಭಿಪ್ರಾಯ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಮತ್ತು ಅಡೆತಡೆ-ಮುಕ್ತ ಟೋಲಿಂಗ್ ಅನುಭವವನ್ನು ಒದಗಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) ಮತ್ತು ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (IHMCL) ಭಾರತದಲ್ಲಿ ಜಿಎನ್‌ಎಸ್‌ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ETC) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಅರ್ಹತೆ, ಅನುಭವದ ಆಧಾರದ ಮೇಲೆ ಗ್ಲೋಬಲ್ ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್ (EOI) ಕಂಪನಿಯನ್ನು ಆಹ್ವಾನಿಸಿದೆ.

ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಯೋಜನೆಯು ಅಸ್ತಿತ್ವದಲ್ಲಿರುವ ಫಾಸ್ಟ್ ಟ್ಯಾಗ್ ವ್ಯವಸ್ಥೆಯೊಳಗೆ ಜಿಎನ್‌ಎಸ್‌ಎಸ್ ಆಧಾರಿತ ಇಟಿಸಿ ವ್ಯವಸ್ಥೆಯನ್ನು ಸಂಯೋಜಿಸಲಿದೆ. ಆರ್‌ಎಫ್ಐಡಿ ಆಧಾರಿತ ಇಟಿಸಿ ಮತ್ತು ಜಿಎನ್‌ಎಸ್‌ಎಸ್ ಆಧಾರಿತ ಇಟಿಸಿ ಎರಡೂ ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಹೈಬ್ರಿಡ್ ಮಾದರಿಯನ್ನು ಬಳಸಲಾಗುತ್ತದೆ. ಟೋಲ್ ಪ್ಲಾಜಾಗಳಲ್ಲಿ ಮೀಸಲಾದ ಜಿಎನ್ಎಸ್‌ಎಸ್‌ ಲೇನ್‌ಗಳು ಲಭ್ಯವಿದ್ದು, ಜಿಎನ್‌ಎಸ್‌ಎಸ್ ಆಧಾರಿತ ಇಟಿಸಿ ಹೊಂದಿದ ವಾಹನಗಳು ಮುಕ್ತವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ.

ಜಿಎನ್‌ಎಸ್‌ಎಸ್ ಆಧಾರಿತ ಇಟಿಸಿ ವ್ಯವಸ್ಥೆಯು ಹೆಚ್ಚು ವ್ಯಾಪಕವಾದಂತೆ ಟೋಲ್ ಪ್ಲಾಜಾಗಳಲ್ಲಿನ ಎಲ್ಲಾ ಲೇನ್‌ಗಳನ್ನು ಅಂತಿಮವಾಗಿ ಜಿಎನ್‌ಎಸ್‌ಎಸ್ ಲೇನ್‌ಗಳನ್ನಾಗಿ ಪರಿವರ್ತಿಸಲಾಗುತ್ತದೆ. ಇದು ಭಾರತೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆಯ ದಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲಿದೆ.


ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಎಂದರೇನು?

ಈವರೆಗೆ ಟೋಲ್ ಪ್ಲಾಜಾಗಳಲ್ಲಿ ಟೋಲ್ ಪಾವತಿಗಳನ್ನು ಸಾಂಪ್ರದಾಯಿಕವಾಗಿ ಮಾಡಲಾಗುತ್ತಿದೆ. ಇದಕ್ಕಾಗಿ ಮಾನವ ಸಂಪನ್ಮೂಲ ಅಗತ್ಯವಿದೆ. ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಇದ್ದಾಗಲೂ ಟ್ರಾಫಿಕ್ ಜಾಮ್‌ ಸಮಸ್ಯೆ ಇದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಉಪಗ್ರಹ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಳಸುತ್ತದೆ. ಪ್ರಯಾಣಿಸಿದ ದೂರವನ್ನು ಅಳೆಯಲು ಮತ್ತು ಅದಕ್ಕೆ ಅನುಗುಣವಾಗಿ ಟೋಲ್ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದು ಟೋಲ್ ಪ್ಲಾಜಾಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರ ಸಮಯವನ್ನು ಉಳಿಸುತ್ತದೆ.

ಫಾಸ್ಟ್‌ಟ್ಯಾಗ್‌ಗಿಂತ ಇದು ಹೇಗೆ ಭಿನ್ನ?

ಫಾಸ್ಟ್‌ಟ್ಯಾಗ್‌ಗಿಂತ ಭಿನ್ನವಾಗಿ ಉಪಗ್ರಹ ಆಧಾರಿತ ಜಿಪಿಎಸ್ ಟೋಲ್ ಸಂಗ್ರಹ ವ್ಯವಸ್ಥೆಯು ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್‌ನಲ್ಲಿ (GNSS) ಕಾರ್ಯ ನಿರ್ವಹಿಸುತ್ತದೆ. ಇದು ನಿಖರವಾಗಿ ಸ್ಥಳದ ಟ್ರ್ಯಾಕಿಂಗ್ ಒದಗಿಸುತ್ತದೆ. ಈ ವ್ಯವಸ್ಥೆಯು ನಿಖರವಾದ ದೂರ ಆಧಾರಿತ ಟೋಲ್ ಲೆಕ್ಕಾಚಾರಗಳಿಗಾಗಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಮತ್ತು ಭಾರತದ GPS Aided GEO ಆಗ್ಮೆಂಟೆಡ್ ನ್ಯಾವಿಗೇಷನ್ (GAGAN)ನಂತಹ ತಂತ್ರಜ್ಞಾನಗಳನ್ನು ಬಳಸುತ್ತದೆ.

ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?

ಆನ್-ಬೋರ್ಡ್ ಯೂನಿಟ್ (OBU) ಅಥವಾ ಟ್ರ್ಯಾಕಿಂಗ್ ಸಾಧನವನ್ನು ಹೊಂದಿರುವ ವಾಹನಗಳಿಗೆ ಹೆದ್ದಾರಿಗಳಲ್ಲಿ ಪ್ರಯಾಣಿಸುವ ದೂರವನ್ನು ಆಧರಿಸಿ ಶುಲ್ಕ ವಿಧಿಸಲಾಗುತ್ತದೆ. ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ದಾಖಲೆಗಳು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ನಿರ್ದೇಶಾಂಕಗಳನ್ನು ಹೊಂದಿದ್ದು, ಟೋಲ್ ದರಗಳನ್ನು ನಿರ್ಧರಿಸಲು ಸಾಫ್ಟ್‌ವೇರ್ ಅನ್ನು ಬಳಸಲಾಗುತ್ತದೆ. ಸಿಸಿಟಿವಿ ಕೆಮೆರಾಗಳನ್ನು ಹೊಂದಿರುವ ಸಾಧನಗಳು ವಾಹನಗಳು ಹಾದು ಹೋಗುವುದನ್ನು ದಾಖಲಿಸುತ್ತದೆ. ತಡೆರಹಿತ ಕಾರ್ಯಾಚರಣೆಯನ್ನು ಇದು ಖಾತ್ರಿಪಡಿಸುತ್ತದೆ.

ಕಾರುಗಳು ಆನ್‌ಬೋರ್ಡ್ ಯುನಿಟ್ ಅನ್ನು ಹೊಂದಿದ್ದು, ಟೋಲ್ ಸಂಗ್ರಹಕ್ಕಾಗಿ ಟ್ರ್ಯಾಕಿಂಗ್ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಆನ್ ಬೋರ್ಡ್ ಯುನಿಟ್ ಹೆದ್ದಾರಿಗಳು ಮತ್ತು ಟೋಲ್ ರಸ್ತೆಗಳಲ್ಲಿ ಕಾರಿನ ನಿರ್ದೇಶಾಂಕಗಳನ್ನು ಟ್ರ್ಯಾಕ್ ಮಾಡುತ್ತದೆ. ದೂರವನ್ನು ಲೆಕ್ಕಾಚಾರ ಮಾಡಲು ಉಪಗ್ರಹಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತದೆ.

ದೂರದ ಲೆಕ್ಕಾಚಾರದಲ್ಲಿ ನಿಖರತೆಗಾಗಿ ಸಿಸ್ಟಮ್ ಜಿಪಿಎಸ್ ಮತ್ತು ಜಿ ಎನ್ ಎಸ್ ಎಸ್ ಅನ್ನು ಬಳಸುತ್ತದೆ. ಇನ್ನು ಹೆದ್ದಾರಿಗಳಲ್ಲಿನ ಕೆಮೆರಾಗಳು ಕಾರಿನ ಚಲನೆಗಳನ್ನು ತೆಗೆದ ಚಿತ್ರಗಳೊಂದಿಗೆ ಹೋಲಿಸುವ ಮೂಲಕ ಸರಿಯಾದ ದೂರ ಮಾಪನವನ್ನು ಖಚಿತಪಡಿಸುತ್ತವೆ. ಆರಂಭದಲ್ಲಿ ಪ್ರಮುಖ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ.


ಆನ್‌ ಬೋರ್ಡ್ ಯುನಿಟ್ ಎಲ್ಲಿ ಸಿಗುತ್ತದೆ?

ಆನ್ ಬೋರ್ಡ್ ಯುನಿಟ್‌ಗಳು ಫಾಸ್ಟ್‌ಟ್ಯಾಗ್‌ಗಳಂತೆಯೇ ಸರ್ಕಾರಿ ವೆಬ್‌ಸೈಟ್‌ಗಳ ಮೂಲಕ ಲಭ್ಯವಿರುತ್ತವೆ. ಇದನ್ನು ಬಾಹ್ಯವಾಗಿ ಅಂಟಿಸಬೇಕು. ಕಾರು ತಯಾರಕರೇ ಮುಂಧೆ ಇನ್‌ ಬಿಲ್ಟ್‌ ಆಗಿ ಆನ್ ಬೋರ್ಡ್ ಯುನಿಟ್‌ಗಳೊಂದಿಗೆ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು.

ಆನ್ ಬೋರ್ಡ್ ಯುನಿಟ್ ಒಮ್ಮೆ ಹಾಕಿದ ಬಳಿಕ ಪ್ರಯಾಣಿಸಿದ ದೂರದ ಆಧಾರದ ಮೇಲೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಿಂದ ಟೋಲ್ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.

ಪಾವತಿ ಪ್ರಕ್ರಿಯೆ ಮತ್ತು ಪ್ರಾಯೋಗಿಕ ಅನುಷ್ಠಾನ ಹೇಗೆ?

ಆನ್ ಬೋರ್ಡ್ ಯುನಿಟ್‌ಗೆ ಲಿಂಕ್ ಮಾಡಲಾದ ಡಿಜಿಟಲ್ ವ್ಯಾಲೆಟ್‌ನಿಂದ ಪಾವತಿಗಳನ್ನು ಕಡಿತಗೊಳಿಸಲಾಗುತ್ತದೆ. ಟೋಲ್ ಪಾವತಿಯನ್ನು ಇದು ಸುಗಮಗೊಳಿಸುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ಆಯ್ದ ವಿಭಾಗಗಳಲ್ಲಿನ ಪ್ರಾಯೋಗಿಕ ಯೋಜನೆಗಳು ಜಿ ಎನ್ ಎಸ್ ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ವ್ಯವಸ್ಥೆಯ ಪರಿಣಾಮವನ್ನು ಆರಂಭದಲ್ಲಿ ಪರೀಕ್ಷಿಸುತ್ತವೆ. ಇದನ್ನು ಆರಂಭದಲ್ಲಿ ಫಾಸ್ಟ್ ಟ್ಯಾಗ್ ಜೊತೆಗೆನೇ ಚಾಲನೆಯಲ್ಲಿ ಇರಲಿದೆ.

ಟೋಲ್ ಆದಾಯದ ಮೇಲೆ ಏನು ಪರಿಣಾಮ?

ಪ್ರಸ್ತುತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್‌ನಿಂದ ಸುಮಾರು 40,000 ಕೋಟಿ ರೂ. ಗಳಿಸುತ್ತಿದೆ. ಭಾರತವು ಈ ಸುಧಾರಿತ ಟೋಲ್ ಸಂಗ್ರಹ ವ್ಯವಸ್ಥೆಗೆ ಪರಿವರ್ತನೆಯಾಗುತ್ತಿದ್ದಂತೆ ಮುಂದಿನ 2- 3 ವರ್ಷಗಳಲ್ಲಿ ಈ ಮೊತ್ತವು 1,40,000 ಕೋಟಿ ರೂ.ಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಇದು ಭಾರತದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದೆ?

ಭಾರತದಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವುದು ರಸ್ತೆ ಜಾಲದ ವಿಶಾಲವಾದ ಪ್ರಮಾಣ ಮತ್ತು ವೈವಿಧ್ಯಮಯ ವಾಹನಗಳ ಕಾರಣದಿಂದಾಗಿ ಸವಾಲಿನ ಕೆಲಸವಾಗಿದೆ. ಆದರೆ ಡಿಜಿಟಲ್ ವಹಿವಾಟುಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಪ್ರಾವೀಣ್ಯತೆಯನ್ನು ಸಾಧಿಸಿದೆ. ಹಾಗಾಗಿ ಈ ಹೊಸ ವ್ಯವಸ್ಥೆಗೆ ವಾಹನ ಸವಾರರು ಬೇಗ ಹೊಂದಿಕೊಳ್ಳಲಿದ್ದಾರೆ ಎಂಬ ಅಭಿಪ್ರಾಯವಿದೆ.


ಇದನ್ನೂ ಓದಿ: Signal-Free Corridor: ಬೆಂಗಳೂರಿನಲ್ಲಿ 17 ಸಿಗ್ನಲ್ ಮುಕ್ತ ಕಾರಿಡಾರ್‌; ಯಾವ ಮಾರ್ಗಗಳಲ್ಲಿ ನೋಡಿ

ಹೊಸ ವ್ಯವಸ್ಥೆಗೆ ಬದಲಿಸಲು ಗಮನಾರ್ಹ ಮೂಲಸೌಕರ್ಯದ ಅಗತ್ಯವಿರುತ್ತದೆ. ಫಾಸ್ಟ್ಯಾಗ್‌ಗಳ ಸುತ್ತ ಕೇಂದ್ರೀಕೃತವಾಗಿರುವ ಪ್ರಸ್ತುತ ಮೂಲಸೌಕರ್ಯವನ್ನು ಆಮೂಲಾಗ್ರವಾಗಿ ಬದಲಿಸಬೇಕಾಗುತ್ತದೆ. ಹಾಗಾಗಿ ಟೋಲ್ ದರ ಹೆಚ್ಚುವ ಸಾಧ್ಯತೆಯೂ ಇದೆ. ಈ ಸವಾಲುಗಳ ಹೊರತಾಗಿಯೂ ಭಾರತದಲ್ಲಿ ಟೋಲ್ ಸಂಗ್ರಹ ರಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಯೋಜನೆ ಅನುಷ್ಠಾನ ಮಾಡೋರು ಯಾರು?

ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ (IHMCL) ಜಿ ಎನ್ ಎಸ್ ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಅರ್ಹ ಗ್ಲೋಬಲ್ ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್ (EOI) ಕಂಪನಿಯನ್ನು ಆಹ್ವಾನಿಸಿದೆ. ಶೀಘ್ರದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಂದಿದೆ.

Exit mobile version