Site icon Vistara News

Nokia Jobs Cut: 14,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ನೋಕಿಯಾ ಕಂಪನಿ; ಏನು ಕಾರಣ?

Nokia

ಹೊಸದಿಲ್ಲಿ: ನೋಕಿಯಾ ಸಂಸ್ಥೆ (Nokia) 14,000 ಉದ್ಯೋಗಿಗಳನ್ನು ಕೆಲಸದಿಂದ (Nokia Jobs Cut) ತೆಗೆದಿದೆ. ಮಾರಾಟದಲ್ಲಿ 20% ಕುಸಿತ ಕಂಡಿರುವ ಸಂಸ್ಥೆ, ವೆಚ್ಚವನ್ನು ಕಡಿತಗೊಳಿಸಲು ಹಾಗೂ ಲಾಭದಾಯಕತೆಯನ್ನು ರಕ್ಷಿಸಲು ಈ ಕ್ರಮ ತೆಗೆದುಕೊಂಡಿದೆ.

ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ಮಾರಾಟದಲ್ಲಿ 20 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಇದರ ಬಳಿಕ ಫಿನ್ನಿಷ್ ಟೆಲಿಕಾಂ ಗ್ರೂಪ್ Nokia ವೆಚ್ಚ ಉಳಿತಾಯ ಕಾರ್ಯಕ್ರಮ ಘೋಷಿಸಿತು. ಉತ್ತರ ಅಮೆರಿಕದಂತಹ ಮಾರುಕಟ್ಟೆಗಳಲ್ಲಿ 5G ಉಪಕರಣಗಳ ಮಾರಾಟ ನಿಧಾನಗೊಂಡ ಕಾರಣ ಕಂಪನಿಯ ಮಾರಾಟ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 20ರಷ್ಟು ಕುಸಿದಿದೆ.

“ನೋಕಿಯಾ 2024ರಲ್ಲಿ ಕನಿಷ್ಠ 400 ಮಿಲಿಯನ್ ಯುರೋಗಳಷ್ಟು ವಾರ್ಷಿಕ ಉಳಿತಾಯ ಮತ್ತು 2025ರಲ್ಲಿ ಇನ್ನೂ 300 ಮಿಲಿಯನ್ ಯುರೋಗಳ ಲಾಭದಲ್ಲಿ ಕಾರ್ಯನಿರ್ವಹಿಸಲು ನಿರೀಕ್ಷಿಸುತ್ತದೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ನೋಕಿಯಾ ಈಗ 86,000 ಉದ್ಯೋಗಿಗಳನ್ನು ಹೊಂದಿದೆ. ಹೊಸ ಉಪಕ್ರಮದಿಂದ 72,000- 77,000 ಉದ್ಯೋಗಿಗಳು ಉಳಿಯಲಿದ್ದಾರೆ.

2023ಕ್ಕೆ ಹೋಲಿಸಿದರೆ 2026ರ ಅಂತ್ಯದ ವೇಳೆಗೆ 800 ಮಿಲಿಯ- 1,200 ಮಿಲಿಯ ಯೂರೋ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು Nokia ಹೊಂದಿದೆ. ಇದು ಸಿಬ್ಬಂದಿ ವೆಚ್ಚದಲ್ಲಿ ಶೇಕಡಾ 10-15ರಷ್ಟು ಕಡಿತವನ್ನು ನಿರೀಕ್ಷಿಸಲಿದೆ. ನೋಕಿಯಾ ಅಧ್ಯಕ್ಷ ಮತ್ತು ಸಿಇಒ ಪೆಕ್ಕಾ ಲುಂಡ್‌ಮಾರ್ಕ್, “ಅತ್ಯಂತ ಕಷ್ಟಕರವಾದ ವ್ಯಾಪಾರ ನಿರ್ಧಾರಗಳು ಇವು. ನಾವು Nokiaದಲ್ಲಿ ಅಪಾರ ಪ್ರತಿಭಾವಂತ ಉದ್ಯೋಗಿಗಳನ್ನು ಹೊಂದಿದ್ದೇವೆ. ಮಾರುಕಟ್ಟೆಯ ಅನಿಶ್ಚಿತತೆಗೆ ಹೊಂದಿಕೊಳ್ಳಲು ಮತ್ತು ನಮ್ಮ ದೀರ್ಘಾವಧಿಯ ಲಾಭದಾಯಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಭದ್ರಪಡಿಸಿಕೊಳ್ಳಲು ವೆಚ್ಚ-ಮೂಲವನ್ನು ಮರುಹೊಂದಿಸುವುದು ಅವಶ್ಯಕವಾಗಿದೆʼʼ ಎಂದಿದ್ದಾರೆ.

ನೋಕಿಯಾದ ನಿವ್ವಳ ಮಾರಾಟ ಕಳೆದ ವರ್ಷದ 6.24 ಶತಕೋಟಿ ಯುರೋಗಳಿಂದ 4.98 ಶತಕೋಟಿ ಯುರೋಗಳಿಗೆ ಕುಸಿದಿದೆ. “ಮಾರುಕಟ್ಟೆಗಳ ದೀರ್ಘಾವಧಿಯ ಆಕರ್ಷಣೆಯನ್ನು ನಾವು ನಂಬುತ್ತೇವೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು AI ಕ್ರಾಂತಿಗಳು ವ್ಯಾಪಕವಾಗಿ ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ ನೆಟ್‌ವರ್ಕ್‌ಗಳಲ್ಲಿ ಗಮನಾರ್ಹ ಹೂಡಿಕೆಗಳಿಲ್ಲದೆ ಕಾರ್ಯರೂಪಕ್ಕೆ ಬರುವುದಿಲ್ಲ. ಮಾರುಕಟ್ಟೆಯ ಚೇತರಿಕೆಯ ಸಮಯ ಅನಿಶ್ಚಿತವಾಗಿರುವಾಗ ನಾವು ಕಾರ್ಯತಂತ್ರ, ಕಾರ್ಯಾಚರಣೆ ಮತ್ತು ವೆಚ್ಚಗಳಲ್ಲಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆʼʼ ಎಂದು ಲುಂಡ್‌ಮಾರ್ಕ್ ಹೇಳಿದ್ದಾರೆ.

ಇದನ್ನೂ ಓದಿ: Nokia Logo: 60 ವರ್ಷಗಳ ನಂತರ ಲೋಗೋ ಬದಲಿಸಿದ ನೋಕಿಯಾ; ನೀಲಿ ಬಣ್ಣ ಹೋಯ್ತು, ಅಕ್ಷರಗಳ ವಿನ್ಯಾಸ ಬದಲಾಯ್ತು

Exit mobile version