ಬೆಂಗಳೂರು : ಟಾಟಾ ಸನ್ಸ್ ಸಂಸ್ಥೆಯ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ, ಸೆಪ್ಟೆಂಬರ್ ೪ರಂದು ಮುಂಬಯಿನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ದೇಶದ ಉದ್ಯಮ ಕ್ಷೇತ್ರದ ಗಣ್ಯರನ್ನು ಬೆಚ್ಚಿ ಬೀಳಿಸಿತ್ತು. ಅದರಲ್ಲೂ ಐಷಾರಾಮಿ ಹಾಗೂ ಸುರಕ್ಷಿತ ಕಾರು ಎನಿಸಿಕೊಂಡಿರುವ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರು ಹೆಚ್ಚಿನ ಗಾಯಗಳಾದ ಹೊರತಾಗಿಯೂ ಮೃತಪಡಲು ಕಾರಣವೇನು ಎಂಬ ಸಂದೇಹ ಮೂಡಿತ್ತು. ಕಾರು ಜಖಂಗೊಂಡಿರುವ ರೀತಿಯನ್ನು ಗಮನಿಸಿದಾಗ ಆ ರೀತಿ ಅನಿಸಿದ್ದು ಸಹಜ. ಆದರೆ, ಸ್ಥಳ ಮಹಜರಿನ ಬಳಿಕ ಪೊಲೀಸರು ನೀಡಿದ ಹೇಳಿಕೆಯಿಂದ ಸಾವಿಗೆ ಕಾರಣ ಬಹಿರಂಗವಾಗಿತ್ತು. ಪ್ರಯಾಣದ ವೇಳೆ ಸೈರಸ್ ಅವರು ಸೀಟ್ ಬೆಲ್ಟ್ ಹಾಕಿಕೊಂಡಿರದ ಕಾರಣ ಕಾರಿನೊಳಗೆ ಎಸೆಯಲ್ಪಟ್ಟು, ತಲೆಗೆ ಏಟು ಬಿದ್ದು ಪ್ರಾಣ ಕಳೆದುಕೊಂಡಿದ್ದರು.
ಈ ಘಟನೆ ಬಳಿಕ ಸೀಟ್ ಬೆಲ್ಟ್‌ನ ಪ್ರಯೋಜನ ಹಾಗೂ ಭಾರತದ ಕಾರು ಪ್ರಯಾಣಿಕರು ಅದರ ಬಗ್ಗೆ ತೋರುವ ದಿವ್ಯ ನಿರ್ಲಕ್ಷ್ಯದ ಬಗ್ಗೆ ಬೆಳಕು ಚೆಲ್ಲಿದೆ. ಹೌದು, ಭಾರತದಲ್ಲಿ ಬಹುತೇಕ ಮಂದಿ ಸೀಟ್ ಬೆಲ್ಟ್ ಧರಿಸುವ ವಿಚಾರದಲ್ಲಿ ಅಸಡ್ಡೆ ತೋರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಸೀಟ್ ಬೆಲ್ಟ್‌ಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಇಂಥ ಧೋರಣೆಯೇ ಹಲವರ ಪ್ರಾಣಕ್ಕೆ ಎರವಾಗಿದೆ. ಅರಿವಿನ ಕೊರತೆಯೇ ಈ ಅನಾಹುತಕ್ಕೆ ಮೂಲಕ ಕಾರಣ.
ಸೀಟ್ ಬೆಲ್ಟ್ ಯಾಕೆ ಕಡ್ಡಾಯ?
ವಾಹನ ಚಾಲನೆ ಮಾಡುವಾಗ ಚಾಲಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂಬುದಾಗಿ ಭಾರತೀಯ ಮೋಟಾರು ವಾಹನ ಕಾಯಿದೆ ಹೇಳುತ್ತದೆ. ಉಲ್ಲಂಘನೆಗೆ ದಂಡನೆಯನ್ನೂ ವಿವರಿಸಲಾಗಿದೆ. ಹೀಗಾಗಿ ಬೆಲ್ಟ್ ಧರಿಸದ ಚಾಲಕರನ್ನು ಹಿಡಿದು ಪೊಲೀಸರು ದಂಡ ವಿಧಿಸುತ್ತಾರೆ. ಹೀಗಾಗಿ ಭಾರತದಲ್ಲಿ ಬಹುತೇಕ ಮಂದಿಯ ತಿಳಿವಳಿಕೆ ಏನೆಂದರೆ, ಸೀಟ್ ಬೆಲ್ಟ್ ಹಾಕುವುದು ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರ. ಸೀಟ್ ಬೆಲ್ಟ್ ಬಗೆಗಿನ ನಿಯಮದ ಯಶಸ್ಸು ಅಷ್ಟಕ್ಕೆ ಸೀಮಿತ. ಅಷ್ಟೇ ಅಲ್ಲದೆ, ಚಾಲಕರ ಪಕ್ಕದ ಸೀಟಿನಲ್ಲಿ ಕುಳಿತವರೂ ಸೀಟ್ ಬೆಲ್ಟ್ ಹಾಕಿಕೊಂಡಿರದಿದ್ದರೂ ದಂಡ ವಿಧಿಸಬಹುದು ಎಂದೂ ನಿಯಮದಲ್ಲಿದೆ. ಆದರೆ, ಕಾನೂನು ಪಾಲಕರೂ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಉಲ್ಲಂಘನೆ ನಿತ್ಯ ನಿರಂತರ.
ಸೀಟ್ ಬೆಲ್ಟ್ ಕಡ್ಡಾಯ ಕಾನೂನನ್ನು ಹಲವು ಮಂದಿ ಪೊಲೀಸರ ವಸೂಲಿಯ ಮಾರ್ಗ ಎಂದು ಅಂದುಕೊಂಡಿದ್ದಾರೆ. ವಾಸ್ತವದಲ್ಲಿ ಅದು ಪ್ರಯಾಣಿಕರ ಜೀವ ರಕ್ಷಕ. ಸಾಕಷ್ಟು ಅವಘಡಗಳಲ್ಲಿ ಸೀಟ್ ಬೆಲ್ಟ್ ಧರಿಸಿದ್ದ ಕಾರಣಕ್ಕೆ ಪ್ರಾಣ ಉಳಿದ ಉದಾಹರಣೆಗಳಿವೆ. ಹೀಗಾಗಿ ಚಾಲಕರೊಬ್ಬರೇ ಅಲ್ಲ, ಎಲ್ಲ ಪ್ರಯಾಣಿಕರು ಸೀಟ್ ಧರಿಸಬೇಕು ಎಂಬುದು ಕಾಮನ್‌ಸೆನ್ಸ್.
ಸೈರಸ್ ಮಿಸ್ತ್ರಿ ಅವರ ಕಾರು ಅವಘಡದ ವೇಳೆಯೂ ಇದೇ ತಪ್ಪು ಘಟಿಸಿದ್ದು. ಸುರಕ್ಷತೆಯ ಹಲವು ಫೀಚರ್‌ಗಳನ್ನು ಹೊಂದಿದ್ದ ಆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಿಸ್ತ್ರಿ, ಸೀಟ್ ಬೆಲ್ಟ್ ಹಾಕಿಕೊಂಡಿರಲಿಲ್ಲ. ಕಾರು ಡಿವೈಡರ್‌ಗೆ ಅಪ್ಪಳಿಸಿದಾದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅವರು ಮುಂದಿನ ಸೀಟಿನ ತನಕ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಅವರ ತಲೆಗೆ ಗಂಭೀರ ಹೊಡೆತ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನ ಸಂಸ್ಥೆಯಾಗಿರುವ EKA ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮೆಹ್ತಾ ಅವರು ವಿಡಿಯೊ ಸಮೇತ ವಿಶೇಷ ಕಾಳಜಿಯ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸುವುದರಿಂದ ಆಗುವ ಲಾಭವೇನು ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ ಧರಿಸದವರು ಹಾಗೂ ಧರಿಸದೇ ಇರುವವರಿಗೆ ಆಗುವ ಹೊಡೆತದ ಪ್ರಮಾಣವನ್ನು ಚಿತ್ರಿಸಿಕೊಟ್ಟಿದ್ದಾರೆ. ಅವರ ಟ್ವೀಟ್ ಇಂತಿದೆ.
“ಮುಂದಿನ ಹಾಗೂ ಹಿಂದಿನ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಎಷ್ಟು ಅಗತ್ಯ ಎಂಬುದನ್ನು ಈ ಘಟನೆ ಸ್ಮರಿಸುವಂತೆ ಮಾಡಿದೆ. ಈಗಲಾದರೂ ಎಲ್ಲರೂ ಸೀಟ್ ಬೆಲ್ಟ್ ಧರಿಸಬೇಕು ಎಂಬುದು ಮಾನದಂಡವಾಗಲಿ. ಸೀಟ್ ಉತ್ಪಾದಕರಾಗಿ ನಮಗೆ ಸೀಟ್ ಬೆಲ್ಟ್‌ನ ಅಗತ್ಯದ ಬಗ್ಗೆ ಅರಿವಿದೆ ಹಾಗೂ ಅದು ಸಾಕಷ್ಟು ಸಂದರ್ಭದಲ್ಲಿ ಅದರ ಪ್ರಯೋಜನಗಳು ಸಾಬೀತಾಗಿವೆ. ಒಟ್ಟಿನಲ್ಲಿ ಸೀಟ್ ಬೆಲ್ಟ್‌ನ ಬಳಕೆ ಹಾಗೂ ನಿರ್ಲಕ್ಷ್ಯ ಎಂಬುದು ಜೀವನ ಹಾಗೂ ಮರಣದ ನಡುವಿನ ವ್ಯತ್ಯಾಸವಷ್ಟೆ,” ಎಂದು ಅವರು ಬರೆದುಕೊಂಡಿದ್ದಾರೆ.
ಹಿಂಬದಿ ಸೀಟಿನವರೂ ಹಾಕಬೇಕೇ?
ಖಂಡಿತವಾಗಿ ಕಾರಿನಲ್ಲಿ ಪ್ರಯಾಣಿಸುವ ಎಲ್ಲರೂ ಸೀಟ್ ಬೆಲ್ಟ್ ಹಾಕಲೇಬೇಕು. ಅಪಘಾತಗಳ ಹಲವು ಸಂದರ್ಭಗಳಲ್ಲಿ ಬಾಹ್ಯ ಏಟಿಗಿಂತ ಒಳಗಿನ ಕುಲುಕಾಟಕ್ಕೇ ಸಾಕಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ. ಇಲ್ಲಿ ಹಿಂಬದಿ ಹಾಗೂ ಮುಂಬದಿ ಸೀಟಿನ ಪ್ರಯಾಣಿಕರು ಎಂಬ ಯಾವ ಭೇದವೂ ಇಲ್ಲ. ಮುಂಬದಿ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದರೆ ಅವರ ಮುಖ ಮತ್ತು ಎದೆ ಡ್ಯಾಶ್ ಬೋರ್ಡ್ ಹಾಗೂ ಸ್ಟೇರಿಂಗ್‌ಗೆ ಬಡಿಯುತ್ತದೆ. ಅಪಘಾತದ ತೀವ್ರತೆ ಕಡಿಮೆಯಿದ್ದರೂ, ಬಡಿತದಿಂದ ಆಗುವ ಆಂತರಿಕ ಗಾಯಗಳು ಪ್ರಾಣಕ್ಕೆ ಕುತ್ತು ತರುತ್ತದೆ. ಸೀಟ್ ಬೆಲ್ಟ್ ಹಾಕಿಕೊಂಡಿರುತ್ತಿದ್ದರೆ ಅವರು ಸೀಟಿಗೆ ಅಂಟಿಕೊಂಡಿರುತ್ತಿದ್ದರು ಹಾಗೂ ಆಂತರಿಕ ಹೊಡೆತಗಳ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅಂತೆಯೇ ಹಿಂಬದಿ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಹಾಕಿಕೊಂಡಿರದಿದ್ದರೆ, ಮುಂದಿನ ಸೀಟಿಗೆ ಅವರ ಎದೆ ಅಥವಾ ತಲೆ ಬಡಿಯುತ್ತದೆ. ಅಥವಾ ಹೊರಗೆ ಎಸೆಯಲ್ಪಡುತ್ತಾರೆ. ಸೈರಸ್ ಅವರ ಸಾವು ಇದಕ್ಕೆ ಸ್ಪಷ್ಟ ಉದಾಹರಣೆ.
ಶೀಘ್ರದಲ್ಲೇ ದಂಡ ಪ್ರಯೋಗ
ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತವರೂ ಕಡ್ಡಾಯವಾಗಿ ಸೀಟು ಧರಿಸಬೇಕು ಎಂಬ ಹೊಸ ಕಾನೂನು ರಚಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಈ ನಿಯಮದಡಿ ಹಿಂದಿನ ಸೀಟಿನವರು ಬೆಲ್ಟ್ ಧರಿಸದಿದ್ದರೆ ದಂಡ ಖಾತರಿ. ಹಿಂಬದಿ ಸೀಟಿನಲ್ಲಿ ಕುಳಿತವರೂ ಬೆಲ್ಟ್ ಧರಿಸಿಕೊಂಡಿರಬೇಕು ಎಂಬ ನಿಯಮವಿದೆ. ಆದರೂ ಅದನ್ನು ಪಾಲಿಸುತ್ತಿಲ್ಲ. ಹೀಗಾಗಿ ದಂಡ ಪ್ರಯೋಗ ಮಾಡುವ ಚಿಂತನೆ ಇದೆ ಎಂದು ಗಡ್ಕರಿ ಅವರು ಹೇಳಿದ್ದಾರೆ.
ಎಷ್ಟು ಬೆಲ್ಟ್‌ಗಳಿರುತ್ತವೆ?
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿ ಒಟ್ಟಾರೆ ನಾಲ್ಕು ಸೀಟ್ ಬೆಲ್ಟ್‌ಗಳಿರುತ್ತವೆ. ಮುಂಬದಿ ಸೀಟಿನಲ್ಲಿ ಎರಡು ಹಾಗೂ ಹಿಂಬದಿ ಸೀಟಿನಲ್ಲಿ ಎರಡು ಬೆಲ್ಟ್‌ಗಳಿರುತ್ತವೆ. ಮುಂಬದಿ ಸೀಟಿನ ಬೆಲ್ಟ್‌ಗಳು ಎಲ್ಲರಿಗೂ ಗೋಚರಿಸುವಂತಿರುತ್ತದೆ. ಅದರೆ, ಹಿಂಬದಿ ಸೀಟಿನ ಬೆಲ್ಟ್‌ಗಳು ಮೂಲೆ ಸೇರಿರುತ್ತವೆ. ಅದನ್ನು ಸಿಲುಕಿಸುವ ಹುಕ್‌ಗಳು ಸೀಟ್ ಕವರ್‌ನ ಅಡಿಯಲ್ಲಿ ಹುದುಗಿರುತ್ತವೆ. ಹೀಗಾಗಿ ಅದನ್ನು ಯಾರೂ ಬಳಸುವುದಿಲ್ಲ. ಆದರೆ, ಐದು ಪ್ರಯಾಣಿಕರ ಸಾಮರ್ಥ್ಯದ ಕಾರುಗಳಲ್ಲಿ ನಾಲ್ಕು ಬೆಲ್ಟ್‌ಗಳಷ್ಟೇ ಇರುತ್ತವೆ ಎಂಬುದು ಗಮನಿಸಬೇಕಾದ ಅಂಶ. ಆದರೆ, ಎಷ್ಟು ಮಂದಿ ಸಾಧ್ಯವೂ ಅಷ್ಟು ಮಂದಿ ಬೆಲ್ಟ್ ಧರಿಸಿಕೊಂಡರೆ ಉತ್ತಮ.
ಇನ್ನೂ ಸಾಕಷ್ಟು ಮಂದಿ ಮಕ್ಕಳನ್ನು ಮುಂದಿನ ಸೀಟಿನಲ್ಲಿ ಕೂರಿಸಿ ಸೀಟ್ ಬೆಲ್ಟ್ ಹಾಕುವುದಿಲ್ಲ. ಇದೂ ಅಪಾಯಕಾರಿ. ಮಕ್ಕಳು ಬೇಗ ನಿಯಂತ್ರಣ ಕಳೆದುಕೊಳ್ಳುವ ಕಾರಣ ಅವಘಡ ಸಂಭವಿಸಿದಾಗ ಅವರು ಬೇಗನೆ ಚೆಲ್ಲಾಪಿಲ್ಲಿಯಾಗಿ ಬೀಳುತ್ತಾರೆ.
ಸೈರನ್ ಇದೆ
ಆಧುನಿಕ ಕಾರುಗಳಲ್ಲಿ ಮುಂಬದಿ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದರೆ ವಾರ್ನಿಂಗ್ ಸೈರನ್ ಮೊಳಗುತ್ತದೆ. ಈ ಅನಿವಾರ್ಯತೆಗೆ ಸಾಕಷ್ಟು ಮಂದಿ ಸೀಟ್ ಬೆಲ್ಟ್ ಧರಿಸುತ್ತಾರೆ. ಆದರೆ, ಹಿಂದಿನ ಸೀಟಿನವರಿಗೆ ಈ ವಾರ್ನಿಂಗ್ ಸೌಲಭ್ಯ ಸದ್ಯಕ್ಕಿಲ್ಲ. ಇನ್ನೂ ಕೆಲವರು ಸೈರನ್ ಮೊಳಗುತ್ತದೆ ಎಂಬ ಕಾರಣಕ್ಕೆ ಬೆಲ್ಟ್ ಅನ್ನು ಮೊದಲೇ ಚುಚ್ಚಿ ಅದರ ಮೇಲೆ ಕುಳಿತುಕೊಳ್ಳುತ್ತಾರೆ. ಇಂತಹ ಧೋರಣೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟ.
ಇದನ್ನೂ ಓದಿ |Cyrus Mistry Death | ಸೈರಸ್ ಮಿಸ್ತ್ರಿಯವರ ತಲೆಗೆ ಗಾಯ: ವೈದ್ಯರ ಹೇಳಿಕೆ