ನ್ಯೂಯಾರ್ಕ್: ಓಪನ್‌ಎಐ (OpenAI) ಸಂಸ್ಥೆಯಲ್ಲಿ ಕಳೆದ ವಾರ ನಡೆದ ಬಂಡಾಯದ ಹಿನ್ನೆಲೆಯಲ್ಲಿ, ಚಾಟ್‌ಜಿಪಿಟಿಗಿಂತಲೂ (ChatGPT) ಸ್ಮಾರ್ಟ್ ಆದ, ಸುರಕ್ಷತೆಗೆ ಧಕ್ಕೆ ತಂದೊಡ್ಡಬಲ್ಲ ಎಐ ಮಾದರಿಯ (AI model) ಆವಿಷ್ಕಾರವಿತ್ತು ಎಂದು ಇದೀಗ ಶಂಕಿಸಲಾಗಿದೆ.
ಈಗಾಗಲೇ ChatGPT ಎಂಬ ಸ್ಮಾರ್ಟ್ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಅನ್ನು ಓಪನ್‌ಎಐ ಅಭಿವೃದ್ಧಿಪಡಿಸಿದೆ. ಇದಕ್ಕಿಂತಲೂ ಸುಧಾರಿತವಾದ ಕೃತಕ ಬುದ್ಧಿಮತ್ತೆಯೊಂದನ್ನು ಸ್ಯಾಮ್ ಆಲ್ಟ್‌ಮ್ಯಾನ್ (Sam Altman) ತಂಡ ಆವಿಷ್ಕರಿಸಿದ್ದು, ಇದು ಬಹಳ ಶಕ್ತಿಯುತವಾಗಿದೆ ಎನ್ನಲಾಗಿದೆ. ಇದು ಕಂಪನಿಯ ಸಿಬ್ಬಂದಿಯಲ್ಲಿ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ಬಡಿದೆಬ್ಬಿಸಿತ್ತು.
ಕೆಲವು OpenAI ಸಂಶೋಧಕರು, ಕೃತಕ ಬುದ್ಧಿಮತ್ತೆಯ ಇಂತಹ ಮಾದರಿಯಿಂದ ಗಾಬರಿಗೊಂಡಿದ್ದು, ಇದು ಮಾನವೀಯತೆಗೆ ಧಕ್ಕೆ ತರಬಹುದು ಎಂದು ಎಚ್ಚರಿಸಿ ನಿರ್ದೇಶಕರ ಮಂಡಳಿಗೆ ಬರೆದಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.
Q* ಎಂದು ಈ ಮಾದರಿಯನ್ನು ಹೆಸರಿಸಲಾಗಿತ್ತು ಹಾಗೂ “Q-ಸ್ಟಾರ್” ಎಂದು ಉಚ್ಚರಿಸಲಾಗುತ್ತದೆ. ತಜ್ಞರನ್ನು ಆತಂಕಕ್ಕೊಳಗಾಗಿಸಿದ ಸಂಗತಿಯೆಂದರೆ, ಇದು ಗಣಿತದ ಕೆಲವು ಮೂಲ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿತ್ತು. ಹಿಂದೆಂದೂ ತಾನು ನೋಡಿರದ ಮೂಲ ಗಣಿತದ ಪ್ರಶ್ನೆಗಳನ್ನು ಇದು ಬಿಡಿಸಿತು. ಜತೆಗೆ ಸಾಕಷ್ಟು ವೇಗವಾಗಿಯೂ ಇತ್ತು. ಇದು ಎಐ ಸುರಕ್ಷತಾ ಸಂಶೋಧಕರಿಗೆ ಆತಂಕ ತಂದಿದೆ.
ಕಳೆದ ವಾರ ಓಪನ್‌ಎಐ ಸಂಸ್ಥೆಯ ಸಿಇಒ ಆಗಿದ್ದ ಸ್ಯಾಮ್ ಆಲ್ಟ್‌ಮ್ಯಾನ್ (Sam Altman) ಅವರನ್ನು ಉಚ್ಚಾಟಿಸಲಾಗಿತ್ತು. ನಂತರ ಉಪಾಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ಕೂಡ ಹೊರಬಿದ್ದಿದ್ದರು. ಕಂಪನಿಯ ಎಲ್ಲಾ 750 ಸಿಬ್ಬಂದಿ ಸ್ಯಾಮ್‌ನನ್ನು ಮರಳಿ ಕರೆತರದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದರು. ನಂತರ ಸ್ಯಾಮ್, ಮೈಕ್ರೋಸಾಫ್ಟ್ ಸೇರಿಕೊಂಡಿದ್ದರು. ಬಳಿಕ ಓಪನ್‌ಎಐಯಲ್ಲಿ ಭಾರಿ ಹೂಡಿಕೆ ಮಾಡಿರುವ ಮೈಕ್ರೋಸಾಫ್ಟ್‌ನ (Microsoft) ಸಿಇಒ ಸತ್ಯ ನಾಡೆಲ್ಲಾ (Satya Nadella) ಅವರ ಬೆಂಬಲದೊಂದಿಗೆ ಮರಳಿ ಓಪನ್‌ಎಐ ಸಂಸ್ಥೆಯ ಸಿಇಒ ಆಗಿ ಸ್ಯಾಮ್ ಮರಳಿದ್ದರು.
ಇದರೊಂದಿಗೆ, OpenAI ತುಂಬಾ ವೇಗವಾಗಿ ಮುಂದುವರಿಯುತ್ತಿದೆ ಎಂದು ತಜ್ಞರು ಅದರ ʼವೇಗ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೃತಕ ಸಾಮಾನ್ಯ ಬುದ್ಧಿಮತ್ತೆಯ (AGI) ಅಭಿವೃದ್ಧಿಯ ಕಡೆಗೆ ಸಂಸ್ಥೆ ವೇಗವಾಗಿ ಮುಂದುವರಿಯುತ್ತಿದೆ ಎನ್ನಲಾಗಿದೆ. ಮಾನವ ಮಟ್ಟದ ಅತವಾ ಮಾನವನಿಗಿಂತ ಮೇಲಿನ ಮಟ್ಟದ ಕಾರ್ಯಗಳನ್ನು ನಿರ್ವಹಿಸುವ ಕೃತಕ ಬುದ್ಧಿವಂತಿಕೆಯ ಮಟ್ಟಗಳನ್ನು ಕೃತಕ ಸಾಮಾನ್ಯ ಬುದ್ಧಿಮತ್ತೆ (AGI) ಎನ್ನಲಾಗುತ್ತದೆ.
ಗಣಿತದ ಪ್ರಶ್ನೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು AIನಲ್ಲಿ ಗಮನಾರ್ಹ ಬೆಳವಣಿಗೆಯಾಗಿ ನೋಡಲಾಗುತ್ತದೆ. ಗಣಿತವನ್ನು ಪರಿಹರಿಸುವ ದೊಡ್ಡ ಭಾಷಾ ಮಾದರಿಯ (LLM) ಬೆಳವಣಿಗೆಯು ಎಐಯಲ್ಲಿ ದೊಡ್ಡ ಪ್ರಗತಿಯಾಗಿರುತ್ತದೆ ಎಂದು ಪೀಪಲ್ ಸೆಂಟರ್ಡ್ ಎಐ ಸಂಸ್ಥೆಯ ತಜ್ಞ ಆಂಡ್ರ್ಯೂ ರೋಗೋಯ್ಸ್ಕಿ ಹೇಳಿದ್ದಾರೆ.
ಸಂಸ್ಥೆಯಿಂದ ವಜಾಗೊಳಿಸುವ ಒಂದು ದಿನದ ಮೊದಲು ಮಾತನಾಡುತ್ತಾ ಸ್ಯಾಮ್ ಆಲ್ಟ್‌ಮನ್, ಹೊಸ ಎಐ ಪ್ರಗತಿಯ ಬಗ್ಗೆ ಸೂಚನೆ ನೀಡಿದ್ದರು. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಓಪನ್‌ಎಐ ಇತಿಹಾಸದಲ್ಲಿ ನಾಲ್ಕು ಬಾರಿ ನಾವು ಅದ್ಭುತ ಪ್ರಗತಿ ಸಾಧಿಸಿದ್ದೇವೆ. ನಾಲ್ಕನೆಯದು ಒಂದೆರಡು ವಾರಗಳ ಹಿಂದೆ ನಡೆಯಿತು. ನಾವು ಅಜ್ಞಾನದ ಮುಸುಕನ್ನು ಹಿಂದಕ್ಕೆ ಸರಿಸಿದಾಗ ಹಾಗೂ ಆವಿಷ್ಕಾರವನ್ನು ಸಾದರಪಡಿಸಿದಾಗ ಪಡೆಯುವ ಜೀವಮಾನದ ವೃತ್ತಿಪರ ಗೌರವವನ್ನು ಪಡೆಯುತ್ತಿದ್ದೇವೆʼʼ ಎಂದಿದ್ದರು.
ಇದನ್ನೂ ಓದಿ: ಸತ್ಯ ನಾಡೆಲ್ಲಾ ಬೆಂಬಲ, OpenAI ಸಂಸ್ಥೆಗೆ ಸಿಇಒ ಆಗಿ ಮರಳಿದ ChatGPT ಜನಕ ಸ್ಯಾಮ್ ಆಲ್ಟ್‌ಮ್ಯಾನ್