ನವ ದೆಹಲಿ: ಅಕ್ಟೋಬರ್ 1ರಂದು ದಿಲ್ಲಿಯ ಪ್ರಗತಿ ಮೈದಾನದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ ಆಯೋಜನೆಯಾಗಿದ್ದು, ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5ಜಿ (5G Technology) ಸೇವೆಗೆ ಚಾಲನೆ ನೀಡಲಿದ್ದಾರೆ. 5ಜಿ ಸೇವೆಯನ್ನು ಒದಗಿಸಲು ರಿಲಯನ್ಸ್‌ನ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಕಂಪನಿಗಳು ಸನ್ನದ್ಧವಾಗಿವೆ.
ಕೇಂದ್ರ ಸಂವಹನ ಸಚಿವಾಲಯದ ನ್ಯಾಷನಲ್ ಬ್ರಾಡ್‌ಬ್ಯಾಂಡ್ ಮಿಷನ್ ಈ ಬಗ್ಗೆ ಟ್ವೀಟ್ ಮಾಡಿ, ಮಾಹಿತಿಯನ್ನು ಖಚಿತಪಡಿಸಿದೆ. ಭಾರತದ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಮತ್ತು ಕನೆಕ್ಟಿವಿಟಿ ಮತ್ತೊಂದು ಹಂತಕ್ಕೆ ತಲುಪಿದೆ. ಏಷ್ಯಾದ ಅತಿದೊಡ್ಡ ಟೆಕ್ನಾಲಜಿ ಎಕ್ಸಿಬಿಷೇನ್ ಆಗಿರುವ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ.
ಟೆಲಿಕಾಂ, ಮೀಡಿಯಾ ಮತ್ತು ಟೆಕ್ನಾಲಜಿಗೆ ಸಂಬಂಧಿಸಿದಂತೆ ಇಂಡಿಯಾ ಮೊಬೈಲ್ ಕಾಂಗ್ರೆಸ್(ಐಎಂಸಿ) ಪ್ರದರ್ಶನವು ಏಷ್ಯಾದ ಅತಿದೊಡ್ಡ ವೇದಿಕೆಯಾಗಿದೆ. ಈ ಪ್ರದರ್ಶನವನ್ನು ಟೆಲಿಕಾಂ ಸಚಿವಾಲಯ ಮತ್ತ ಸೆಲ್ಯೂಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜಂಟಿಯಾಗಿ ಆಯೋಜಿಸುತ್ತವೆ. ಐಎಂಸಿಯು ಅಕ್ಟೋಬರ್ 1ರಿಂದ 4ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿದೆ.
ಕೆಲವು ದಿನಗಳ ಹಿಂದೆಯಷ್ಟೇ ಟೆಲಿಕಾಂ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್ ಅವರು ಅಕ್ಟೋಬರ್ ತಿಂಗಳಲ್ಲಿ ಭಾರತವು 5ಜಿ ಸೇವೆಗೆ ಚಾಲನೆ ನೀಡಲಿದೆ ಎಂದು ತಿಳಿಸಿದ್ದರು. 5ಜಿ ಸೇವೆಗೆ ಚಾಲನೆ ಸಿಕ್ಕ ಬಳಿಕ ದೇಶಾದ್ಯಂತ ಈ ಸೇವೆ ಲಭಿಸಲು ಕನಿಷ್ಠ ಎರಡ್ಮೂರು ವರ್ಷಗಳಾದರೂ ಬೇಕಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದರು.
ಸ್ವಾತಂತ್ರ್ಯೋತ್ಸವ ಭಾಷಣೆ ವೇಳೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ವೇಳೆಗೆ ಭಾರತದಲ್ಲಿ 5ಜಿ ಸೇವೆ ಆರಂಭವಾಗಲಿದೆ ಎಂದು ಹೇಳಿದ್ದರು. ಅಷ್ಟು ಮಾತ್ರವಲ್ಲದೇ ಮೊನ್ನೆಯಷ್ಟೇ, ಮುಂದಿನ ಹತ್ತು ವರ್ಷಗಳಲ್ಲಿ ಭಾರತವು 6ಜಿ ತಂತ್ರಜ್ಞಾನ ಸೌಲಭ್ಯವನ್ನೂ ಹೊಂದಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | Reliance AGM | ಜಿಯೊ 5ಜಿ ಬಿಡುಗಡೆಯಾಗುವ ಮೊದಲ ನಗರಗಳಲ್ಲಿ ಇಲ್ಲ ಬೆಂಗಳೂರು!