ನವ ದೆಹಲಿ: ಚೀನಾ ಮೂಲದ ಶವೊಮಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ರೆಡ್‌ಮಿ 11 ಪ್ರೈಮ್ (Redmi 11 Prime) ಸಿರೀಸ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಪ್ರೈಮ್ ಸಿರೀಸ್‌ನಲ್ಲಿ ರೆಡ್‌ಮಿ ಪ್ರೈಮ್ 5ಜಿ, ರೆಡ್‌ಮಿ 11 ಪ್ರೈಮ್ (4G) ಫೋನುಗಳಿವೆ. ಭಾರತದಲ್ಲಿ ಶೀಘ್ರವೇ 5ಜಿ ಟೆಲಿಕಾಂ ಸೇವೆ ಆರಂಭವಾಗುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು 5ಜಿ ತಂತ್ರಜ್ಞಾನ ಆಧರಿತ ಫೋನುಗಳನ್ನು ಲಾಂಚ್ ಮಾಡುತ್ತಿವೆ. ಈಗಾಗಲೇ ಹಲವು ಕಂಪನಿಗಳು ಈ ರೀತಿಯ ಫೋನುಗಳನ್ನು ಲಾಂಚ್ ಮಾಡಿದ್ದು, ಈಗ ಆ ಸಾಲಿಗೆ ರೆಡ್‌ಮಿ ಬ್ರ್ಯಾಂಡ್ ಕೂಡ ಸೇರ್ಪಡೆಯಾಗಿದೆ.
ರೆಡ್‌ಮಿ ಪ್ರೈಮ್ 5ಜಿ ಮತ್ತು ರೆಡ್‌ಮಿ 11 ಪ್ರೈಮ್ ಎರಡೂ ಫೋನ್‌ಗಳು 90Hz ಸ್ಕ್ರೀನ್ ರಿಫ್ರೆಶ್ ದರದೊಂದಿಗೆ 6.58 ಇಂಚ್ FHD+ ಡಿಸ್‌ಪ್ಲೇಯನ್ನು ಹೊಂದಿವೆ. ಜತೆಗೆ, AdaptiveSyn ತಂತ್ರಜ್ಞಾನ ಆಧರಿತವಾಗಿದೆ. ಇದರ ಲಾಭ ಏನೆಂದರೆ, ಡಿಸ್‌ಪ್ಲೇ ರಿಫ್ರೆಶ್ ರೇಟ್ ಸ್ವಯಂ ಆಗಿ, 30Hz, 50Hz, 60Hz ಮತ್ತು 90Hz ನಾಲ್ಕು ಹಂತಗಳ ಮಧ್ಯೆ ಬದಲಾಗಲಿದೆ. ಇದು ಸ್ಕ್ರೀನ್‌ನಲ್ಲಿರುವ ಕಂಟೆಂಟ್ ಆಧರಿತವಾಗಿ ಚೇಂಜ್ ಆಗಲಿದೆ. ಸ್ಕ್ರೀನ್ ಪ್ರೋಟೆಕ್ಷನ್‌ಗಾಗಿ ಕಂಪನಿ ಗೊರಿಲ್ಲಾ ಕಾರ್ನಿಂಗ್ ಗ್ಲಾಸ್ ಕೂಡ ಒದಗಿಸಲಾಗುತ್ತದೆ. ಎರಡೂ ಫೋನುಗಳಲ್ಲಿ 5000mAh ಬ್ಯಾಟರಿಗಳಿದ್ದು, 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತವೆ.
ವಿಶೇಷತೆಗಳೇನು?
ರೆಡ್‌ಮಿ 11 ಪ್ರೈಮ್ 5ಜಿ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡಿಮೆನ್ಸಿಟಿ 700 ಚಿಪ್‌ಸೆಟ್ ಹೊಂದಿದ್ದು, 6 ಜಿಬಿ LPDDR4X RAM ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವಿದೆ. ಇಂಟರ್ನಲ್ ಸ್ಟೋರೇಜ್‌ನಿಂದಲೇ ಎರವಲು ಪಡೆದುಕೊಂಡು RAM ಸಾಮರ್ಥ್ಯವನ್ನು ಮತ್ತೆ 2 ಜಿಬಿವರೆಗೂ ವಿಸ್ತರಿಸಬಹುದಾಗಿದೆ. ಆಂಡ್ರಾಯ್ಡ್ 12 ಆಧರಿತ ಎಂಐಯುಐ 13 ಆಪರೇಟಿಂಗ್ ಸಾಫ್ಟ್‌ವೇರ್ ಮೂಲಕ ಈ ಫೋನ್ ರನ್ ಆಗುತ್ತದೆ. ರೆಡ್‌ಮಿ 11 ಪ್ರೈಮ್ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಮೀಡಿಯಾಟೆಕ್ ಹೆಲಿಯೋ ಜಿ99 ಪ್ರೊಸೆರ್ ಅಳವಡಿಸಿದೆ. ಇದು 6GB RAMನೊಂದಿಗೆ ಸಂಯೋಜಿಸಲ್ಪಟ್ಟಿದೆ.
ಕ್ಯಾಮೆರಾ ಹೇಗಿದೆ?
ರೆಡ್‌ಮಿ 11 ಪ್ರೈಮ್ 5ಜಿ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕಂಪನಿಯು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಡುಯಲ್ ಕ್ಯಾಮೆರಾ ಸೆಟ್‌ಅಪ್ ಮಾಡಿದೆ. ರೆಡ್‌ಮಿ 11 ಪ್ರೈಮ್‌ನಲ್ಲಿ ಮೂರು ಕ್ಯಾಮೆರಾಗಳಿವೆ. ಎರಡೂ ಕ್ಯಾಮೆರಾಗಳ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದು, ಸೆಲ್ಫಿ ಮತ್ತು ವಿಡಿಯೋ ಚಾಟ್‌ಗೆ ಬಳಸಿಕೊಳ್ಳಬಹುದು.
ಬೆಲೆ ಎಷ್ಟು?
ರೆಡ್‌ಮಿ 11 ಪ್ರೈಮ್ 5ಜಿ ಸ್ಮಾರ್ಟ್‌ಫೋನ್ 4 ಜಿಬಿ ಪ್ಲಸ್ 64 ಜಿಬಿ ವೆರಿಯೆಂಟ್ ಬೆಲೆ 13,999 ರೂ. ಇದೆ. ಹಾಗೆಯೇ, 6 ಜಿಬಿ ಮತ್ತು 128 ಜಿಬಿ ವೆರಿಯೆಂಟ್ ಬೆಲೆ 15,999 ರೂ. ಇರಲಿದೆ. ಹಾಗೆಯೇ, ರೆಡ್‌ಮಿ 11 ಪ್ರೈಮ್‌ನ 4ಜಿಬಿ ಮತ್ತು 64 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 12,999 ರೂ.ನಿಂದ ಆರಂಭವಾಗುತ್ತದೆ. 6 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಬೆಲೆ 14,999 ರೂಪಾಯಿ ಎಂದು ಹೇಳಲಾಗುತ್ತಿದೆ. ಫೋನ್ ಬೆಲೆಗಳನ್ನು ಗಮನಿಸಿದರೆ, ಈ ಎರಡೂ ಬೆಲೆಗಳನ್ನು ಬಜೆಟ್ ಫೋನ್ ಸೆಗ್ಮೆಂಟ್‌ಗೆ ಧಾರಾಳವಾಗಿ ಸೇರಿಸಬಹುದು.
ಇದನ್ನೂ ಓದಿ | Redmi Note 11SE | ಆಕರ್ಷಕ ಬೆಲೆಯಲ್ಲಿ ಫೋನ್ ಲಾಂಚ್, ಫೀಚರ್ಸ್‌ಗಳೇನು?