Site icon Vistara News

JioBook Launched | ರಿಲಯನ್ಸ್‌ನ ಮೊದಲ ಲ್ಯಾಪ್‌ಟಾಪ್ ‘ಜಿಯೋಬುಕ್’ ಬಿಡುಗಡೆ! ಬೆಲೆ ಎಷ್ಟು?

JioBook Launched

ನವ ದೆಹಲಿ: ರಿಲಯನ್ಸ್ ರೀಟೇಲ್ ತನ್ನ ಮೊದಲ ಲ್ಯಾಪ್‌ಟ್ಯಾಪ್ ಜಿಯೋಬುಕ್(JioBook Launched) ಬಿಡುಗಡೆ ಮಾಡಿದೆ. ಕಳೆದ ತಿಂಗಳು ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿಈ ಬಗ್ಗೆ ಕಂಪನಿ ಘೋಷಣೆ ಮಾಡಿತ್ತು. ಇದೊಂದು ಬಜೆಟ್ ಲ್ಯಾಪ್‌ಟಾಪ್ ಆಗಿದ್ದು, 11.6 ಇಂಚ್ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 665 ಪ್ರೊಸೆಸರ್, 5000mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಬಜೆಟ್ ಲ್ಯಾಪ್‍ಟಾಪ್ ಅನ್ನು ರಿಲಯನ್ಸ್ ಕಂಪನಿಯು ಕ್ವಾಲಕಾಮ್ ಮತ್ತು ಮೈಕ್ರೋಸಾಫ್ಟ್ ಜತೆಗೂಡಿ ಉತ್ಪಾದನೆ ಮಾಡಿದೆ.

ರಿಲಯನ್ಸ್ ಡಿಜಿಟಲ್ ಜಾಲತಾಣ ಮೂಲಕ ಮಾರಾಟಕ್ಕೆ ಈ ಲ್ಯಾಪ್‌ಟಾಪ್ ಸಿಗಲಿದೆ. 15,799 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರಿಲಯನ್ಸ್ ಡಿಜಿಟಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜಿಯೋಬುಕ್ ಮಾರಾಟ ಮಾಡಲಾಗುತ್ತಿದೆ. ಜತೆಗೆ, ಈ ಲ್ಯಾಪ್‌ಟಾಪ್ ಖರೀದಿಸುವ ಗ್ರಾಹಕರು ಆಕ್ಸಿಸ್, ಕೋಟಕ್, ಐಸಿಐಸಿಐ, ಎಚ್‌ಡಿಎಫ್‌ಸಿ ಸೇರಿದಂತೆ ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸಿದರೆ ಶೇ.10ರಷ್ಟು ರಿಯಾಯ್ತಿ ಕೂಡ ದೊರೆಯಲಿದೆ.

11.6 ಇಂಚ್ ಡಿಸ್‌ಪ್ಲೇಯನ್ನು ಹೊಂದಿರುವ ಜಿಯೋಬುಕ್, 1366×768 ಪಿಕ್ಸೆಲ್ ರೆಸಲೂಷನ್‌ಗೆ ಸಪೋರ್ಟ್ ಮಾಡುತ್ತದೆ. ಕ್ವಾಲಕಾಮ್ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್ ಇದ್ದು ಅಡ್ರೆನೋ 610 ಸಿಪಿಯುನೊಂದಿಗೆ ಸಂಯೋಜಿತಗೊಂಡಿದೆ. 2 ಜಿಬಿ RAM ಮತ್ತು 32 ಜಿಬಿ eMMC ಸ್ಟೋರೇಜ್ ದೊರೆಯಲಿದೆ. ಬಳಕೆದಾರರು ಈ ಸ್ಟೋರೇಜ್ ಅನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಲ್ಯಾಪ್‌ಟಾಪ್‌ನಲ್ಲಿ 5,000mAh ಇದೆ. ಸಿಂಗಲ್ ಚಾರ್ಜ್‌ಗೆ ಈ ಬ್ಯಾಟರಿ 8 ತಾಸುಗಳವರೆಗೂ ಬಾಳಿಕೆ ಬರುತ್ತದೆ. ಕೂಲಿಂಗ್ ಸಿಸ್ಟಮ್ ಕೂಡ ಇದೆ.

ಈಗಾಗಲೇ ಹೇಳಿದಂತೆ ರಿಲಯನ್ಸ್ ಕಂಪನಿಯು ಮೈಕ್ರೋಸಾಫ್ಟ್ ಮತ್ತು ಕ್ವಾಲಕಾಮ್ ಕಂಪನಿಗಳ ಜಂಟಿ ಸಹಭಾಗಿತ್ವದೊಂದಿಗೆ ಈ ಲ್ಯಾಪ್‌ಟಾಪ್ ಉತ್ಪಾದಿಸುತ್ತಿದೆ. ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಾಫ್ಟ್‌ವೇರ್ ಒದಗಿಸಿದರೆ, ಕಂಪ್ಯೂಟಿಂಗ್ ಚಿಪ್ ಅನ್ನು ಕ್ವಾಲಕಾಮ್ ಒದಗಿಸಿದೆ. ಜಿಯೋಸ್ಟೋರ್ ಪ್ರಿಲೋಡೆಡ್‌ನೊಂದಿಗೆ ಈ ಲ್ಯಾಪ್‌ಟಾಪ್ ಬರುತ್ತದೆ.

ಇದನ್ನೂ ಓದಿ | JioFiber Offer | ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್!

Exit mobile version