Site icon Vistara News

ಸತ್ಯ ನಾಡೆಲ್ಲಾ ಬೆಂಬಲ, OpenAI ಸಂಸ್ಥೆಗೆ ಸಿಇಒ ಆಗಿ ಮರಳಿದ ChatGPT ಜನಕ ಸ್ಯಾಮ್ ಆಲ್ಟ್‌ಮ್ಯಾನ್

Sam Altman opeAI

ನ್ಯೂಯಾರ್ಕ್‌: ಎಐ ಚಾಟ್‌ಜಿಪಿಟಿಯ (ChatGPT) ಜನಕ, OpenAI ಸಂಸ್ಥೆಯ ಸೃಷ್ಟಿಕರ್ತರಲ್ಲೊಬ್ಬರಾದ ಸ್ಯಾಮ್ ಆಲ್ಟ್‌ಮ್ಯಾನ್ (Sam Altman) ಅವರು ಮೈಕ್ರೋಸಾಫ್ಟ್‌ (Microsoft) ಸಂಸ್ಥೆಯ ಸಿಇಒ ಸತ್ಯ ನಾಡೆಲ್ಲಾ (Satya Nadella) ಬೆಂಬಲದೊಂದಿಗೆ ಸಂಸ್ಥೆಗೆ ಸಿಇಒ ಆಗಿ ಮರಳಿದ್ದಾರೆ. ಕೆಲವೇ ದಿನಗಳ ಹಿಂದೆ ಅವರನ್ನು ಸಂಸ್ಥೆಯಿಂದ ಹೊರಹಾಕಲಾಗಿತ್ತು.

ಕಳೆದ ಕೆಲವು ದಿನಗಳ ಹಿಂದೆ ನಡೆದ ʼಬೋರ್ಡ್‌ರೂಮ್ ದಂಗೆʼ ಕಂಪನಿಯನ್ನು ಅಸ್ತವ್ಯಸ್ತಗೊಳಿಸಿತ್ತು. ಅದನ್ನು ಯಶಸ್ವಿಯಾಗಿ ದಮನಿಸಿರುವ ಸ್ಯಾಮ್ ಆಲ್ಟ್‌ಮ್ಯಾನ್, ಓಪನ್‌ಎಐ ಸಿಇಒ ಆಗಿ ಸಂಸ್ಥೆಗೆ ತಮ್ಮ ಪುನರಾಗಮನಕ್ಕೆ ಸಿದ್ಧರಾಗಿದ್ದಾರೆ. ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಸಂಸ್ಥೆ ಈ ಕುರಿತು ಪ್ರಕಟಣೆ ಹಂಚಿಕೊಂಡಿದೆ.

ಆಲ್ಟ್‌ಮ್ಯಾನ್ ತಮ್ಮ ಕರ್ತವ್ಯ ಪುನರಾರಂಭಿಸಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನೇಮಕಗೊಂಡ ಮಂಡಳಿಯ ನೇತೃತ್ವವನ್ನು ಬ್ರೆಟ್ ಟೇಲರ್ ವಹಿಸಲಿದ್ದಾರೆ. Xನಲ್ಲಿ ಕಂಪನಿಯ ಹೇಳಿಕೆ ವಿವರಿಸಿದಂತೆ, ಮಂಡಳಿಯ ಇತರ ಸದಸ್ಯರಲ್ಲಿ ಲ್ಯಾರಿ ಸಮ್ಮರ್ಸ್ ಮತ್ತು ಆಡಮ್ ಡಿ’ಏಂಜೆಲೊ ಸೇರಿದ್ದಾರೆ.

“ಬ್ರೆಟ್ ಟೇಲರ್ (ಅಧ್ಯಕ್ಷ), ಲ್ಯಾರಿ ಸಮ್ಮರ್ಸ್ ಮತ್ತು ಆಡಮ್ ಡಿ’ಏಂಜೆಲೊ ಅವರಿರುವ ಹೊಸ ಆರಂಭಿಕ ಮಂಡಳಿಯೊಂದಿಗೆ ಸಿಇಒ ಆಗಿ ಓಪನ್ಎಐಗೆ ಮರಳಲು ಸ್ಯಾಮ್ ಆಲ್ಟ್‌ಮನ್‌ ಜೊತೆಗೆ ನಾವು ತಾತ್ವಿಕವಾಗಿ ಒಪ್ಪಂದವನ್ನು ತಲುಪಿದ್ದೇವೆ. ಇನ್ನಷ್ಟು ವಿವರಗಳನ್ನು ನಂತರ ನೀಡುತ್ತೇವೆ” ಎಂದು ಪ್ರಕಟಣೆ ತಿಳಿಸಿದೆ.

ಓಪನ್‌ಎಐ ಸೋಮವಾರ ಟ್ವಿಚ್ ಮಾಜಿ ಮುಖ್ಯಸ್ಥ ಎಮ್ಮೆಟ್ ಶಿಯರ್ ಅವರನ್ನು ಮಧ್ಯಂತರ ಸಿಇಒ ಎಂದು ಹೆಸರಿಸಿತ್ತು. ಆದರೆ ಹೊರಹೋಗಿದ್ದ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ದೈತ್ಯ ಕಂಪನಿ ಮೈಕ್ರೋಸಾಫ್ಟ್ ಬೆಂಬಲಿಸಿತ್ತು. ಓಪನ್‌ಎಐನಲ್ಲಿ ಮೈಕ್ರೋಸಾಫ್ಟ್‌ ಕೋಟ್ಯಂತರ ಡಾಲರ್‌ಗಳ ಹೂಡಿಕೆಯನ್ನು ಹೊಂದಿದೆ. ಹೀಗಾಗಿ ಸತ್ಯ ನಾಡೆಲ್ಲಾ ಬೆಂಬಲಿತ ಸ್ಯಾಮ್‌ ಕೈ ಮೇಲಾಗಿದೆ.

ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಮತ್ತು ಹಣಗಳಿಕೆಯ ವೇಗಕ್ಕೆ ಸಂಬಂಧಿಸಿದ ಅಭಿಪ್ರಾಯಗಳ ಘರ್ಷಣೆಗಳಿಂದಾಗಿ OpenAIನ ಮಂಡಳಿಯಿಂದ ನವೆಂಬರ್ 17ರಂದು ಸ್ಯಾಮ್‌ ಅವರನ್ನು ಹೊರಹಾಕಲಾಗಿತ್ತು. ಸ್ಯಾಮ್ ಆಲ್ಟ್‌ಮ್ಯಾನ್ ತಮ್ಮ ವಾಪಸಾತಿಗಾಗಿ ಕಂಪನಿಯೊಂದಿಗೆ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಸತ್ಯ ನಾಡೆಲ್ಲಾ ಬೆಂಬಲವನ್ನೂ ಪಡೆದುಕೊಂಡಿದ್ದರು. ಪ್ರಸ್ತುತ ಮಂಡಳಿಯ ಸದಸ್ಯರನ್ನು ಕೆಳಗಿಳಿಸಲು ಆಲ್ಟ್‌ಮ್ಯಾನ್‌ ಹಠ ಹಿಡಿದಿದ್ದರು.

“ನಾನು openAI ಅನ್ನು ಪ್ರೀತಿಸುತ್ತೇನೆ. ಕಳೆದ ಕೆಲವು ದಿನಗಳಿಂದ ನಾನು ಮಾಡಿದ ಎಲ್ಲವೂ ಈ ತಂಡ ಮತ್ತು ಅದರ ಉದ್ದೇಶವನ್ನು ಸಂಯೋಜಿಸುವ ಹಾದಿಯಲ್ಲಿದೆ. ನನಗೆ ಮತ್ತು ತಂಡಕ್ಕೆ ಉತ್ತಮ ಮಾರ್ಗ ಎಂಬ ಕಾರಣದಿಂದ ನಾನು ಮೈಕ್ರೋಸಾಫ್ಟ್‌ಗೆ ಸೇರಲು ನಿರ್ಧರಿಸಿದ್ದೆ. ಆದರೆ ಹೊಸ ಬೋರ್ಡ್ ಮತ್ತು ಸತ್ಯ ಅವರ ಬೆಂಬಲದೊಂದಿಗೆ ನಾನು ಓಪನ್‌ಎಐಗೆ ಮರಳುವಿಕೆಯನ್ನು ಎದುರು ನೋಡುತ್ತಿದ್ದೇನೆ. ಮೈಕ್ರೋಸಾಫ್ಟ್‌ನೊಂದಿಗೆ ನಮ್ಮ ಗಟ್ಟಿಯಾದ ಪಾಲುದಾರಿಕೆಯನ್ನು ನಿರ್ಮಿಸಲು ಎದುರು ನೋಡುತ್ತಿದ್ದೇನೆ” ಎಂದು ಸ್ಯಾಮ್‌ ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರೆ.

ಸ್ಯಾಮ್ ಆಲ್ಟ್‌ಮ್ಯಾನ್‌ ಸಂದೇಶವನ್ನು ಸತ್ಯ ನಾಡೆಲ್ಲಾ ರಿಟ್ವೀಟ್‌ ಮಾಡಿದ್ದು, ತಮ್ಮ ಕಾಮೆಂಟ್ ಬರೆದಿದ್ದಾರೆ: “ಓಪನ್‌ಎಐ ಬೋರ್ಡ್‌ನ ಬದಲಾವಣೆಗಳು ನಮಗೆ ಪ್ರೋತ್ಸಾಹದಾಯಕವಾಗಿವೆ. ಹೆಚ್ಚು ಸ್ಥಿರವಾದ, ಉತ್ತಮ ತಿಳಿವಳಿಕೆಯುಳ್ಳ ಮತ್ತು ಪರಿಣಾಮಕಾರಿ ಆಡಳಿತದ ಹಾದಿಯಲ್ಲಿ ಇದು ಮೊದಲ ಅತ್ಯಗತ್ಯ ಹೆಜ್ಜೆ ಎಂದು ನಾವು ನಂಬುತ್ತೇವೆ” ಎಂದಿದ್ದಾರೆ.

“ಸ್ಯಾಮ್, ಗ್ರೆಗ್ ಮತ್ತು ನಾನು ಮಾತನಾಡಿದ್ದೇವೆ. OAI ನಾಯಕತ್ವದ ತಂಡದೊಂದಿಗೆ ಅದು ಅಭಿವೃದ್ಧಿ ಹೊಂದುವುದನ್ನು ಮತ್ತು ಅದರ ಧ್ಯೇಯವನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಮ್ಮೊಂದಿಗೆ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ಮತ್ತು ಮುಂದಿನ ಪೀಳಿಗೆಯ AIಯ ಮೌಲ್ಯವನ್ನು ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ತಲುಪಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.

ಮಂಗಳವಾರದಂದು, 770 ಓಪನ್‌ಎಐ ಉದ್ಯೋಗಿಗಳಲ್ಲಿ ಸುಮಾರು 700 ಮಂದಿ ಸಾಮೂಹಿಕ ನೋಟೀಸ್‌ ಅನ್ನು ಹೊರಡಿಸಿ, ಕಂಪನಿಯಿಂದ ನಿರ್ಗಮಿಸಿದ್ದ ಸ್ಯಾಮ್ ಆಲ್ಟ್‌ಮನ್ ಮತ್ತು ಗ್ರೆಗ್ ಬ್ರಾಕ್‌ಮನ್ ನೇತೃತ್ವದಲ್ಲಿ ಹೊಸದಾಗಿ ಸ್ಥಾಪಿಸಲಾದ ಮೈಕ್ರೋಸಾಫ್ಟ್ ನೇತೃತ್ವದ ಅಂಗಸಂಸ್ಥೆಯನ್ನು ಸೇರುವ ಉದ್ದೇಶವನ್ನು ಸೂಚಿಸಿದ್ದರು. ಇದರಿಂದ ಗಾಬರಿಯಾದ ಓಪನ್‌ಎಐ ಆಡಳಿತ ಮಂಡಳಿ, ಎಲ್ಲರನ್ನೂ ಮಾತುಕತೆಗೆ ಕರೆದಿತ್ತು.

ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ತೆಗೆದುಹಾಕಿದ ಬಳಿಕ ಓಪನ್‌ಎಐನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೀರಾ ಮುರತಿ ಅವರನ್ನು ಮಧ್ಯಂತರ CEO ಆಗಿ ನೇಮಿಸಲಾಗಿತ್ತು. ಆಕೆಯ ನಂತರ ನವೆಂಬರ್ 19ರಂದು ಟ್ವಿಚ್‌ನ ಮಾಜಿ CEO ಎಮ್ಮೆಟ್ ಶಿಯರ್ ಅವರು ಅಧಿಕಾರ ವಹಿಸಿಕೊಂಡಿದ್ದರು. ನವೆಂಬರ್ 20ರಂದು, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಸ್ಯಾಮ್ ಆಲ್ಟ್‌ಮ್ಯಾನ್, ಗ್ರೆಗ್ ಬ್ರಾಕ್‌ಮನ್ ಮತ್ತು ಅವರ ಸಹವರ್ತಿಗಳು ಮೈಕ್ರೋಸಾಫ್ಟ್‌ ಸೇರಲಿದ್ದಾರೆ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: Sam Altman: ಮೈಕ್ರೋಸಾಫ್ಟ್‌ ಸೇರಲಿದ್ದಾರೆ ಓಪನ್‌ಎಐ ನಿರ್ಗಮಿತ ಸಿಇಒ ಸ್ಯಾಮ್‌ ಆಲ್ಟ್‌ಮ್ಯಾನ್‌

Exit mobile version