Site icon Vistara News

Samudrayaan Mission | ಸಮುದ್ರದಲ್ಲಿ 6 ಕಿಲೋಮೀಟರ್‌ ಆಳಕ್ಕೆ ಹೋಗಲಿದೆ ಭಾರತದ ʼಮತ್ಸ್ಯʼ

matsya

ಆಳಸಮುದ್ರದ ನಿಗೂಢಗಳನ್ನು ಅನ್ವೇಷಿಸಲು ʼಮಿಷನ್‌ ಸಮುದ್ರಯಾನʼ ಯೋಜನೆಯನ್ನು ಭಾರತ ಆರಂಭಿಸಿದೆ. ಮಾನವಸಹಿತ ಸಬ್‌ಮರ್ಸಿಬಲ್ ವಾಹನ ʻMATSYA 6000′ ಅನ್ನು ಭಾರತ ಅಭಿವೃದ್ಧಿಪಡಿಸಿದ್ದು, ಇದರಿಂದ 6000 ಮೀಟರ್‌ ಆಳದ ಸಮುದ್ರದಲ್ಲಿ ವಿವಿಧ ಅಧ್ಯಯನಗಳನ್ನು ಕೈಗೊಳ್ಳಲು ತಜ್ಞರ ತಂಡವನ್ನು ಕಳುಹಿಸಬಹುದಾಗಿದೆ.

2021ರ ಅಕ್ಟೋಬರ್‌ನಲ್ಲಿ ಆರಂಭಿಸಿರುವ ʻಸಮುದ್ರಯಾನ’ ಯೋಜನೆಯೊಂದಿಗೆ, ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾದಂತಹ ದೊಡ್ಡ ರಾಷ್ಟ್ರಗಳ ಕ್ಲಬ್‌ಗೆ ಭಾರತ ಸೇರ್ಪಡೆಗೊಂಡಿದೆ.

ಮಿಷನ್‌ನ ಗುರಿ ಏನು?

ಸಮುದ್ರಯಾನ ಮಿಷನ್‌ನ ಗುರಿ ಆಳವಾದ ಸಾಗರ ಪರಿಶೋಧನೆ. ಇದರಲ್ಲಿ ವೈಜ್ಞಾನಿಕ ಸೆನ್ಸರ್‌ಗಳು ಮತ್ತು ಸಾಧನಗಳನ್ನು ಹೊಂದಿದ ಸೂಟ್‌ ಧರಿಸಿದ ಮೂವರು ಮನುಷ್ಯರನ್ನು ಸಾಗರದಲ್ಲಿ 6,000 ಮೀಟರ್ ಆಳದವರೆಗೆ ಇಳಿಸಲು ಸ್ವಯಂಚಾಲಿತ ಸಬ್‌ಮರ್ಸಿಬಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ 12 ಗಂಟೆಗಳ ಕಾರ್ಯಾಚರಣೆ ಹಾಗೂ ತುರ್ತು ಸಂದರ್ಭದಲ್ಲಿ 96 ಗಂಟೆಗಳ ಆಳಸಮುದ್ರ ಉಳಿಯುವಿಕೆ ಸಾಧ್ಯವಾಗಬೇಕು.

ಆಳ ಸಮುದ್ರದಲ್ಲಿ ಕಾರ್ಯಾಚರಿಸುವ ತಂತ್ರಜ್ಞಾನ ಭವಿಷ್ಯಕ್ಕೆ ಅಗತ್ಯವಾಗಿದೆ. ಆಳವಾದ ಸಮುದ್ರದ ಗಣಿಗಾರಿಕೆ, ಆಳ ಸಮುದ್ರದ ಖನಿಜ ಸಂಪನ್ಮೂಲಗಳ ಪರಿಶೋಧನೆ, ಸಮುದ್ರ ಜೀವವೈವಿಧ್ಯತೆಯ ಶೋಧಗಳು ಈ ತಂತ್ರಜ್ಞಾನದಿಂದ ಸಾಧ್ಯವಾಗಲಿವೆ.

ಸಮುದ್ರ ಅನ್ವೇಷಣೆ ಏಕೆ ಮುಖ್ಯ?

ಜಗತ್ತಿನ ಶೇ.70 ಭಾಗ ಆವರಿಸಿರುವ ಸಮುದ್ರ ನಮ್ಮ ಜೀವನದ ಪ್ರಮುಖ ಭಾಗ. ಆಳವಾದ ಸಾಗರದ ಸುಮಾರು 95 ಪ್ರತಿಶತ ಭಾಗ ಅಜ್ಞಾತವಾಗಿ ಉಳಿದಿದೆ. ಭಾರತದ ಮೂರು ಬದಿಗಳು ಸಾಗರದಿಂದ ಸುತ್ತುವರಿದಿದೆ. ರಾಷ್ಟ್ರದ ಸುಮಾರು 30 ಪ್ರತಿಶತ ಜನಸಂಖ್ಯೆಯು ಕರಾವಳಿ ಪ್ರದೇಶಗಗಳಲ್ಲಿ ವಾಸಿಸಿದ್ದು, ಕರಾವಳಿಯು ಇವರ ಆರ್ಥಿಕತೆಯಾಗಿದೆ.

ಭಾರತದಲ್ಲಿ ಒಂಬತ್ತು ಕರಾವಳಿ ರಾಜ್ಯಗಳಿದ್ದು, 1,382 ದ್ವೀಪಗಳಿಗೆ ನೆಲೆಯಾಗಿರುವ 7517 ಕಿಲೋಮೀಟರ್ ಉದ್ದದ ಕರಾವಳಿಯಿದೆ. ಭಾರತ ಸರ್ಕಾರ ʼನೀಲಿ ಆರ್ಥಿಕತೆʼಯನ್ನು ದೇಶದ ಬೆಳವಣಿಗೆಯ ಹತ್ತು ಪ್ರಮುಖ ಆಯಾಮಗಳಲ್ಲಿ ಪ್ರಮುಖವೆಂದು ಗುರುತಿಸಿದೆ.

ಮತ್ಸ್ಯ 6000 ಎಂದರೇನು?

ʼಮತ್ಸ್ಯ 6000′ ಇದು ಮಾನವಸಹಿತ ಕಾರ್ಯಾಚರಿಸುವ ಸಬ್‌ಮರ್ಸಿಬಲ್‌. ಇದರ ಪ್ರಾಥಮಿಕ ವಿನ್ಯಾಸ ಪೂರ್ಣಗೊಂಡಿದೆ. ಇದಕ್ಕೆ ಇಸ್ರೋ, ಐಐಟಿಎಂ ಮತ್ತು ಡಿಆರ್‌ಡಿಒ ಸೇರಿದಂತೆ ವಿವಿಧ ಸಂಸ್ಥೆಗಳು ಕೈಜೋಡಿಸಿವೆ. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಭೂ ವಿಜ್ಞಾನ ಸಚಿವಾಲಯದ (MoES) ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವ ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಇದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೂ ಮೊದಲು ದೂರನಿಯಂತ್ರಿತ ಆಪರೇಟೆಡ್ ವೆಹಿಕಲ್ (ROV), ಸ್ವಯಂಚಾಲಿತ ಕೋರಿಂಗ್ ಸಿಸ್ಟಮ್ (ACS), ಸ್ವಯಂಚಾಲಿತ ನೀರೊಳಗಿನ ವಾಹನ (AUV), ಡೀಪ್ ಸೀ ಮೈನಿಂಗ್ ಸಿಸ್ಟಮ್ (DSM)ನಂತಹ ಇತರ ನೀರೊಳಗಿನ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Coffee News | ಹವಾಮಾನ ವೈಪರಿತ್ಯ ತಾಳಿಕೊಳ್ಳುವ ಕಾಫಿ ತಳಿ ಅಭಿವೃದ್ಧಿಗೆ ಮುಂದಾದ ಕಾಫಿ ಮಂಡಳಿ

ಆಳಸಮುದ್ರದ ಸಂಶೋಧನೆಗೆ ಇದು ಹೇಗೆ ಸಹಾಯ?

ಆಳಸಮುದ್ರದ ಸಬ್‌ಮರ್ಸಿಬಲ್‌ಗಳಿಗೆ ಸಾಮಾನ್ಯ ಸಬ್‌ಮರ್ಸಿಬಲ್‌ ವಾಹನಗಳಿಗಿಂತ ಹೆಚ್ಚಿ ಒತ್ತಡವನ್ನು ತಾಳಿಕೊಳ್ಳುವ ಶಕ್ತಿಯ ಅಗತ್ಯವಿದೆ. ಆಳ ಹೆಚ್ಚಾದಂತೆ ಗುರುತ್ವ ಬಲ, ನೀರಿನ ಒತ್ತಡಗಳು ಹೆಚ್ಚಾಗುವುದಲ್ಲದೆ, ನೀರಿನ ಪ್ರವಾಹದ ಸೆಳೆತವೂ ಇರುತ್ತದೆ. ಇತರ ಅನೂಹ್ಯ ಒತ್ತಡಗಳೂ ಸೃಷ್ಟಿಯಾಗಬಹುದು. ಜತೆಗೆ ಒಳಗಿರುವ ವ್ಯಕ್ತಿಗಳಿಗೆ ಆಕ್ಸಿಜನ್‌ ಪೂರೈಕೆಯೂ ಅಬಾಧಿತವಾಗಿ ಇರಬೇಕಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೊಸ ಯಂತ್ರವನ್ನು ಆವಿಷ್ಕರಿಸಲಾಗಿದೆ.

“ಈ ತಂತ್ರಜ್ಞಾನವು ಭೂವಿಜ್ಞಾನ ಸಚಿವಾಲಯಕ್ಕೆ ಪಾಲಿಮೆಟಾಲಿಕ್ ಮ್ಯಾಂಗನೀಸ್ ನಿಕ್ಷೇಪ, ಗ್ಯಾಸ್ ಹೈಡ್ರೇಟ್‌, ಹೈಡ್ರೇಟ್‌ ಮುಂತಾದ ಸಂಪನ್ಮೂಲಗಳ ಆಳವಾದ ಸಾಗರ ಪರಿಶೋಧನೆ ಕೈಗೊಳ್ಳಲು ಸಹಾಯವಾಗಲಿವೆ. ಥರ್ಮಲ್ ಸಲ್ಫೈಡ್‌ಗಳು, ಕೋಬಾಲ್ಟ್ ಕ್ರಸ್ಟ್‌ಗಳು ಸಮುದ್ರದಲ್ಲಿ 1000- 5500 ಮೀಟರ್‌ಗಳ ಆಳದಲ್ಲಿದ್ದು, ಅಲ್ಲಿಗೆ ತಲುಪಲು ಅನುಕೂಲʼʼ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಮಾನವಸಹಿತ ಸಬ್‌ಮರ್ಸಿಬಲ್‌ಗೆ ಏಕೆ ಆದ್ಯತೆ?

ಸಬ್‌ಮರ್ಸಿಬಲ್‌ಗಳು ಹೆಚ್ಚಿನ ರೆಸಲ್ಯೂಶನ್ ಬಾತಿಮೆಟ್ರಿ, ಜೈವಿಕ ವೈವಿಧ್ಯತೆಯ ಮೌಲ್ಯಮಾಪನ, ಭೂ-ವೈಜ್ಞಾನಿಕ ವೀಕ್ಷಣೆ, ರಕ್ಷಣೆ ಕಾರ್ಯಾಚರಣೆ, ಎಂಜಿನಿಯರಿಂಗ್ ಬೆಂಬಲದಂತಹ ಸಮುದ್ರದ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ. ಮಾನವರಹಿತ ಸಬ್‌ಮರ್ಸಿಬಲ್‌ಗಳು ಸುಧಾರಿತ ತಂತ್ರಜ್ಞಾನ ಹೊಂದಿದ್ದರೂ, ಮಾನವಸಹಿತ ಸಬ್‌ಮರ್ಸಿಬಲ್‌ಗಳಂತೆ ಸಂಶೋಧಕರಿಗೆ ನೇರ ಭೌತಿಕ ಉಪಸ್ಥಿತಿಯ ಅನುಭವವನ್ನು ನೀಡುವುದಿಲ್ಲ.

ಮಿಷನ್‌ನ ಅಂದಾಜು ವೆಚ್ಚ ಎಷ್ಟು?

ಭಾರತ ಸರ್ಕಾರ ಐದು ವರ್ಷಗಳ ಅವಧಿಗೆ ₹ 4,077 ಕೋಟಿಗಳ ಒಟ್ಟು ಬಜೆಟ್‌ನಲ್ಲಿ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ಇದಕ್ಕೆ ಸಂಬಂಧಿಸಿದ ಡೀಪ್ ಓಷನ್ ಮಿಷನ್ (ಡಿಒಎಂ) ಅನ್ನು ಅನುಮೋದಿಸಿದೆ. ಜಾರಿಯ ಉದ್ದೇಶಿತ ಅವಧಿ 2021ರಿಂದ 2026.

ಇದನ್ನೂ ಓದಿ: ಸಮುದ್ರದಲ್ಲಿ ಮುಳುಗಿದ ಹಾಂಕಾಂಗ್‌ನ ತೇಲುವ ಜಂಬೊ ರೆಸ್ಟೊರೆಂಟ್‌

Exit mobile version