ಬೆಂಗಳೂರು: ಜನಪ್ರಿಯ ಆ್ಯಪ್ ವಾಟ್ಸ್ಆ್ಯಪ್ ಮತ್ತೆ ಹೊಸ ಫೀಚರ್ಸ್ ಅಪ್‌ಡೇಟ್ ಮಾಡಲಿದೆ. ಈ ಪೈಕಿ ಅಡ್ಮಿನ್‌ಗೆ ಚಾಟ್ ಮತ್ತು ಮೆಸೆಜ್ ಡಿಲಿಟ್ ಮಾಡುವ ಅಧಿಕಾರ, ಸ್ಟೇಟಸ್‌ಗೆ ಎಮೋಜಿ ರಿಯಾಕ್ಷನ್ಸ್, ಗ್ರೂಪ್ ಚಾಟ್ ಪಾರ್ಟಿಸಿಪೇಂಟ್ಸ್ ಮಿತಿ ಹೆಚ್ಚಳ, ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳ ನಡುವೆ ಚಾಟ್ಸ್ ವರ್ಗಾವಣೆ, ವಾಯ್ಸ್ ಕಾಲ್‌ನಲ್ಲಿ ಮ್ಯಾನುವಲ್ ಆಗಿ ಪಾರ್ಟಿಸಿಪೇಂಟ್ಸ್ ಮ್ಯೂಟ್ ಮಾಡುವುದು ಸೇರಿದಂತೆ ಅನೇಕ ಹೊಸ ಫೀಚರ್ಸ್ ಅಪ್‌ಡೇಟ್ (WhatsApp New Features) ಮಾಡಲಾಗುತ್ತಿದೆ.
ವಾಟ್ಸ್ಆ್ಯಪ್ ಅಡ್ಮಿನ್ ಡಿಲಿಟ್ ಎಂಬ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಫೀಚರ್, ಅಡ್ಮಿನ್‌ಗೆ ಗ್ರೂಪ್‌ನಲ್ಲಿನ ಯಾವುದೇ ಮೆಸೆಜ್ ಅನ್ನು ಡಿಲಿಟ್ ಮಾಡುವ ಅಧಿಕಾರವನ್ನು ನೀಡಲಿದೆ. ಈ ಫೀಚರ್ ಬಳಸಿಕೊಂಡು ಅಡ್ಮಿನ್ ಚಾಟ್ ಗ್ರೂಪ್ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಲು ಸಾಧ್ಯವಾಗಲಿದೆ. ವಾಟ್ಸ್ಆ್ಯಪ್ ಗ್ರೂಪ್‌ಚಾಟ್‌ನಲ್ಲಾಗುವ ಅಪಸವ್ಯಗಳನ್ನು ತಡೆಯಬಹುದಾಗಿದೆ.
ವಾಟ್ಸ್ಆ್ಯಪ್ ಗ್ರೂಪ್‌ನಿಂದ ಈ ಮೊದಲು ಯಾರು ಎಕ್ಸಿಟ್ ಆಗಿದ್ದಾರೆಂಬುದನ್ನು ತಿಳಿಯುವ ಫೀಚರ್ಸ್ ಬಗ್ಗೆ ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. 60 ದಿನಗಳಲ್ಲಿ ಗ್ರೂಪ್‌ನಿಂದ ಯಾರೆಲ್ಲ ಎಕ್ಸಿಟ್ ಆಗಿದ್ದಾರೆ ಅಥವಾ ಕಿತ್ತು ಹಾಕಲಾಗಿದೆ ಎಂಬುದನ್ನು ನೀವು ಈಗ ನೋಡಬಹುದಾಗಿದೆ. ಈ ಮೊದಲು ಈ ಮಾಹಿತಿ ಅಡ್ಮಿನ್‌ಗೆ ಮಾತ್ರವೇ ಗೊತ್ತಾಗುತ್ತಿತ್ತು. ಅದೀಗ ಎಲ್ಲರಿಗೂ ಮುಕ್ತವಾಗಿದೆ.
ವಾಟ್ಸ್ಆ್ಯಪ್ ಕಂಪಾನಿಯನ್ ಮೋಡ್ ಪರಿಚಯಿಸುತ್ತಿದೆ. ಅಭಿವೃದ್ಧಿ ಹಂತದಲ್ಲಿದೆ ಈ ಫೀಚರ್. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ಸ್ ಮತ್ತು ಲ್ಯಾಪ್‌ಟ್ಯಾಪ್ ಅಥವಾ ಪಿಸಿ ಸೇರಿದಂತೆ ಮಲ್ಟಿ ಡಿವೈಸ್‌ಗಳಲ್ಲಿ ವಾಟ್ಸ್ಆ್ಯಪ್ ಅಕೌಂಟ್ ಅಕ್ಸೆಸ್‌ಗೆ ಇದು ಸಹಕರಿಸಲಿದೆ. ಇದರಿಂದಾಗಿ ನೀವು ಪ್ರತಿಯೊಂದು ಸಾಧನದಲ್ಲಿ ಪ್ರತ್ಯೇಕವಾಗಿ ಲಾಗಿನ್ ಆಗುವ ತೊಂದರೆ ತಪ್ಪಲಿದೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ರೀತಿಯಲ್ಲೇ ವಾಟ್ಸ್ಆ್ಯಪ್ ಕೂಡ ಅವತಾರ್ ಫೀಚರ್ ಅನ್ನು ಬಳಕೆದಾರರಿಗೆ ನೀಡಲಿದೆ. ಪೋಸ್ಟ್ ಮತ್ತು ಚಾಟ್ಸ್‌ಗಳ ವೇಳೆ ಬಳಕೆದಾರರು ತಮ್ಮದೇ ಆದ 3ಡಿ ಕಾರ್ಟೂನ್ ಇಮೇಜ್ ಅನ್ನು ಈ ಫೀಚರ್ಸ್ ಬಳಸಿಕೊಂಡು ಕ್ರಿಯೇಟ್ ಮಾಡಿಕೊಳ್ಳಬಹುದು.
ಟೆಕ್ಸ್ಟ್ ಸಂದೇಶಗಳಿಗೆ ಎಮೋಜಿ ರಿಯಾಕ್ಷನ್ ಕಲ್ಪಿಸುವ ರೀತಿಯಲ್ಲೇ ವಾಟ್ಸ್ಆ್ಯಪ್ ಸ್ಟೇಟಸ್‌ಗೂ ರಿಯಾಕ್ಷನ್‌ಗೆ ಅವಕಾಶ ಕಲ್ಪಿಸುವ ಫೀಚರ್ ವಾಟ್ಸ್ಆ್ಯಪ್ ಅಪ್‌ಡೇಟ್ ಮಾಡಲಿದೆ. ಈಗಾಗಲೇ ಈ ಫೀಚರ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಇದೆ. ಮೆಸೆಜ್ ಕಳುಹಿಸುವ ಬದಲಿಗೆ ಬಳಕೆದಾರರ ಲಭ್ಯವಿರುವ ಎಮೋಜಿಗಳನ್ನು ಬಳಸಿಕೊಂಡು ಸ್ಟೇಟಸ್‌ಗೆ ರಿಯಾಕ್ಟ್ ಮಾಡಬಹುದು.
ವಾಟ್ಸ್ಆ್ಯಪ್ ಮತ್ತೊಂದು ವಿಶಿಷ್ಟ ಫೀಚರ್ ಬಗ್ಗೆ ಕೆಲಸ ಮಾಡುತ್ತಿದೆ. ಅದು-ವಾಟ್ಸ್ಆ್ಯಪ್ ಚಾಟ್ ಅಪ್‌ಡೇಟ್. ಅಂದರೆ, ಮುಂಬರುವ ಯಾವುದೇ ಅಪ್‌ಡೇಟ್‌ಗಳ ಬಗ್ಗೆ ಮಾಹಿತಿಯನ್ನು ಮುಂಚಿತವಾಗಿಯೇ ಬಳಕೆದಾರರಿಗೆ ತಿಳಿಸುವುದು ಈ ಫೀಚರ್‌ನ ಉದ್ದೇಶ. ಈಗಾಗಲೇ ಈ ರೀತಿಯ ಫೀಚರ್ ಸ್ನ್ಯಾಪ್‌ಚಾಟ್‌ನಲ್ಲಿದೆ.
ಈಗಾಗಲೇ ಹೈಡ್ ಆನ್‌ಲೈನ್ ಸ್ಟೇಟಸ್ ಫೀಚರ್ಸ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬಳಕೆದಾರರಿಗೆ ಕಿರಿಕಿರಿ ತಪ್ಪಿಸುವಲ್ಲಿ ಈ ಹೈಡ್ ಸ್ಟೇಟಸ್ ಫೀಚರ್ಸ್ ಪರಿಣಾಮಕಾರಿಯಾಗಲಿದೆ. ಇಂಥದೊಂದು ಫೀಚರ್ ನೀಡುವಂತೆ ಬಳಕೆದಾರು ಬಹಳ ದಿನಗಳಿಂದಲೂ ಬೇಡಿಕೆ ಇಟ್ಟಿದ್ದರು. ಅದೀಗ ನೆರವೇರುವ ಸಮಯ ಎದುರಾಗಿದೆ. ಈ ಫೀಚರ್ ಅಪ್‌ಡೇಟ್ ಆದರೆ, ನಿಮ್ಮ ಕಾಂಟಾಕ್ಟ್‌ಗಳಿಗೆ, ನಿಮ್ಮ ಆನ್‌ಲೈನ್ ಸ್ಟೇಟಸ್ ಕಾಣದಂತೆ ಹೈಡ್ ಮಾಡಬಹುದು.