ನಾವು ಬಳಸುವ ಸ್ಮಾರ್ಟ್‌ಫೋನ್‌ಗಳು (Smartphone) ಆಧುನಿಕ ಕಾಲದ ಮೂಲಭೂತ ಅಗತ್ಯಗಳು. ಸ್ಮಾರ್ಟ್‌ಫೋನ್‌ಗಳು ಇಲ್ಲದೇ ನಮ್ಮ ಬದುಕು (Life) ನಿಸಾರ ಎಂಬುದರಲ್ಲಿ ಅರ್ಥವಿಲ್ಲದಿಲ್ಲ. ಬಹುಶಃ ಫೋನ್ ಇಲ್ಲದಿದ್ದರೆ ನಮ್ಮ ಬದುಕು ತೀರಾ ದುಸ್ತರವಾಗಬಹುದು. ಅಷ್ಟರಮಟ್ಟಿಗೆ ನಾವೆಲ್ಲರೂ ಫೋನ್‌ಗಳ ಮೇಲೆ ಅವಲಂಬನೆಯಾಗಿದ್ದೇವೆ. ಈ ಫೋನುಗಳಿಂದ ಲಾಭ ಎಷ್ಟಿದೆಯೋ ಅಷ್ಟೇ ನಷ್ಟವೂ ಇದೆ. ಒಂದೊಮ್ಮೆ ನಾವು ಬಳಸುವ ಫೋನ್‌ಗಳು ವಂಚಕರ ಜಾಲಕ್ಕೆ ಸಿಲುಕಿ ಬಿಟ್ಟರೆ ನಾವು ಸಾಕಷ್ಟು ಅಪಾಯವನ್ನು ಎದುರಿಸಬೇಕಾಗುತ್ತದೆ. ನಮ್ಮೆಲ್ಲ ಮಾಹಿತಿಯನ್ನು ಅವರು ಕದ್ದು ನೋಡಬಹುದು; ಅದನ್ನು ದುರುಪಯೋಗಪಡಿಸಿಕೊಳ್ಳಬಹುದು; ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ನಮ್ಮ ಫೋನ್‌ನಲ್ಲಿ ವಂಚಕ ತನ್ನ ಕರಾಮತ್ತು ತೋರಿಸಬಹುದು. ಹಾಗಾಗಿ ನಾವು ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಆದರೆ, ನಮ್ಮ ಫೋನ್ ಹ್ಯಾಕ್ (Phone Hack) ಆಗಿದೆ ಎಂದು ಹೇಗೆ ತಿಳಿದುಕೊಳ್ಳುವುದು ಎಂಬ ಪ್ರಶ್ನೆ ಸಹಜ. ಇದಕ್ಕೆ ಉತ್ತರವು ಸಿಂಪಲ್ ಆಗಿದೆ. ನಿಮ್ಮ ಫೋನ್‌ನಲ್ಲಾಗುವ ಚಟುವಟಿಕೆಗಳು, ವಿಚಿತ್ರ ಸಂಗತಿಗಳ ಗಮನಕ್ಕೆ ಬಂದರೆ ಖಂಡಿತವಾಗಿಯೂ ಅಂಥ ಫೋನ್ ಇನ್ನೊಬ್ಬರ ಅಣತಿಯಂತೆ ನಡೆಯುತ್ತಿರಬಹುದು. ನಮ್ಮ ಫೋನ್ ಹ್ಯಾಕ್ ಆಗಿದೆಯೇ (smartphone hacked signs) ಎಂಬುದನ್ನು ತಿಳಿದಲುಕೊಳ್ಳಲು ಇಲ್ಲಿ ಟಿಪ್ಸ್ ಕೊಟ್ಟಿದ್ದೇವೆ. ಓದಿ.
ಅಪ್ರಸ್ತುತ ಪಾಪ್ ಅಪ್ಸ್
ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಪ್ರಸ್ತುತ ಪಾಪ್ ಅಪ್ಸ್ ಅಥವಾ ಎಕ್ಸ್-ರೇಟೆಡ್ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿದ್ದರೆ ಹ್ಯಾಕ್ ಆಗಿರುವ ಸಾಧ್ಯತೆಗಳಿರುತ್ತವೆ. ನಿಮ್ಮ ಫೋನ್ ಮಾಹಿತಿಯೊಂದಿಗೆ ಬೇರೆಯವರು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆಂದು ತಿಳಿದುಕೊಳ್ಳಬೇಕು.
ನಿಮ್ಮ ಫೋನ್‌ನಿಂದ ಸಂದೇಶ, ಕರೆ ಹೋಗುತ್ತಿದ್ದರೆ….
ಒಂದೊಮ್ಮೆ ನಿಮಗೆ ಅರಿವು ಇಲ್ಲದಂತೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಅಪರಿಚಿತ ನಂಬರ್‌ಗೆ ಸಂದೇಶಗಳು ಅಥವಾ ಕರೆಗಳು ಹೋಗುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯಂತಾನೇ ಅರ್ಥ. ಈ ಬಗ್ಗೆ ಗಮನಹರಿಸಬಹುದು.
ಹೆಚ್ಚಿನ ಡೇಟಾ ಬಳಕೆ
ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಹೆಚ್ಚಿಸದೆಯೇ ನಿಮ್ಮ ಡೇಟಾ ಬಿಲ್ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ, ನಿಮ್ಮ ಫೋನ್ ಹ್ಯಾಕ್ ಆಗಿರುವ ಸಾಧ್ಯತೆಯಿದೆ. ಅಂದರೆ, ವಂಚಕರು ಬ್ಯಾಕ್ ಗ್ರೌಂಡ್‌ನಲ್ಲಿ ಅಪ್ಲಿಕೇಷನ್‌ಗಳನ್ನು ರನ್ ಮಾಡಲು ನಿಮ್ಮ ಡೇಟಾ ಬಳಸುತ್ತಿರುತ್ತಾರೆ ಎಂದರ್ಥ.
ಬ್ಯಾಟರಿ ಖಾಲಿಯಾಗುತ್ತಿದೆಯಾ?
ಫೋನ್ ಬಳಕೆಯಾದಂತೆ ಬ್ಯಾಟರಿ ಖಾಲಿಯಾಗುವುದು ಸಾಮಾನ್ಯ. ಆದರೆ, ಯಾವುದೇ ಚಟುವಟಿಕೆ ಇಲ್ಲದೆಯೂ ಬ್ಯಾಟರಿ ವಿಪರೀತ ಖಾಲಿಯಾಗುತ್ತಿದ್ದರೆ ಏನೋ ವ್ಯತ್ಯಾಸವಾಗಿದೆ ಎಂದರ್ಥ. ಅಂಥ ಫೋನ್ ಕೂಡ ವಂಚಕರ ಕೈಸೆರೆಯಾಗಿರುವ ಸಾಧ್ಯತೆಗಳಿರುತ್ತವೆ.
ಕಳಪೆ ಪ್ರದರ್ಶನ
ನಿಮ್ಮ ಫೋನ್ ಏನಾದರೂ ಪದೇ ಪದೇ ಆ್ಯಪ್ಸ್ ಕ್ರ್ಯಾಶ್ ಆಗುತ್ತಿದ್ದರೆ, ಸ್ಕ್ರೀನ್ ಏನಾದರೂ ಫ್ರೀಜ್ ಆಗುತ್ತಿದ್ದರೆ ಅಥವಾ ಅನಿರೀಕ್ಷಿತವಾಗಿ ರಿಸ್ಟಾರ್ಟ್ ಆಗುತ್ತಿದ್ದರೆ ಅಂಥ ಫೋನ್ ಕೂಡ ಹ್ಯಾಕ್ ಆಗಿರುವ ಸಾಧ್ಯತೆಗಳಿರುತ್ತವೆ.
ಅಪರಿಚಿತ ಆ್ಯಪ್‌ಗಳು
ಒಂದು ವೇಳೆ ನಿಮ್ಮ ಫೋನ್‌ನಲ್ಲಿ ಅಪರಿಚಿತ ಆ್ಯಪ್‌ಗಳು ಡೌನ್‌ಲೋಡ್ ಆಗಿದ್ದ ಕಂಡರೆ, ಅಂಥ ಫೋನ್ ಕೂಡ ಹ್ಯಾಕ್ ಆಗಿರುವ ಸಾಧ್ಯತೆಗಳಿರುತ್ತವೆ. ಹ್ಯಾಕರ್‌ಗಳೇ ನಿಮ್ಮ ಫೋನ್‌ನಲ್ಲಿ ಅನುಮಾನಾಸ್ಪದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿರಬಹುದು.
ಅಸಾಮಾನ್ಯ ಚಟುವಟಿಕೆ
ನಿಮ್ಮ ಫೋನ್‌ಗೆ ಸಂಪರ್ಕಗೊಂಡಿರುವ ನಿಮ್ಮ ಸಾಮಾಜಿಕ ಮಾಧ್ಯಮ ಅಥವಾ ಇಮೇಲ್‌ಗಳ ಖಾತೆಯಲ್ಲಿ ಗುರುತಿಸಲಾಗದ ಚಟುವಟಿಕೆಗಳು ಕಂಡು ಬಂದಲ್ಲಿ, ಹ್ಯಾಕರ್ ಫೋನ್ ಹ್ಯಾಕ್ ಮಾಡಿರುವ ಸಾಧ್ಯತೆ ಹೆಚ್ಚು. ಆ ಮೂಲಕ ನಿಮ್ಮ ಖಾಸಗಿ ಮಾಹಿತಿಯನ್ನು ಕಳ್ಳತನ ಮಾಡುವ ಸಾಧ್ಯತೆಗಳಿರುತ್ತವೆ.
ಈ ಸುದ್ದಿಯನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ?
ಕರೆ, ಸಂದೇಶ ಸ್ಥಗಿತ
ಅನಿರೀಕ್ಷಿತವಾಗಿ ನೀವು ಯಾವುದೇ ಕರೆ ಅಥವಾ ಸಂದೇಶಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದಾದರೂ ಫೋನ್ ಹ್ಯಾಕ್ ಆಗಿರುವ ಸಾಧ್ಯತೆಗಳಿರುತ್ತವೆ. ಹ್ಯಾಕರ್ ನಿಮ್ಮ ಸರ್ವೀಸ್ ಪ್ರೈವೇಡರ್‌ಗಳಿಂದ ಸಿಮ್ ಕ್ಲೋನ್ ಮಾಡಿಕೊಂಡಿರಬಹುದು.