ಸ್ಯಾನ್‌ಫ್ರಾನ್ಸಿಸ್ಕೋ: ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ ಚಾಟ್‌ಜಿಪಿಟಿ(ChatGPT) ಟೆಕ್ ವರ್ಲ್ಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೈಕ್ರೋಸಾಫ್ಟ್‌ನ (Microsoft) ಈ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ಗೆ ಠಕ್ಕರ್ ಕೊಡಲು ಗೂಗಲ್ ಕೂಡ ಸಿದ್ಧವಾಗುತ್ತಿದೆ. ಚಾಟ್‌ಜಿಪಿಟಿಗೆ ಪ್ರತಿಯಾಗಿ ಗೂಗಲ್ ಬಾರ್ಡ್(Google Bard AI) ಅನಾವರಣ ಮಾಡಿದೆ.
ಈ ಬಗ್ಗೆ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರು, ಕಂಪನಿಯು ಕೃತಕ ಬುದ್ಧಿಮತ್ತೆಯಾದ ಬಾರ್ಡ್ ಅನ್ನು ಪರೀಕ್ಷಾ ಬಳಕೆದಾರರಿಗೆ ಓಪನ್ ಮಾಡಿದ್ದು, ಅವರಿಂದ ಫೀಡ್ ಬ್ಯಾಕ್ ಪಡೆಯಲಾಗುತ್ತಿದೆ. ಮುಂದಿನ ಕೆಲವು ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಈ ಎಐ ಆಧರಿತ ಚಾಟ್‌ಬಾಟ್ ಸೇವೆ ದೊರೆಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ChatGPT: ಏನಿದು ಚಾಟ್‌ಬಾಟ್? ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತಾ?
ಗೂಗಲ್ ಸರ್ಚ್ ಎಂಜಿನ್‌ಗೆ ಎಐ
ಜನಪ್ರಿಯ ಗೂಗಲ್ ಸರ್ಚ್ ಎಂಜಿನ್‌ಗೆ ಎಐ ಸೇರ್ಪಡೆ ಮಾಡುವ ಪ್ಲ್ಯಾನ್ ಕೂಡ ಇದೆ ಎಂದು ಸುಂದರ್ ಪಿಚ್ಚೈ ಅವರು ಹೇಳಿಕೊಂಡಿದ್ದಾರೆ. ಸರ್ಚ್ ಎಂಜಿನ್‌ಗೆ ಎಐ ಸೇರಿಸುವುದರಿಂದ ನಿರ್ದಿಷ್ಟ ಉತ್ತರಗಳನ್ನು ಪಡೆಯಲು ಸಾಧ್ಯವಾಗಲಿದೆ. ಈಗಾದರೇ, ವೆಬ್‌ನಲ್ಲಿರುವ ಎಲ್ಲ ಮಾಹಿತಿಯನ್ನು ಅದು ಹೇಳುತ್ತದೆ ಎಂದು ಹೇಳಿದ್ದಾರೆ.