Site icon Vistara News

Sunita Williams: ಸುನೀತಾ ವಿಲಿಯಮ್ಸ್‌ ಮೂರನೇ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ; ಹೊಸ ದಿನಾಂಕ ಶೀಘ್ರ ಘೋಷಣೆ

Sunita Williams

Sunita Williams

ವಾಷಿಂಗ್ಟನ್‌: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರನ್ನೊಳಗೊಂಡ ಬಾಹ್ಯಾಕಾಶ ನೌಕೆ (Spacecraft)ಯ ಉಡಾವಣೆಯನ್ನು ಮಂಗಳವಾರ (ಮೇ 7) ನಾಸಾ (NASA) ರದ್ದುಗೊಳಿಸಿದೆ. ʼʼಬಾಹ್ಯಾಕಾಶ ನೌಕೆಯಲ್ಲಿ ವಾಲ್ವ್ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿದೆ. ಶೀಘ್ರದಲ್ಲಿಯೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಕಾರ್ಯಾಚರಣೆಯಲ್ಲಿ ಗಗನಯಾನ ಕೈಗೊಳ್ಳಲು ಸಿದ್ಧತೆ ನಡೆಸಿದ್ದರು. ಆದರೆ ಉದ್ದೇಶಿತ ಉಡಾವಣೆಯ ಎರಡು ಗಂಟೆಗಳ ಮೊದಲು ರದ್ದು ಪಡಿಸಲಾಯಿತು.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಾಸಾ ಮಾಹಿತಿ ನೀಡಿದೆ. “ಅಟ್ಲಾಸ್ ವಿಯಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಇಂದಿನ ಸ್ಟಾರ್‌ಲೈನರ್ ಉಡಾವಣೆಯನ್ನು ರದ್ದುಪಡಿಸಲಾಗಿದೆ. ನಮ್ಮ ಗಗನಯಾತ್ರಿಗಳು ಸ್ಟಾರ್‌ಲೈನರ್‌ನಿಂದ ನಿರ್ಗಮಿಸಿದ್ದಾರೆʼʼ ಎಂದು ಬರೆದುಕೊಂಡಿದೆ. ವಿಶೇಷ ಎಂದರೆ ಈ ಮೂಲಕ ಸುನೀತಾ ವಿಲಿಯಮ್ಸ್‌ ಮೂರನೇ ಬಾರಿ ಗಗನಯಾತ್ರೆ ಕೈಗೊಳ್ಳಲು ಸಜ್ಜಾಗಿದ್ದರು. ಇಬ್ಬರು ಗಗನಯಾತ್ರಿಗಳೊಂದಿಗೆ ಬೋಯಿಂಗ್ ಸ್ಟಾರ್‌ಲೈನರ್ ಅನ್ನು ಮೇ 10ರಂದು ಉಡಾವಣೆ ಮಾಡಲು ಪ್ರಯತ್ನಿಸಲಾಗುವುದು ಎಂದು ನಾಸಾ ತಿಳಿಸಿದೆ.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

ʼʼಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭ ಸಂಕೇತʼʼ ಎಂದು ಅವರು ಈ ಹಿಂದೆ ಹೇಳಿದ್ದರು. ʼʼಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶ ನನ್ನ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆʼʼ ಎಂದು ಸುನೀತಾ ವಿಲಿಯಮ್ಸ್ ತಿಳಿಸಿದ್ದರು. ಈ ಹಿಂದೆ ಅವರು ಬಾಹ್ಯಾಕಾಶಕ್ಕೆ ಭಗವದ್ಗೀತೆ ಒಯ್ಯುವ ಮೂಲಕ ಭಾರತೀಯರ ಗಮನ ಸೆಳೆದಿದ್ದರು.

Exit mobile version