Site icon Vistara News

iPhone: ಭಾರತದಲ್ಲಿ ಟಾಟಾದಿಂದ ಐಫೋನ್ ಉತ್ಪಾದನೆ! ಸುದ್ದಿ ಖಚಿತಪಡಿಸಿದ ಕೇಂದ್ರ

Tata to make iphones in India Says Central Government

ನವದೆಹಲಿ: ದೇಶದ ಪ್ರಮುಖ ಕಂಪನಿಯಾದ ಟಾಟಾ (TATA Group) ಇನ್ನು ಮುಂದೆ ಐಫೋನ್ ಫೋನ್‌ಗಳನ್ನು(iPhone) ಉತ್ಪಾದನೆ ಮಾಡಲಿದೆ. ಈ ಮಾಹಿತಿಯನ್ನು ಕೇಂದ್ರ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrashekhar) ಅವರು ಖಚಿತಪಡಿಸಿದ್ದಾರೆ. ದೇಶಿ (Domestic Market) ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ (International Market) ಐಫೋನ್‌ಗಳನ್ನು ಆ್ಯಪಲ್ ಕಂಪನಿಗಾಗಿ ಟಾಟಾ ಉತ್ಪಾದಿಸಲಿದೆ.

ಈ ಹಿಂದೆ ಆ್ಯಪಲ್ ಕಂಪನಿಯು ಚೀನಾದಲ್ಲಿ ಐಫೋನ್‌ಗಳನ್ನು ಉತ್ಪಾದಿಸಿ ಜಾಗತಿಕ ಮಾರುಕಟ್ಟೆಗೆ ಸರಬರಾಜು ಮಾಡುತ್ತಿತ್ತು. ಇದೀಗ ಉತ್ಪದನಾ ಶಕ್ತಿ ಕೇಂದ್ರವು ಭಾರತಕ್ಕೆ ಬದಲಾಗಿದ್ದು, ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಆ್ಯಪಲ್‌ನಂಥ ದೈತ್ಯ ಕಂಪನಿಗಳು ಭಾರತದಲ್ಲೇ ಐಫೋನ್‌ಗಳನ್ನು ಉತ್ಪಾದಿಸುವ ಮೂಲಕ ಭಾರತದ ಮಾರುಕಟ್ಟೆಯನ್ನು ವಿಸ್ತರಿಸಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಭಾರತದಲ್ಲಿ ಟಾಟಾ ಕಂಪನಿ ಐಫೋನ್‌ಗಳನ್ನು ಉತ್ಪಾದಿಸುವ ಕುರಿತು ಅಧಿಕೃತ ಮಾಹಿತಿಯನ್ನು ಸಚಿವ ಚಂದ್ರಶೇಖರ್ ಅವರು ಎಕ್ಸ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಜಾಗತಿಕ ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿಗಳ ಬೆಳವಣಿಗೆಗೆ ಸಂಪೂರ್ಣ ಬೆಂಬಲವಾಗಿ ನಿಂತಿದೆ. ಅದು ಭಾರತವನ್ನು ತಮ್ಮ ವಿಶ್ವಾಸಾರ್ಹ ಉತ್ಪಾದನೆ ಮತ್ತು ಪ್ರತಿಭಾನ್ವಿತ ಪಾಲುದಾರನನ್ನಾಗಿ ಮಾಡಲು ಮತ್ತು ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಶಕ್ತಿಯನ್ನಾಗಿ ಮಾಡುವ ಪ್ರಧಾನ ಮಂತ್ರಿಯ ಗುರಿಯನ್ನು ಸಾಧಿಸಲು ಬಯಸುವ ಜಾಗತಿಕ ಎಲೆಕ್ಟ್ರಾನಿಕ್ ಬ್ರ್ಯಾಂಡ್‌ಗಳನ್ನು ಬೆಂಬಲಿಸುತ್ತದೆ ಎಂದು ಚಂದ್ರಶೇಖರ್ ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Tata Technologies IPO: ಷೇರುಪೇಟೆಗೆ ಪ್ರವೇಶಿಸಲಿದೆ ಮತ್ತೊಂದು ಟಾಟಾ ಕಂಪನಿ, ಟಾಟಾ ಟೆಕ್ನಾಲಜೀಸ್‌ ಐಪಿಒ ಶೀಘ್ರ

ಆ್ಯಪಲ್‌ಗೆ ಪೂರೈಕೆದಾರರ ಕಂಪನಿಯಾಗಿರುವ ವಿಸ್ಟ್ರಾನ್ ಕಂಪನಿಯನ್ನು ಟಾಟಾ ಕಂಪನಿ ಸ್ವಾಧೀನ ಪಡಿಸಿಕೊಂಡಿದೆ. ಈ ಮಾಹಿತಿಯನ್ನು ಶುಕ್ರವಾರ ನಡೆದ ವಿಸ್ಟ್ರಾನ್ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಘೋಷಿಸಲಾಗಿದೆ. ಇದೇ ವೇಳೆ, ವಿಸ್ಟ್ರಾನ್ ಕಂಪನಿಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಧನ್ಯವಾದ ತಿಳಿಸಿದ್ದಾರೆ. ಭಾರತದಿಂದ ಭಾರತದ ಕಂಪನಿಗಳೊಂದಿಗೆ ಜಾಗತಿಕ ಪೂರೈಕೆ ಜಾಲವನ್ನು ನಿರ್ಮಿಸುತ್ತಿರುವ ವಿಸ್ಟ್ರಾನ್‌ಗೆ ಧನ್ಯವಾದ ಎಂದು ಅವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸು ಹಣಕಾಸು ಉತ್ತೇಜನಗಳನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ, ಅಮೆರಿಕ-ಚೀನಾ ನಡುವೆ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಆ್ಯಪಲ್ ಕಂಪನಿಯು, ತನ್ನ ಫೋನುಗಳ ಉತ್ಪಾದನೆಗಾಗಿ ಚೀನಾದಾಚೆ ಅವಕಾಶಕ್ಕೆ ಶೋಧ ನಡೆಸಿದಾಗ, ಭಾರತವು ಪ್ರಶಸ್ತ ಸ್ಥಳವಾಗಿ ಮಾರ್ಪಟ್ಟಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ ಉತ್ಪಾದನೆಗೆ ಭಾರತವು ಜಾಗತಿಕ ಕಂಪನಿಗಳ ನೆಚ್ಚನ ತಾಣವಾಗಿ ಬದಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version