Site icon Vistara News

Robot Attack: ರೋಬೋಟ್‌ ದಾಳಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಗಾಯ!

creepy-robots3

ಹೊಸದಿಲ್ಲಿ: ರೋಬೋಟ್‌ಗಳಿಂದ ಮನುಕುಲಕ್ಕೆ ಭವಿಷ್ಯದಲ್ಲಿ ಅಪಾಯವಿದೆ (robot threat) ಎಂಬ ವಾದ ಬಲವಾಗಿ ಕೇಳಿಬರುತ್ತಿರುವ ಹೊತ್ತಿನಲ್ಲೇ ಈ ಸುದ್ದಿ ಬಂದಿದೆ. ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಟೆಸ್ಲಾದ (Tesla) ಗಿಗಾ ಟೆಕ್ಸಾಸ್ ಕಾರ್ಖಾನೆಯಲ್ಲಿ ರೋಬೋಟ್‌ ಒಂದರ ದಾಳಿಗೆ (Tesla Robot Attack) ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬಾತ ಗಂಭೀರವಾಗಿ ಗಾಯಗೊಂಡಿದ್ದುದು ತಡವಾಗಿ ಬೆಳಕಿಗೆ ಬಂದಿದೆ.

ಅಲ್ಯೂಮಿನಿಯಂ ಕಾರಿನ ಬಿಡಿಭಾಗಗಳನ್ನು ಸರಿಸಲು ವಿನ್ಯಾಸಗೊಳಿಸಿದ ಈ ರೋಬೋಟ್‌ನ ಅಸಮರ್ಪಕ ಕಾರ್ಯವೈಖರಿಯಿಂದಾಗಿ, ಅದನ್ನು ಕಳಚಲು ಮುಂದಾದ ಎಂಜಿನಿಯರ್‌ ಬೆನ್ನಿಗೆ ರೋಬೋಟ್ ತನ್ನ ಪಿನ್‌ಗಳನ್ನು ಆಳವಾಗಿ ಚುಚ್ಚಿ ಗಾಯಗೊಳಿಸಿತು. ಇಂಜಿನಿಯರ್‌ನ ಬೆನ್ನು ಮತ್ತು ತೋಳಿನ ಮೇಲೆ ಗಾಯಗಳು ಉಂಟಾದವು. ಕಾರ್ಖಾನೆಯ ಫ್ಲೋರ್‌ನ ಮೇಲೆ ರಕ್ತ ಚೆಲ್ಲಿತು ಎಂದು ತಿಳಿದುಬಂದಿದೆ. ಈ ಘಟನೆ ಎರಡು ವರ್ಷಗಳ ಹಿಂದೆಯೇ ನಡೆದಿದೆಯಂತೆ. 2021ರಲ್ಲಿ ನಡೆದ ಈ ಘಟನೆ ಈಗ ಬಹಿರಂಗವಾಗಿದೆ.

ವರದಿಯ ಪ್ರಕಾರ, ಇಂಜಿನಿಯರ್ ಹೊಸದಾಗಿ ಎರಕ ಹೊಯ್ದ ಅಲ್ಯೂಮಿನಿಯಂನಿಂದ ಕಾರಿನ ಭಾಗಗಳನ್ನು ಕತ್ತರಿಸುವ ಕಾರ್ಯವನ್ನು ರೋಬೋಟ್‌ಗಳಿಗಾಗಿ ಪ್ರೋಗ್ರಾಮಿಂಗ್ ಮಾಡುತ್ತಿದ್ದರು. ನಿರ್ವಹಣೆಗಾಗಿ ಎರಡು ರೋಬೋಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದರೆ, ಮೂರನೆಯದು ಅಜಾಗರೂಕತೆಯಿಂದ ಸಕ್ರಿಯವಾಗಿ ಉಳಿದಿತ್ತು. ಇದು ದಾಳಿಗೆ ಕಾರಣವಾಯಿತು. ಗಾಯಗೊಂಡ ಇಂಜಿನಿಯರ್ ಎಡಗೈಯಲ್ಲಿ ತೆರೆದ ಗಾಯವಾಯಿತು ಎಂದು ವರದಿಯಾಗಿದೆ. ಆದರೂ ಅದು ತೀವ್ರವಾಗಿಲ್ಲ. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಟೆಸ್ಲಾ ನಿರಾಕರಿಸಿದೆ.

2021 ಅಥವಾ 2022ರಲ್ಲಿ ಟೆಕ್ಸಾಸ್ ಕಾರ್ಖಾನೆಯಲ್ಲಿ ಯಾವುದೇ ಇತರ ರೋಬೋಟ್- ಸಂಬಂಧಿತ ಹಲ್ಲೆ, ಗಾಯಗಳು ವರದಿಯಾಗಿಲ್ಲ. ಆದರೂ ಈ ವರದಿಯಿಂದಾಗಿ, ಸುರಕ್ಷತಾ ಲೋಪ ಬಯಲಾಗಿದೆ. US ಆಕ್ಯುಪೇಷನಲ್ ಸೇಫ್ಟಿ ಆಂಡ್ ಹೆಲ್ತ್ ಅಡ್ಮಿನಿಸ್ಟ್ರೇಷನ್ (OSHA) ಗೆ ಸಲ್ಲಿಸಿದ ಗಾಯದ ವರದಿಗಳು ಗಿಗಾ ಟೆಕ್ಸಾಸ್‌ನಲ್ಲಿ ಹೆಚ್ಚಿನ ಗಾಯದ ಪ್ರಮಾಣವನ್ನು ಬಹಿರಂಗಪಡಿಸಿವೆ. ಕಳೆದ ವರ್ಷ ಸುಮಾರು 21 ಕಾರ್ಮಿಕರಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಆಟೋಮೋಟಿವ್ ಉದ್ಯಮದಲ್ಲಿ 30 ಕಾರ್ಮಿಕರಲ್ಲಿ ಒಬ್ಬರ ಸರಾಸರಿ ಗಾಯದ ಪ್ರಮಾಣಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಪ್ರಸ್ತುತ ಮತ್ತು ಹಿಂದಿನ ಟೆಸ್ಲಾ ಕೆಲಸಗಾರರು ಕಂಪನಿಯು ಆಗಾಗ್ಗೆ ನಿರ್ಮಾಣ, ನಿರ್ವಹಣೆ ಮತ್ತು ಕಾರ್ಯಾಚರಣೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಮತ್ತು ಉದ್ಯೋಗಿಗಳನ್ನು ಅಪಾಯಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 2022ರಲ್ಲಿ, ನೀರಿನಲ್ಲಿ ಮುಳುಗಿದ-ಕರಗಿದ-ಅಲ್ಯೂಮಿನಿಯಂ ಘಟನೆಯು ಎರಕ ಹೊಯ್ದ ಪ್ರದೇಶದಲ್ಲಿ ಸ್ಫೋಟಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಸೋನಿಕ್ ಬೂಮ್ ತರಹದ ಶಬ್ದವುಂಟಾಯಿತು ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ: Gaganayaan Mission: ಬಾಹ್ಯಾಕಾಶಕ್ಕೆ ತೆರಳಲಿದೆ ‘ವ್ಯೋಮಿತ್ರ’ ಲೇಡಿ ರೋಬೋಟ್, ಇದು ಗಗನಯಾನ ಮಿಷನ್ ವಿಶೇಷ!

Exit mobile version