ಸ್ಯಾನ್‌ಫ್ರಾನ್ಸಿಸ್ಕೋ: ಬಹು ನಿರೀಕ್ಷಿತ ಎಐ ಡೇ ವೇಳೆ, ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ (Elon Musk) ಅವರು ಹ್ಯೂಮನಾಯ್ಡ್ ರೋಬೋಟ್ ಆಪ್ಟಿಮಸ್ ಅನ್ನು ಪ್ರದರ್ಶನ ಮಾಡುವ ಸಾಧ್ಯತೆ ಇದೆ. ತಮ್ಮ ಕಾರು ಉದ್ಯಮಕ್ಕಿಂತ ರೋಬೋಟ್ ಉದ್ಯಮವು ಹೆಚ್ಚು ಮೌಲ್ಯಯುತ ಎಂದು ಈ ಹಿಂದೆ ಎಲಾನ್ ಮಸ್ಕ್ ಹೇಳಿದ್ದರು. ಹಾಗಾಗಿ, ಹೂಡಿಕೆದಾರರು, ಗ್ರಾಹಕರು ಸೇರಿದಂತೆ ಹಲವರು ಟೆಸ್ಲಾ ಕಂಪನಿಯ ಈ ಆಪ್ಟಿಮಸ್ ರೋಬೋಟ್‌ನ ಪ್ರಯೋಗ ಮಾದರಿಯನ್ನು ಎದುರು ನೋಡುತ್ತಿದ್ದಾರೆ.
ಎಐ ಡೇ ವೇಳೆ ಎಲಾನ್ ಮಸ್ಕ್ ಅವರು ಸೆಲ್ಫ್ ಡ್ರೈವಿಂಗ್ ಟೆಕ್ನಾಲಜಿ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ. ಕೆಲವು ತಿಂಗಳ ಹಿಂದೆ ಎಲಾನ್ ಮಸ್ಕ್ ಅವರು ಮಾತನಾಡುತ್ತಾ, ಪೂರ್ಣ ಪ್ರಮಾಣದ ಸೆಲ್ಫ್ ಡ್ರೈವಿಂಗ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸದೇ ಹೋದರೆ, ಟೆಸ್ಲಾ ಜಗತ್ತಿನ ಅತಿ ಹೆಚ್ಚು ಮೌಲ್ಯಯುತ ಕಂಪನಿ ಎಂಬುದಕ್ಕೆ ಅರ್ಥವೇ ಇರುವುದಿಲ್ಲ ಎಂದಿದ್ದರು. ತಾಂತ್ರಿಕ ಅಡ್ಡಿಗಳು ಹಾಗೂ ಶಾಸನಾತ್ಮಕ ತೊಂದರೆಗಳಿಂದಾಗಿ ಸೆಲ್ಫ್ ಡ್ರೈವಿಂಗ್ ಟೆಕ್ನಾಲಜಿಯನ್ನು ಜಾರಿಗೊಳಿಸುವುದು ಇನ್ನೂ ಟೆಸ್ಲಾಗೆ ಸಾಧ್ಯವಾಗಿಲ್ಲ.
ಟೆಸ್ಲಾ ಕಂಪನಿಯ ಹ್ಯೂಮನಾಯ್ಡ್ ರೋಬೋಟ್ ಬಗೆಗಿನ ಯೋಜನೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಎಐ ಡೇ ಆಚರಣೆ ವೇಳೆ ಎಲಾನ್ ಮಸ್ಕ್ ಅವರು ಅನಾವರಣಗೊಳಿಸಿದ್ದರು. ಆದರೆ, ಈ ವರ್ಷ ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವು ವಿಳಂಬವಾಗಿದೆ. ಮುಂದಿನ ವರ್ಷ ಉತ್ಪಾದನೆ ಕಾಣಲಿರುವ ಹ್ಯೂಮನಾಯ್ಡ್ ರೋಬೋಟ್ ಪ್ರಯೋಗ ಮಾದರಿ ಸಿದ್ಧಪಡಿಸಲು ಉಂಟಾಗಿರುವ ವಿಳಂಬವೇ ಇದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಮೆಟಾಲಿಕ್ ರೋಬೋಟಿಕ್ ಕೈಗಳು ಹೃದಯದ ಆಕಾರದಲ್ಲಿರುವ ಇಮೇಜ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅನಾವರಣ ಮಾಡುವ ಮೂಲಕ ಟೆಸ್ಲಾ ಜನರಲ್ಲಿ ಕುತೂಹಲ ಹೆಚ್ಚಿಸಿತ್ತು. ಆದರೆ ವಿವಿಧ ವಸ್ತುಗಳನ್ನು ಕುಶಲತೆಯಿಂದ ನಿರ್ವಹಿಸಬಲ್ಲ ಮಾನವರಂತಹ, ಬಹುಮುಖ ಕೈಗಳನ್ನು ನಿರ್ಮಿಸುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ರೊಬೊಟಿಕ್ಸ್ ಪ್ರೊಫೆಸರ್ ಹೆನಿ ಬೆನ್ ಅಮೋರ್ ಹೇಳಿದ್ದಾರೆ. ಇದೇ ರೀತಿಯ ಅಭಿಪ್ರಾಯವನ್ನು ಹಲವು ಸಂಶೋಧಕರು, ವಿಜ್ಞಾನಿಗಳು ಹೊಂದಿದ್ದಾರೆ. ಈ ಎಲ್ಲ ಸವಾಲುಗಳನ್ನು ಟೆಸ್ಲಾ ಹೇಗೆ ಮೆಟ್ಟಿ ನಿಲ್ಲಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | ಟೆಸ್ಲಾದಲ್ಲಿ 10,000 ಉದ್ಯೋಗ ಕಡಿತಕ್ಕೆ ಸಿಇಒ ಎಲಾನ್ ಮಸ್ಕ್ ಚಿಂತನೆ, ಅಮೆರಿಕದ ಆರ್ಥಿಕತೆ ಹದಗೆಟ್ಟಿದೆ ಎಂದ ಉದ್ಯಮಿ